ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಾಸಾಕಿ ಅಣುಬಾಂಬ್‌ ದಾಳಿ: ಸಂತ್ರಸ್ತರ ಮಕ್ಕಳಿಗೆ ವೈದ್ಯಕೀಯ ಪರಿಹಾರ ಸಾಧ್ಯವಿಲ್ಲ

Last Updated 12 ಡಿಸೆಂಬರ್ 2022, 14:37 IST
ಅಕ್ಷರ ಗಾತ್ರ

ಟೋಕಿಯೊ(ಎಪಿ): ‘ನಮ್ಮ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಬೇಕು’ ಎಂದು ಕೋರಿನಾಗಾಸಾಕಿ ಅಣುಬಾಂಬ್‌ ದಾಳಿಯ ಸಂತ್ರಸ್ತರ ಎರಡನೇ ತಲೆಮಾರಿನ 28 ಮಂದಿ ಸಲ್ಲಿಸಿದ್ದ ಅರ್ಜಿಯನ್ನುನಾಗಾಸಾಕಿ ಜಿಲ್ಲಾ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ. 2017ರಲ್ಲಿಯೇ ಇವರು ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ, ‘ವಂಶವಾಹಿ ವಿಕಿರಣ ಪರಿಣಾಮವು ದೃಢಪಟ್ಟಿಲ್ಲ’ ಎಂದು ಕಾರಣ ನೀಡಿ ತಿರಸ್ಕರಿಸಿದೆ.

ಜಪಾನ್‌ ಸರ್ಕಾರವು ಅಣುಬಾಂಬ್‌ ದಾಳಿ ಸಂತ್ರಸ್ತರಿಗಾಗಿ ವೈದ್ಯಕೀಯ ವೆಚ್ಚವನ್ನು ಭರಿಸುತ್ತಿದೆ. ಆದ್ದರಿಂದ, ನಮ್ಮನ್ನೂ ಸಂತ್ರಸ್ತರು ಎಂದು ಪರಿಗಣಿಸಿ ನಮ್ಮ ವೈದ್ಯಕೀಯ ವೆಚ್ಚವನ್ನೂ ಭರಿಸಬೇಕು ಎಂದು ಅಣುಬಾಂಬ್‌ ದಾಳಿ ಸಂತ್ರಸ್ತರ ಎರಡನೇ ಪೀಳಿಗೆಯವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇಬ್ಬರು ಅರ್ಜಿದಾರರು 2017ರಿಂದ 2022ರ ಕಾಲಾವಧಿಯಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ.

‘ಸಂತ್ರಸ್ತರ ಎರಡನೇ ಪೀಳಿಗೆಯವರಿಗೆ ವಿಕಿರಣದ ಪರಿಣಾಮ ಇಲ್ಲ ಎನ್ನುವಂತಿಲ್ಲ. ಆದರೆ, ಇದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಆದ್ದರಿಂದ ಸರ್ಕಾರವು ಇವರ ವೈದ್ಯಕೀಯ ವೆಚ್ಚ ಭರಿಸಬೇಕಿಲ್ಲ. ಇದು ಅಸಾಂವಿಧಾನಿಕವಲ್ಲ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇದೇ ರೀತಿಯ ಹಲವು ಅರ್ಜಿಗಳು ಹಿರೋಶಿಮಾ ಜಿಲ್ಲಾ ನ್ಯಾಯಾಲಯದಲ್ಲೂ ಇವೆ. ಮುಂದಿನ ವರ್ಷ ಈ ಅರ್ಜಿಗಳ ಕುರಿತ ತೀರ್ಪು ಹೊರಬರುವ ನಿರೀಕ್ಷೆ ಇದೆ.

ಸಂತ್ರಸ್ತರ ಮಕ್ಕಳ ಗೋಳು

‘ಅಣು ವಿಕಿರಣದ ಪರಿಣಾಮಗಳು ನಮ್ಮ ಮೇಲೂ ಆಗಿವೆ. ನಮಗೂ ಹಲವು ರೀತಿಯ ಕ್ಯಾನ್ಸರ್‌ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿವೆ. ನಮ್ಮಂಥವರು ಅಂದಾಜು 3 ಲಕ್ಷದಿಂದ 5 ಲಕ್ಷದವರೆಗೆ ಇದ್ದೇವೆ’ ಎನ್ನುತ್ತಾರೆ50ರಿಂದ 70 ವಯಸ್ಸಿನ ಅರ್ಜಿದಾರರು.

‘ನಮಗೆ ಪರಿಹಾರ ನೀಡದಿರುವುದು ಸಂವಿಧಾನ ನೀಡಿರುವ ಸಮಾನತೆಯ ಉಲ್ಲಂಘನೆ. ಆದ್ದರಿಂದ ನಮಗೆ ತಲಾ ಸುಮಾರು ₹60 ಸಾವಿರ (730 ಡಾಲರ್‌) ಪರಿಹಾರ ನೀಡಬೇಕು’ ಎನ್ನುವುದು ಅರ್ಜಿದಾರರ ಮನವಿ.

ಸರ್ಕಾರದ ವಾದ

ಸಂತ್ರಸ್ತರಿಗೆ ಹಾಗೂ ಅಣು ಬಾಂಬ್‌ ಸ್ಫೋಟದ ಸಂದರ್ಭದಲ್ಲಿ ಗರ್ಭದಲ್ಲಿದ್ದವರು ವಿಕಿರಣದ ಪರಿಣಾಮಗಳಿಗೆ ಒಳಗಾಗಿದ್ದಾರೆ ಎಂಬ ಪ್ರಮಾಣಪತ್ರ ಇರುವವರಿಗೆ ಮಾತ್ರ ಸರ್ಕಾರವು ಕ್ಯಾನ್ಸರ್‌ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ವೈದ್ಯಕೀಯ ವೆಚ್ಚ ಭರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT