ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ಸ್ಪೇನ್‌ನಲ್ಲಿ 42 ಸಾವಿರ ಹೊಸ ಪ್ರಕರಣ

Last Updated 23 ಜನವರಿ 2021, 3:53 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌: ಸ್ಪೇನ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 42,885 ಜನರಲ್ಲಿ ಕೋವಿಡ್–19 ದೃಢಪಟ್ಟಿದೆ. ಇದೇ ವೇಳೆ 400 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಸ್ಪೇನ್‌ನಲ್ಲಿ ಇದುವರೆಗೆ ವರದಿಯಾದ ಸೋಂಕು ಪ್ರಕರಣಗಳ ಸಂಖ್ಯೆ 24,99,560ಕ್ಕೆ ಏರಿದ್ದು, ಸಾವಿನ ಸಂಖ್ಯೆ 55,441ಕ್ಕೆ ತಲುಪಿದೆ.

ಪ್ರಕರಣಗಳು ನಿಧಾನವಾಗಿ ಏರುತ್ತಿರುವುದನ್ನು ಪರಿಗಣಿಸಿ ದೇಶದ 17 ಸ್ವಾಯತ್ತ ಪ್ರದೇಶಗಳಲ್ಲಿ ಹೇರಲಾಗಿರುವ ನಿಯಂತ್ರಣ ಕ್ರಮಗಳನ್ನು ಮುಂದುವರಿಸಲಾಗಿದೆ. ಮ್ಯಾಡ್ರಿಡ್‌ ಪ್ರದೇಶದಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6ರ ವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅನಿವಾರ್ಯವಲ್ಲದ ವ್ಯವಹಾರಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳು ರಾತ್ರಿ 9ರ ಒಳಗೆ ಮುಚ್ಚಬೇಕಾಗುತ್ತದೆ. ಇದೇ ರೀತಿ ಟೇಬಲ್‌ವೊಂದರಲ್ಲಿ ಕುಳಿತುಕೊಳ್ಳುವವರ ಸಂಖ್ಯೆಯನ್ನು 6 ರಿಂದ 4ಕ್ಕೆ ಇಳಿಸಲಾಗಿದೆ. ಮನೆಯಿಂದ ಹೊರಗೆ ನಡೆಯುವ ಎಲ್ಲ ರೀತಿಯ ಸೆಭೆಗಳನ್ನು ಫೆಬ್ರುವರಿ 8ರ ವರೆಗೆ ನಿರ್ಬಂಧಿಸಲಾಗಿದೆ.

ಉತ್ತರ ಬಾಸ್ಕ್ಯೂ ಪ್ರಾಂತ್ಯದ ಪ್ರಾದೇಶಿಕ ಆಡಳಿತವು ಪಟ್ಟಣಗಳ ನಡುವಿನ ಸಂಚಾರವನ್ನು ನಿರ್ಬಂಧಿಸಿರುವುದಾಗಿ ಘೋಷಿಸಿದೆ.

ಹತ್ತು ಕೋಟಿಯತ್ತ..
ಜಾಗತಿಕ ಕೋವಿಡ್–19 ಸೋಂಕಿತರ ಸಂಖ್ಯೆಯು ಹತ್ತುಕೋಟಿಯತ್ತ ಸಾಗಿದ್ದು, ಇದುವರೆಗೆ 9 ಕೋಟಿ 87 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ ಎಂದು ವರ್ಲ್ಡೋಮೀಟರ್‌ ವೆಬ್‌ಸೈಟ್‌ ವರದಿ ಮಾಡಿದೆ.

ವೆಬ್‌ಸೈಟ್‌ ನೀಡಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 6.52 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ 15,953 ಮಂದಿ ಮೃತಪಟ್ಟಿದ್ದು, 4,38,688 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಚೇತರಿಸಿಕೊಂಡವರ ಸಂಖ್ಯೆ 7 ಕೋಟಿ ದಾಟಿದ್ದು, ಸಾವಿನ ಸಂಖ್ಯೆ 21 ಲಕ್ಷಕ್ಕೇರಿದೆ. ಇನ್ನೂ 2 ಕೋಟಿ 57 ಲಕ್ಷ ಸಕ್ರಿಯ ಪ್ರಕರಣಗಳು ಇವೆ.

ಅತಿಹೆಚ್ಚು (2.53 ಕೋಟಿ) ಪ್ರಕರಣಗಳು ವರದಿಯಾಗಿರುವ ಅಮೆರಿದಲ್ಲಿ ಈವರೆಗೆ 1.52 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 4.24 ಲಕ್ಷಕ್ಕೇರಿದೆ. ಇನ್ನೂ 97 ಲಕ್ಷ ಸಕ್ರಿಯ ಪ್ರಕರಣಗಳು ಇವೆ. ಭಾರತದಲ್ಲಿ 1.06 ಕೋಟಿ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 1.03 ಕೋಟಿ ಜನರು ಗುಣಮುಖರಾಗಿದ್ದಾರೆ. 1.53 ಲಕ್ಷ ಸೋಂಕಿತರು ಮೃತಪಟ್ಟಿದ್ದರೆ, ಇನ್ನೂ 1.87 ಲಕ್ಷ ಸಕ್ರಿಯ ಪ್ರಕರಣಗಳಿವೆ.

ಉಳಿದಂತೆ ಫ್ರಾನ್ಸ್‌ನಲ್ಲಿ 27 ಲಕ್ಷ, ಇಂಗ್ಲೆಂಡ್‌ನಲ್ಲಿ 18 ಲಕ್ಷ, ಬ್ರೆಜಿಲ್‌ನಲ್ಲಿ 9 ಲಕ್ಷ, ಬೆಲ್ಜಿಯಂನಲ್ಲಿ 6 ಲಕ್ಷ, ರಷ್ಯಾ ಹಾಗೂ ಇಟಲಿಯಲ್ಲಿ ತಲಾ 5 ಲಕ್ಷ, ಸರ್ಬಿಯಾದಲ್ಲಿ 3 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT