ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 world update | ಹಾಂಗ್‌‌ಕಾಂಗ್: ಗುಣಮುಖನಾಗಿದ್ದ ವ್ಯಕ್ತಿಗೆ ಸೋಂಕು

Last Updated 25 ಆಗಸ್ಟ್ 2020, 15:30 IST
ಅಕ್ಷರ ಗಾತ್ರ

ವಾಷಿಂಗ್ಟನ್:ಕೋವಿಡ್–19ನಿಂದ ಗುಣಮುಖನಾಗಿದ್ದ 33 ವರ್ಷದ ವ್ಯಕ್ತಿಯೊಬ್ಬರಿಗೆ ಮತ್ತೊಮ್ಮೆ ಸೋಂಕು ತಗುಲಿರುವ ಪ್ರಕರಣ ಹಾಂಗ್‌ಕಾಂಗ್‌ನಲ್ಲಿ ವರದಿಯಾಗಿದೆ. ಈ ವ್ಯಕ್ತಿ ಸ್ಪೇನ್‌ ಪ್ರವಾಸ ಮುಗಿಸಿ ಆಗಸ್ಟ್‌ ಮಧ್ಯದಲ್ಲಿವಾಪಸ್‌ ಆಗಿದ್ದರು.

ಈ ವ್ಯಕ್ತಿಗೆ ಮೊದಲ ಸಲ ಸೋಂಕು ತಗುಲಿದ್ದಾಗ ಗುಣಲಕ್ಷಣ ಗೋಚರಿಸಿದ್ದವು. ಆದರೆ, ಈ ಬಾರಿ ಯಾವುದೇ ಗುಣಲಕ್ಷಣಗಳು ಕಂಡುಬಂದಿಲ್ಲ ಎಂದು ಹಾಂಗ್‌ ಕಾಂಗ್‌ ವಿಶ್ವವಿದ್ಯಾಲಯ ತಿಳಿಸಿರುವುದಾಗಿ ಸಿಎನ್‌ಎನ್‌ ವರದಿ ಮಾಡಿದೆ.

‘ವ್ಯಕ್ತಿಗೆ ಮೊದಲ ಸಲ ಕೋವಿಡ್–19 ಕಾಣಿಸಿಕೊಂಡ 4.5 ತಿಂಗಳ ಬಳಿಕ ಮತ್ತೊಮ್ಮೆ ಸೋಂಕು ಪತ್ತೆಯಾಗಿದೆ. ಇದು ರೋಗಿಯಲ್ಲಿ ವೈರಸ್‌ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಕಡಿಮೆ ಇದೆ ಎಂಬುದನ್ನು ತೋರುತ್ತದೆ’ ಎಂದು ವಿವಿಯ ಡಾ.ಕೆಲ್ವಿನ್‌ ಕೈ ವಾಂಗ್‌ ತೋ ಹೇಳಿದ್ದಾರೆ.

ಸೋಂಕು ಪತ್ತೆಯಾಗಿರುವುದರ ಅರ್ಥ ಲಸಿಕೆಯು ನಿಷ್ಪ್ರಯೋಜಕವೆಂದಲ್ಲ. ಲಸಿಕೆಯಿಂದ ಲಭಿಸುವ ರೋಗನಿರೋಧಕ ಸಾಮರ್ಥ್ಯವು ಸ್ವಾಭಾವಿಕ ಸೋಂಕಿನಿಂದಾಗುವ ರೋಗಕ್ಕಿಂತ ಭಿನ್ನವಾಗಿರುತ್ತದೆ ಎಂದೂ ತೋ ತಿಳಿಸಿದ್ದಾರೆ.

ಹಾಂಗ್‌ಕಾಂಗ್‌ನಲ್ಲಿ ಇದುವರೆಗೆ ಒಟ್ಟು4,692 ಸೋಂಕು ಪ್ರಕರಣಗಳು ವರದಿಯಾಗಿವೆ. 77 ಮಂದಿ ಮೃತಪಟ್ಟಿದ್ದಾರೆ.

ಜಗತ್ತಿನಾದ್ಯಂತ ಒಟ್ಟು 2.36 ಕೋಟಿ ಸೋಂಕಿತರು
ಜಗತ್ತಿನಾದ್ಯಂತ ಇದುವರೆಗೆ ಒಟ್ಟು 2,36,83,592 ಜನರಿಗೆ ಕೋವಿಡ್–19 ಸೋಂಕು ದೃಢಪಟ್ಟಿದ್ದು, ಇದರಲ್ಲಿ 1,53,62,813 ಸೋಂಕಿತರು ಗುಣಮುಖರಾಗಿದ್ದಾರೆ. 8,14,008 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ಸಂಪನ್ಮೂಲ ಕೇಂದ್ರ ಮಾಹಿತಿ ನೀಡಿದೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಈ ವರೆಗೆ 57,42,308 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ 20,20,774 ಸೋಂಕಿತರು ಗುಣಮುಖರಾಗಿದ್ದು, 1,77,312 ಮಂದಿ ಮೃತಪಟ್ಟಿದ್ದಾರೆ.

ಅಮೆರಿಕ ನಂತರ ಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿರುವ ಬ್ರೆಜಿಲ್‌ನಲ್ಲಿ 36,22,861 ಪ್ರಕರಣಗಳು ಬೆಳಕಿಗೆ ಬಂದಿವೆ. 29,76,256 ಸೋಂಕಿತರು ಗುಣಮುಖರಾಗಿದ್ದು, 1,15,309 ಜನರು ಮೃತಪಟ್ಟಿದ್ದಾರೆ.

ರಷ್ಯಾದಲ್ಲಿ 9,63,655, ದಕ್ಷಿಣ ಆಫ್ರಿಕಾದಲ್ಲಿ 6,11,450, ಪೆರುವಿನಲ್ಲಿ 6,00,438, ಮೆಕ್ಸಿಕೋದಲ್ಲಿ 5,63,705, ಸ್ಪೇನ್‌ನಲ್ಲಿ4,05,436, ಚಿಲಿಯಲ್ಲಿ 3,99,568,ಇಂಗ್ಲೆಂಡ್‌ನಲ್ಲಿ 3,28,628 ಪ್ರಕರಣಗಳು ವರದಿಯಾಗಿವೆ.

ಜಗತ್ತಿನಲ್ಲೇ ಮೊದಲು ಸೋಂಕು ಕಾಣಿಸಿಕೊಂಡ ಚೀನಾದಲ್ಲಿ ಈ ವರೆಗೆ 89,738 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 4,711 ಸೋಂಕಿತರು ಮೃತಪಟ್ಟಿದ್ದು, 84,058 ಗುಣಮುಖರಾಗಿದ್ದಾರೆ. ಇನ್ನು ಕೇವಲ 969 ಸಕ್ರಿಯ ಪ್ರಕರಣಗಳು ಇವೆ ಎಂದು ವರದಿಯಾಗಿದೆ.

ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ 2,93,711 ಪ್ರಕರಣಗಳು ದೃಢಪಟ್ಟಿದ್ದು, 2,78,425 ಸೋಂಕಿತರು ಗುಣಮುಖರಾಗಿದ್ದಾರೆ. 6,255 ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ಭಾರತದಲ್ಲಿ ಕೋವಿಡ್–19
ಭಾರತದಲ್ಲಿ ಆಗಸ್ಟ್‌ 25ರ ವರೆಗೆ ಒಟ್ಟು 31,67,323ಪ್ರಕರಣಗಳು ವರದಿಯಾಗಿವೆ. ಈ ಪೈಕಿ 24,04,585 ಮಂದಿ ಗುಣಮುಖರಾಗಿದ್ದಾರೆ. 58,390 ಸೋಂಕಿತರು ಮೃತಪಟ್ಟಿದ್ದು, 7,04,348 ಸಕ್ರಿಯ ಪ್ರಕರಣಗಳಿವೆ ಎಂದುಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕಳೆದ ವಾರ 39,240 ಸಾವು: ಡಬ್ಲ್ಯೂಎಚ್‌ಒ
ಕಳೆದ ಒಂದು ವಾರದ ಅವಧಿಯಲ್ಲಿ ಜಗತ್ತಿನಾದ್ಯಂತ ಒಟ್ಟು 39,240 ಜನರು ಕೋವಿಡ್–19 ಸೋಂಕಿತರು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ತಿಳಿಸಿದೆ. ಕಳೆದ ವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶೇ.4 ರಷ್ಟು ಇಳಿಕೆಯಾಗಿದೆ ಎಂದು ಹೇಳಿದೆ.

‘ಸುಮಾರು 17 ಲಕ್ಷ ಹೊಸ ಪ್ರಕರಣಗಳು ಮತ್ತು 39 ಸಾವಿರ ಸಾವು ಕಳೆದ ವಾರ ಸಂಭವಿಸಿದೆ. ಹೊಸ ಪ್ರಕರಣಗಳ ಪ್ರಮಾಣ ಶೇ.4ರಷ್ಟು ಮತ್ತು ಸಾವಿನ ಪ್ರಮಾಣ ಶೇ.12 ರಷ್ಟು ಇಳಿಕೆಯಾದಂತಾಗಿದೆ’ ಎಂದು ಮಾಹಿತಿ ನೀಡಿದೆ.

ದಕ್ಷಿಣ ಕೊರಿಯಾದಲ್ಲಿ ಮತ್ತೆ ಶಾಲೆಗಳು ಬಂದ್
ದಕ್ಷಿಣ ಕೊರಿಯಾದಲ್ಲಿ ಸತತ 12ನೇ ದಿನವೂ ಕೋವಿಡ್‌–19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದಾಗಿ ಮತ್ತೆ ಶಾಲೆಗಳನ್ನು ಮುಚ್ಚಲಾಗಿದೆ.

ಕಳೆದ 2 ವಾರಗಳಲ್ಲಿ ಸಿಯೊಲ್‌ ನಗರ ವ್ಯಾಪ್ತಿಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳೂ ಸೇರಿಕನಿಷ್ಟ 193 ಜನರಿಗೆ ಸೋಂಕು ತಗುಲಿದೆ ಎಂದುಶಿಕ್ಷಣ ಸಚಿವ ಯೋ ಯೌನ್‌–ಹಾಯಿ ಮಂಗಳವಾರ ತಿಳಿಸಿದ್ದಾರೆ.

ಶಿಶುವಿಹಾರಗಳಲ್ಲಿ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸೆಪ್ಟೆಂಬರ್‌ 11ರ ವರೆಗೆ ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುವುದು. ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿಗಳು ಶಾಲೆಗೆ ತೆರಳಲಿದ್ದಾರೆ. ಹಾಗಾಗಿ ರಾಷ್ಟ್ರೀಯ ಕಾಲೇಜು ಪರೀಕ್ಷೆಗಳಿಗೆ ಅವರಿಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಮಾಸ್ಕ್ ಧರಿಸುವಂತೆ ಸೂಚಿಸಲಾಗುವುದು: ಬೋರಿಸ್
ಇಂಗ್ಲೆಂಡ್‌ನಲ್ಲಿ ಮುಂಬರುವ ವಾರಗಳಲ್ಲಿ ಶಾಲೆಗಳನ್ನು ಮತ್ತೆ ತೆರೆಯುವ ಚಿಂತನೆಗಳು ನಡೆದಿವೆ. ಇದೇವೇಳೆ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು,ಕೋವಿಡ್–19 ಹರಡುವಿಕೆಯನ್ನು ನಿಯಂತ್ರಿಸಲು ಮಾಸ್ಕ್‌ ಧರಿಸುವುದು ಅಗತ್ಯವೆಂದು ವೈದ್ಯಕೀಯ ಸಾಕ್ಷಗಳು ಸೂಚಿಸಿದರೆ ಶಾಲೆಗಳಲ್ಲಿ ಮಾಸ್ಕ್‌ ಧರಿಸುವಂತೆ ಸರ್ಕಾರವು ಸೂಚನೆ ನೀಡಲಿದೆ ಎಂದು ಹೇಳಿದ್ದಾರೆ.

ಸ್ಕಾಟ್ಲೆಂಡ್‌ನಲ್ಲಿ 12 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ನಿರ್ದೇಶನ ನೀಡಲಾಗಿದೆ. ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಒತ್ತಾಯ ಕೇಳಿ ಬಂದಿದೆ. ಹೀಗಾಗಿ ಇಂಗ್ಲೆಂಡ್‌ನಲ್ಲಿ ಮಾಸ್ಕ್‌ ಬಳಕೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಒತ್ತಡವನ್ನು ಹೆಚ್ಚಿಸಿದೆ.

ಇಂಡೋನೇಷಿಯಾದಲ್ಲಿ 2,400 ಹೊಸ ಪ್ರಕರಣ
ಇಂಡೋನೇಷಿಯಾದಲ್ಲಿ ಹೊಸದಾಗಿ 2,447 ಕೋವಿಡ್‌–19 ಪ್ರಕರಣಗಳು ಮಂಗಳವಾರ ವರದಿಯಾಗಿವೆ. ಇದರಿಂದಾಗಿ ಇಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,57,859ಕ್ಕೆ ಏರಿಕೆಯಾಗಿದೆ.

ಹೊಸದಾಗಿ 99 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 6,858ಕ್ಕೆ ಏರಿಕೆಯಾಗಿದೆ. ಆಗ್ನೇಯ ಏಷ್ಯಾ ಪ್ರಾಂತ್ಯದಲ್ಲಿ ಇದು ಹೆಚ್ಚು ಸಾವು ಪ್ರಕರಣಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT