ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಖಿತ ಒಪ್ಪಂದವನ್ನು ಚೀನಾ ನಿರ್ಲಕ್ಷಿಸಿದ್ದರಿಂದಲೇ ಪ್ರಕ್ಷುಬ್ಧ ಸ್ಥಿತಿ: ಜೈಶಂಕರ್

india-china
Last Updated 12 ಫೆಬ್ರುವರಿ 2022, 6:08 IST
ಅಕ್ಷರ ಗಾತ್ರ

ನವದೆಹಲಿ: ಗಡಿಯಲ್ಲಿ ಸೈನಿಕರ ಜಮಾವಣೆ ಮಾಡಬಾರದು ಎಂಬ ಲಿಖಿತ ಒಪ್ಪಂದವನ್ನು ಚೀನಾ ನಿರ್ಲಕ್ಷಿಸಿದ್ದರಿಂದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಪ್ರಸ್ತುತ ಪ್ರಕ್ಷುಬ್ಧ ಪರಿಸ್ಥಿತಿ ಉದ್ಭವಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಶನಿವಾರ ಹೇಳಿದ್ದಾರೆ.

ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮರಿಸ್ ಪೇನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್, ದೊಡ್ಡ ದೇಶವು ಲಿಖಿತ ಬದ್ಧತೆಗಳನ್ನು ಕಡೆಗಣಿಸಿದಾಗ ಅದು ಇಡೀ ಅಂತರರಾಷ್ಟ್ರೀಯ ಸಮುದಾಯಕ್ಕೆ ಕಾನೂನು ಕಾಳಜಿಯ ವಿಷಯವಾಗುತ್ತದೆ ಎಂದು ಹೇಳಿದರು. ಭಾರತ ಮತ್ತು ಚೀನಾ ಸೇನೆಗಳ ನಡುವಿನ ಪೂರ್ವ ಲಡಾಖ್ ಗಡಿಯ ಘರ್ಷಣೆ ಕುರಿತ ಪ್ರಶ್ನೆಗೆ ಉತ್ತರವಾಗಿ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ನಡೆದ ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತ-ಚೀನಾ ಗಡಿ ವಿವಾದದ ವಿಷಯ ಚರ್ಚೆಗೆ ಬಂದಿದೆಯೇ ಎಂಬ ಪ್ರಶ್ನೆಗೆ ಜೈಶಂಕರ್, ‘ಹೌದು’ಎಂದು ಉತ್ತರಿಸಿದರು.

‘ಹೌದು, ನಾವು ‌ಕ್ವಾಡ್ ಸಭೆಯಲ್ಲಿ ಭಾರತ-ಚೀನಾ ಸಂಬಂಧಗಳ ಕುರಿತು ಚರ್ಚೆ ನಡೆಸಿದ್ದೇವೆ. ಏಕೆಂದರೆ, ಇದು ನಮ್ಮ ನೆರೆಹೊರೆಯಲ್ಲಿ ಏನಾಗುತ್ತಿದೆ ಎಂಬುದರ ಕುರಿತು ನಾವು ಪರಸ್ಪರ ವಿವರಿಸುವುದರ ಭಾಗವಾಗಿದೆ. ಇದು ಬಹಳಷ್ಟು ದೇಶಗಳಿಗೆ ಮಹತ್ವದ ವಿಷಯವಾಗಿದೆ. ಅದರಲ್ಲೂ ವಿಶೇಷವಾಗಿ ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳಿಗೆ ಈ ಮಾಹಿತಿ ಬಹಳ ಮುಖ್ಯ’ಎಂದು ಅವರು ಹೇಳಿದರು.

ಗಡಿಯಲ್ಲಿ ಸೇನೆಯನ್ನು ಜಮಾವಣೆ ಮಾಡದಂತೆ ಭಾರತದ ಜೊತೆಗಿನ 2020ರ ಲಿಖಿತ ಒಪ್ಪಂದಗಳನ್ನು ಚೀನಾ ಕಡೆಗಣಿಸಿದ್ದರಿಂದ ಎಲ್‌ಎಸಿನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉದ್ಭವಿಸಿದೆ ಎಂದು ಅವರು ಹೇಳಿದರು. ‘ಆದ್ದರಿಂದ, ಒಂದು ದೊಡ್ಡ ದೇಶವು ಲಿಖಿತ ಬದ್ಧತೆಗಳನ್ನು ನಿರ್ಲಕ್ಷಿಸಿದಾಗ, ಅದು ಇಡೀ ಅಂತರರಾಷ್ಟ್ರೀಯ ಸಮುದಾಯಕ್ಕೆ ಕಾನೂನುಬದ್ಧ ಕಾಳಜಿಯ ಸಮಸ್ಯೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಹೇಳಿದರು.

ಪ್ಯಾಂಗೊಂಗ್ ಸರೋವರದ ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾದ ಮಿಲಿಟರಿಗಳ ನಡುವಿನ ಪೂರ್ವ ಲಡಾಖ್‌ನ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿತು. ಎರಡೂ ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸೇನೆ, ಭಾರೀ ಶಸ್ತ್ರಾಸ್ತ್ರಗಳ ಜಮಾವಣೆ ಮೂಲಕ ಯುದ್ಧದ ವಾತಾವರಣ ಏರ್ಪಟ್ಟಿತ್ತು.

ಬಳಿಕ ನಡೆದ ಸರಣಿ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ಪರಿಣಾಮವಾಗಿ, ಉಭಯ ದೇಶಗಳು ಈ ಫೆಬ್ರುವರಿಯಲ್ಲಿ ಪ್ಯಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳಲ್ಲಿ ಹಾಗೂ ಕಳೆದ ವರ್ಷ ಆಗಸ್ಟ್‌ನಲ್ಲಿ ಗೋಗ್ರಾ ಪ್ರದೇಶದಲ್ಲಿ ಸೇನೆ ಹಿಂತೆಗೆತ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದವು.

ಈ ಮಧ್ಯೆ, ಜನವರಿ 12 ರಂದು ಭಾರತ ಮತ್ತು ಚೀನಾ ನಡುವೆ 14 ನೇ ಸುತ್ತಿನ ಕಮಾಂಡರ್ ಮಟ್ಟದ ಸಭೆ ನಡೆಯಿತು. ಈ ಸಮಯದಲ್ಲಿ ಪೂರ್ವ ಲಡಾಖ್‌ನಲ್ಲಿ ಬಾಕಿ ಇರುವ ಬಿಕ್ಕಟ್ಟಿನ ಸಮಸ್ಯೆಗಳನ್ನು ಪರಿಹರಿಸಲು ‘ಪರಸ್ಪರ ಸ್ವೀಕಾರಾರ್ಹ ನಿರ್ಣಯ’ವನ್ನು ರೂಪಿಸಲು ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆ ನಡೆಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT