ಸೋಮವಾರ, ಆಗಸ್ಟ್ 2, 2021
23 °C
ಅಮೆರಿಕ ಪ್ರವಾಸದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಪ್ರತಿಪಾದನೆ l ಅಮೆರಿಕದ ನೆರವಿಗೆ ಕೃತಜ್ಞತೆ

ಕೋವಿಡ್‌ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಜೈಶಂಕರ್‌, ಜೇಕ್ ಸಲಿವನ್‌ ಕರೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ‘ಭಾರತ ಮತ್ತು ಅಮೆರಿಕದ ಜನರ ನಡುವಣ ಸಂಬಂಧವು ಕೋವಿಡ್‌ ಹೋರಾಟದಲ್ಲಿ ನೆರವಾಗಿದೆ. ಎರಡೂ ದೇಶಗಳ ಜನರ ನಡುವಣ ಸಂಬಂಧವು, ಎರಡೂ ದೇಶಗಳ ನಡುವಣ ಸಹಕಾರ ಸಂಬಂಧ ಗಟ್ಟಿಗೊಳ್ಳಲು ಕಾರಣವಾಗಿದೆ. ಕೋವಿಡ್ ವಿರುದ್ಧ ಸಮರ್ಥವಾಗಿ ಹೋರಾಡಲು ಈ ಸಹಕಾರ ಮತ್ತಷ್ಟು ಗಟ್ಟಿಗೊಳ್ಳಬೇಕು’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸಲಿವನ್‌ ಹೇಳಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಜೈಶಂಕರ್ ಅವರು ಸಲಿವನ್‌ ಅವರನ್ನು ಭೇಟಿ ಮಾಡಿ, ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಾತುಕತೆಯ ನಂತರ ಇಬ್ಬರು ನಾಯಕರೂ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

‘ಈ ಭೇಟಿಯಲ್ಲಿ ಭಾರತ-ಪೆಸಿಫಿಕ್‌ ಪ್ರದೇಶವನ್ನು ಮುಕ್ತ ಮತ್ತು ಸ್ವತಂತ್ರವಾಗಿ ಇರಿಸುವುದರ ಬಗ್ಗೆ ಇಬ್ಬರು ನಾಯಕರೂ ದೀರ್ಘವಾಗಿ ಚರ್ಚಿಸಿದ್ದಾರೆ. ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಕೊಳ್ಳಲುಯತ್ನಿಸುತ್ತಿರುವ ಚೀನಾದ ಪ್ರಯತ್ನಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಅತಿಕ್ರಮಣದ ಬಗ್ಗೆಯೂ ಮಾತುಕತೆ ನಡೆದಿದ್ದು, ಕ್ವಾಡ್‌ ಒಕ್ಕೂಟದ ಸಹಕಾರವನ್ನು ಬಲಪಡಿಸುವ ಬಗ್ಗೆ ಇಬ್ಬರು ನಾಯಕರು ಸಹಮತ ಸೂಚಿಸಿದ್ದಾರೆ’ ಎಂದು ಸಲಿವನ್‌ ಅವರ ಮಾಧ್ಯಮ ಪ್ರತಿನಿಧಿ ಎಮಿಲಿ ಹಾರ್ನೆ ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್‌ನ ಎರಡನೇ ಅಲೆಯನ್ನು ಎದುರಿಸುವಲ್ಲಿ ಅಮೆರಿಕವು ಭಾರಿ ನೆರವು ನೀಡಿತ್ತು. ಅಮೆರಿಕ ಸರ್ಕಾರ, ಅಮೆರಿಕದ ವಿವಿಧ ರಾಜ್ಯಗಳ ಸರ್ಕಾರಗಳು, ಉದ್ದಿಮೆ ಸಂಸ್ಥೆಗಳು, ನಾಗರಿಕರು ಮತ್ತು ಭಾರತೀಯ ಅಮೆರಿಕನ್ನರು ಭಾರತಕ್ಕೆ ನೆರವಿನ ಹಸ್ತ ಚಾಚಿದ್ದರು. ಈ ಮೂಲಕ ಅಮೆರಿಕದಿಂದ ಈವರೆಗೆ ಅಂದಾಜು ₹36,230 ಕೋಟಿ (5 ಕೋಟಿ ಅಮೆರಿಕನ್ ಡಾಲರ್) ಮೊತ್ತದಷ್ಟು ನೆರವು ದೊರೆತಿದೆ. ನೆರವು ನೀಡಿದಕ್ಕೆ ಸಚಿವ ಜೈಶಂಕರ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

‘ಲಸಿಕೆ ಸಹಕಾರ ಅಗತ್ಯ’
‘ಕೋವಿಡ್‌ ಲಸಿಕೆ ತಯಾರಿಕೆಯಲ್ಲಿ ಅಮೆರಿಕ ಮತ್ತು ಭಾರತವು ಸಹಕಾರ ಒಪ್ಪಂದ ಮಾಡಿಕೊಂಡರೆ, ಕೋವಿಡ್‌ ನಿಯಂತ್ರಿಸುವುದು ಸುಲಭವಾಗಲಿದೆ’ ಎಂದು ಜೈಶಂಕರ್ ಹೇಳಿದ್ದಾರೆ.

ಅಮೆರಿಕದ ವಾಣಿಜ್ಯ ವ್ಯವಹಾರಗಳ ಪ್ರತಿನಿಧಿ ಕ್ಯಾಥರಿನ್ ಥಾಯ್ ಅವರ ಜತೆ ಜೈಶಂಕರ್ ಅವರು ಮಾತುಕತೆ ನಡೆಸಿದ್ದು, ಕೋವಿಡ್‌ ಲಸಿಕೆಗೆ ಸಂಬಂಧಿಸಿದ ಬೌದ್ಧಿಕ ಹಕ್ಕು ಸ್ವಾಮ್ಯವನ್ನು ಸಡಿಲಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಅಮೆರಿಕವು ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ ಎಂದು ಮೂಲಗಳು ಹೇಳಿವೆ. ‘ಈ ಪ್ರಸ್ತಾವಕ್ಕೆ ಥಾಯ್ ಅವರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಲಸಿಕೆ ತಯಾರಿಕೆಗೆ ಸಂಬಂಧಿಸಿದ ವಸ್ತುಗಳ ಪೂರೈಕೆಯಲ್ಲಿನ ತೊಡಕು ನಿವಾರಣೆಯಾಗುತ್ತದೆ ಎಂಬ ಭರವಸೆ ಇದೆ’ ಎಂದು ಜೈಶಂಕರ್ ಹೇಳಿದ್ದಾರೆ.

 

***

ಕೋವಿಡೋತ್ತರ ಕಾಲದಲ್ಲಿ ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಅಮೆರಿಕದ ಜತೆಗೆ ವಾಣಿಜ್ಯ, ತಂತ್ರಜ್ಞಾನ ಸಹಕಾರವನ್ನು ಗಟ್ಟಿಗೊಳಿಸುವುದು ಅತ್ಯವಶ್ಯಕ.
-ಎಸ್‌.ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ

***

ಕೋವಿಡ್‌ ಕೊನೆಗಾಣಿಸುವಲ್ಲಿ ಎರಡೂ ದೇಶಗಳ ಸಹಕಾರವು ದೊಡ್ಡ ಪ್ರಮಾಣದಲ್ಲಿ ನೆರವಿಗೆ ಬರಲಿದೆ. ಎರಡೂ ದೇಶಗಳು ಒಟ್ಟಾಗಿ ಕೋವಿಡ್‌ ಅನ್ನು ಕೊನೆಗಾಣಿಸಲಿವೆ.
-ಜೇಕ್ ಸಲಿವನ್‌, ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು