ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪ: 7,200 ದಾಟಿದ ಸಾವಿನ ಸಂಖ್ಯೆ

ಟರ್ಕಿಯ 10 ಪ್ರಾಂತ್ಯಗಳಲ್ಲಿ ತುರ್ತು ಸ್ಥಿತಿ ಘೋಷಣೆ
Last Updated 8 ಫೆಬ್ರುವರಿ 2023, 4:02 IST
ಅಕ್ಷರ ಗಾತ್ರ

ಅದಾನಾ/ಅಂಕಾರಾ (ಟರ್ಕಿ) (ಎಪಿ): ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಿಂದ ಸಾವು– ನೋವಿನ ಸಂಖ್ಯೆ ಹೆಚ್ಚುತ್ತಿದೆ. ಉಭಯ ರಾಷ್ಟ್ರಗಳಲ್ಲಿ ಮೃತರ ಸಂಖ್ಯೆ ಮಂಗಳವಾರ ಒಟ್ಟು 7,200ಕ್ಕೆ ಏರಿದೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿದವರ ರಕ್ಷಣೆಗಾಗಿ ತ್ವರಿತ ಕಾರ್ಯಾಚರಣೆ ಮುಂದು ವರಿದಿದೆ. ಅಸ್ಥಿರ ಕಟ್ಟಡಗಳು ಮತ್ತು ಕೊರೆಯುವ ಚಳಿ, ರಕ್ಷಣಾ ಕಾರ್ಯಕ್ಕೆ ಸವಾಲಾಗಿದೆ.

ಮೊದಲಿಗೆ ಸಂಭವಿಸಿದ ಪ್ರಬಲ ಕಂಪನ ಮತ್ತು ನಂತರದ ಸುಮಾರು 200 ಕಂಪನಗಳ ಪರಿಣಾಮ ಎರಡೂ
ರಾಷ್ಟ್ರಗಳಲ್ಲಿ ಭಾರಿ ಹಾನಿಯಾಗಿದೆ. ರಿಕ್ಟರ್ ಮಾಪಕದಲ್ಲಿ ದಾಖಲಾಗಿದ್ದ 7.8 ತೀವ್ರತೆಯ ಭೂಕಂಪದಿಂದ ಸಿರಿಯಾದ ಅಲೆಪ್ಪೊ ಮತ್ತು ಹಮಾ ನಗರ ಹಾಗೂ ಟರ್ಕಿಯ ದಿಯಾರ್‌ಬಕೀರ್‌ವರೆಗೆ ಸಾವಿರಾರು ಕಟ್ಟಡಗಳು ಕುಸಿದಿವೆ. ಟರ್ಕಿಯ ಗಡಿ ಪ್ರದೇಶದಲ್ಲಿ ಸುಮಾರು 6 ಸಾವಿರ ಕಟ್ಟಡಗಳು ನೆಲಸಮವಾಗಿವೆ. ಆಗ್ನೇಯದ ಹತ್ತು ಪ್ರಾಂತ್ಯಗಳಲ್ಲಿ ಮೂರು ತಿಂಗಳ ಕಾಲ ತುರ್ತು ಸ್ಥಿತಿಯನ್ನು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಮಂಗಳವಾರ ಘೋಷಿಸಿದರು.

ಭಾರತ, ಅಮೆರಿಕ, ಬ್ರಿಟನ್‌ ಸೇರಿ ವಿಶ್ವದ ಹಲವು ರಾಷ್ಟ್ರಗಳು ಸಂತ್ರಸ್ತರ ನೆರವಿಗಾಗಿ ಔಷಧ, ಪರಿಹಾರ ಸಾಮಗ್ರಿ ಹಾಗೂ ವಿಪತ್ತು ಸ್ಪಂದನಾ ಪಡೆಗಳನ್ನು ಟರ್ಕಿಗೆ ಕಳುಹಿಸಿವೆ. 24,400ಕ್ಕೂ ಹೆಚ್ಚು ತುರ್ತುಸೇವಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಟರ್ಕಿ ವಿಪತ್ತು ನಿರ್ವಹಣೆ ಏಜೆನ್ಸಿ ಹೇಳಿದೆ. ಹತ್ತು ಪ್ರಾಂತ್ಯಗಳಲ್ಲಿ ಈವರೆಗೆ 7,800ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾ
ಗಿದೆ ಎಂದು ಟರ್ಕಿಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಓರ್ಹಾನ್ಟಾಟರ್ ಮಾಹಿತಿ ನೀಡಿದ್ದಾರೆ.

ಟರ್ಕಿಯಲ್ಲಿ ಸಾವಿನ ಸಂಖ್ಯೆ 5,400ಕ್ಕೆ ಏರಿದೆ. ಗಾಯಾಳುಗಳ ಸಂಖ್ಯೆ 31,000ಕ್ಕೆ ತಲುಪಿದೆ ಎಂದು ಉಪಾಧ್ಯಕ್ಷ ಫುವಾಟ್ ಒಕ್ಟಾಯ್‌ ಮಾಹಿತಿ ನೀಡಿದ್ದಾರೆ. ಸಿರಿಯಾ ಸರ್ಕಾರಿ ನಿಯಂತ್ರಣ ಮತ್ತು ಬಂಡುಕೋರರ ಹಿಡಿತದ ಪ್ರದೇಶಗಳಲ್ಲಿ 1,800 ಜನರು
ಮೃತಪಟ್ಟಿದ್ದಾರೆ. ಈ ದುರಂತದಲ್ಲಿ 20 ಸಾವಿರ ಜನರು ಮೃತಪಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಸಿರಿಯಾ ಸರ್ಕಾರಿ ನಿಯಂತ್ರಿತ ಪ್ರದೇಶದಲ್ಲಿ ಗಾಯಾಳುಗಳ ಸಂಖ್ಯೆ 1,400ಕ್ಕೆ ಏರಿದೆ. ಬಂಡುಕೋರರ ಹಿಡಿತದ ವಾಯವ್ಯ ಸಿರಿಯಾದಲ್ಲಿ 2,300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅರೆ ವೈದ್ಯಕೀಯ ಗುಂಪು ಹೇಳಿದೆ.

ವಿಡಿಯೊ ಒಂದರಲ್ಲಿರುವ ದೃಶ್ಯದ ಪ್ರಕಾರ, ಎರಡನೆಯ ಬಾರಿ ಭೂಮಿ ಕಂಪಿಸಿದಾಗ ಟರ್ಕಿಯ ಸ್ಯಾನ್ಲಿಯುರ್ಫಾದಲ್ಲಿ ಬಹುಮಹಡಿ ಕಟ್ಟಡ ಧರೆಗುರುಳಿ, ಅವಶೇಷಗಳ ದೂಳು ಮುಗಿಲೆತ್ತರಕ್ಕೆ ಆವರಿಸಿದೆ.

ಜನರು ನೆರವಿಗಾಗಿ ಚೀರಾಡುತ್ತಿರುವುದೂ ಕಂಡುಬಂದಿದೆ.

ಹತಾಯ್‌ ಪ್ರಾಂತ್ಯದಲ್ಲಿ ಹಲವು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಅವರ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರ ಸಂಬಂಧಿಕರು ಹೇಳಿರುವುದು ವರದಿಯಾಗಿದೆ.

ಭೂಕಂಪ ಪೀಡಿತ ಎರಡೂ ದೇಶಗಳಲ್ಲಿ ರಕ್ಷಣಾ ಕಾರ್ಯಕ್ಕಾಗಿ ವಿಶೇಷ ತರಬೇತಿ ಪಡೆದ ಶ್ವಾನಗಳು, ವೈದ್ಯಕೀಯ ಸಿಬ್ಬಂದಿ ಸೇರಿ ಎರಡು ಶೋಧ ಮತ್ತು ರಕ್ಷಣಾ ತಂಡಗಳನ್ನು ಕಳುಹಿಸಿರುವುದಾಗಿ ಭಾರತ ಹೇಳಿದೆ.

ಕೊರೆವ ಚಳಿಯಲ್ಲಿ ರಾತ್ರಿ ಕಳೆದ ಸಂತ್ರಸ್ತರು: ಟರ್ಕಿಯ ಹತಾಯ್‌ ಪ್ರಾಂತ್ಯ ಮತ್ತು ಗಾಝಿಯಾನ್‌ಟೆಪ್‌ ನಗರದಲ್ಲಿ ಸಾವಿರಾರು ಸಂತ್ರಸ್ತರು ಕ್ರೀಡಾಂಗಣಗಳು, ಮಸೀದಿಗಳು, ಸಮುದಾಯ ಭವನಗಳು, ಶಾಪಿಂಗ್‌ ಮಾಲ್‌ಗಳು ಹಾಗೂ ಬಯಲು ಪ್ರದೇಶಗಳಲ್ಲಿ ಆಶ್ರಯ ಪಡೆದರು. ಕೊರೆಯುವ ಚಳಿಯಲ್ಲಿ ಕಂಬಳಿ ಹೊದ್ದು, ಬೆಂಕಿಯ ಸುತ್ತ ಕುಳಿತು ಜೀವಭಯದಲ್ಲೇ ರಾತ್ರಿ
ಕಳೆದರು.

ಸಿರಿಯಾಕ್ಕೆ ಹೊಂದಿಕೊಂಡಿರುವ ತನ್ನ ಗಡಿಯಲ್ಲಿ ಟರ್ಕಿ ಭಾರಿ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದೆ. ಶೋಧ ಮತ್ತು ರಕ್ಷಣಾ ಕಾರ್ಯಕ್ಕೆ ಅಂಕಾರಾದ ಮಾನವೀಯ ನೆರವು ದಳ ಮತ್ತು ಸೇನೆಯ ಎಂಟು ತುಕಡಿಗಳನ್ನು ಸಹ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT