ಭಾನುವಾರ, ಜೂನ್ 20, 2021
23 °C

ಸುಯೆಜ್‌ ಕಾಲುವೆ ವಿಸ್ತರಣೆಗೆ ಮುಂದಾದ ಈಜಿಪ್ಟ್‌ ಸರ್ಕಾರ

ಎಪಿ Updated:

ಅಕ್ಷರ ಗಾತ್ರ : | |

Prajavani

ಕೈರೋ: ‘ಸುಯೆಜ್ ಕಾಲುವೆಯ ದಕ್ಷಿಣ ಭಾಗವನ್ನು ಇನ್ನಷ್ಟು ವಿಸ್ತರಣೆ ಮತ್ತು ಆಳಗೊಳಿಸುವ ಯೋಜನೆಯನ್ನು ರೂಪಿಸಲಾಗಿದೆ’ ಎಂದು ಈಜಿಪ್ಟ್‌ ಹೇಳಿದೆ.

ಈ ವಿಷಯವನ್ನು ಸುಯೆಜ್ ಕಾಲುವೆ ಪ್ರಾಧಿಕಾರದ ಲೆಫ್ಟಿನೆಂಟ್‌ ಜನರಲ್‌ ಒಸಮಾ ರಾಬಿ ಅವರು ಕಾಲುವೆ ಸಮೀಪದ ಪಟ್ಟಣವಾದ ಇಸ್ಮೈಲಿಯಾದಲ್ಲಿ ನಡೆದ ಸಮಾರಂಭದಲ್ಲಿ ಪ್ರಕಟಿಸಿದರು. ಇದೇ ವೇಳೆ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್‌ ಫತಾ ಅಲ್‌–ಸಿಸಿ ಮತ್ತು ಉನ್ನತ ಸರ್ಕಾರಿ ಅಧಿಕಾರಿಗಳು ಕೂಡ ಭಾಗವಹಿಸಿದ್ದರು.

ಈ ಯೋಜನೆಯಡಿ ಸಿನಾಯಿ ದ್ವೀಪಕಲ್ಪದ ಬದಿಯ ಕಾಲುವೆಯನ್ನು ದಕ್ಷಿಣ ದಿಕ್ಕಿನಿಂದ ಪೂರ್ವಕ್ಕೆ ಸುಮಾರು 40 ಮೀಟರ್ ಅಗಲಗೊಳಿಸಲಾಗುವುದು. ಅಲ್ಲದೆ ಇದರ ಆಳವನ್ನು 60 ಅಡಿಯಿಂದ 72ಕ್ಕೆ ಹೆಚ್ಚಿಸಲಾಗುವುದು. ಕಾಲುವೆಯ ಈ ಭಾಗವು 30 ಕಿ.ಮೀ ಉದ್ದವಿದೆ.

2015ರಲ್ಲಿ ಪ್ರಾರಂಭಗೊಂಡ ಜಲಮಾರ್ಗದ ಎರಡನೇ ಲೇನ್‌ ಅನ್ನು ಕೂಡ 10 ಕಿ.ಮೀ ವಿಸ್ತರಿಸಲಾಗುವುದು. ಈ ಮೂಲಕ ಕಾಲುವೆಯ ಡಬಲ್‌ ಲೇನ್ ವಿಸ್ತರಣೆಯು 82 ಕಿ.ಮೀಗೆ ಹೆಚ್ಚಾಗಲಿದೆ. ಇದು ಹೆಚ್ಚಿನ ಹಡಗುಗಳಿಗೆ ಕಾಲುವೆ ಮೂಲಕ ಚಲಿಸಲು ಸಹಕಾರಿಯಾಗಲಿದೆ.

ಮಾರ್ಚ್‌ 23ರಂದು ಸುಯೆಜ್ ಕಾಲುವೆಯಲ್ಲಿ ಜಪಾನ್‌ ಮೂಲದ ‘ಎವರ್‌ ಗ್ರೀನ್‌’ ಹಡಗು ಸಿಲುಕಿ ಹಾಕಿಕೊಂಡು ಆರು ದಿನ ಕಾಲುವೆ ಬಂದ್ ಆಗಿತ್ತು. ನೂರಾರು ಹಡಗುಗಳ ಸಂಚಾರಕ್ಕೆ ತಡೆ ಉಂಟಾಗಿ ಭಾರಿ ನಷ್ಟ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಈಜಿಪ್ಟ್‌ ಸರ್ಕಾರವು ಸುಯೆಜ್‌ ಕಾಲುವೆ ವಿಸ್ತರಣೆ ಯೋಜನೆಯನ್ನು ಕೈಗೊಂಡಿದೆ. ಕಳೆದ ವರ್ಷ ಈ ಕಾಲುವೆಯಲ್ಲಿ 19 ಸಾವಿರ ಸರಕು ಸಾಗಣೆ ಹಡಗುಗಳು ಸಂಚರಿಸಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು