ಇಸ್ಲಾಮಾಬಾದ್: ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 8 ಮಕ್ಕಳು ಮತ್ತು 9 ಮಹಿಳೆಯರು ಸೇರಿ 18 ಮಂದಿ ಪ್ರವಾಹ ಸಂತ್ರಸ್ತರು ಮೃತಪಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಕಿಕ್ಕಿರಿದು ತುಂಬಿದ್ದ ಹವಾ ನಿಯಂತ್ರಿತ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ತೀವ್ರ ಸುಟ್ಟ ಗಾಯಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಬುಧವಾರ ರಾತ್ರಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನೂರಿಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಸ್‌ನಲ್ಲಿ 80 ಮಂದಿ ಪ್ರವಾಹ ಸಂತ್ರಸ್ತರು ಪ್ರಯಾಣಿಸುತ್ತಿದ್ದರು. ಸಂತ್ರಸ್ತರು ದಡು ಜಿಲ್ಲೆಯ ಖೈರಾಪುರ್ ನಥನ್ ಶಾ ಪ್ರದೇಶದಿಂದ ಕರಾಚಿಗೆ ತೆರಳುತ್ತಿದ್ದರು ಎಂದು ಜಿಯೊ ಟಿ.ವಿ ವರದಿ ಮಾಡಿದೆ.
8 ಮಕ್ಕಳು ಮತ್ತು 9 ಮಹಿಳೆಯರು ಸೇರಿ 18 ಮಂದಿ ಮೃತಪಟ್ಟಿರುವುದನ್ನು ಉಪ ಪೊಲೀಸ್ ಆಯುಕ್ತರು ದೃಢಪಡಿಸಿದ್ದಾರೆ.
‘ಶಾರ್ಟ್ ಸರ್ಕ್ಯೂಟ್‌ನಿಂದ ಬಸ್‌ನ ಹವಾ ನಿಯಂತ್ರಣ ವ್ಯವಸ್ಥೆಯಲ್ಲಿ ಅಗ್ನಿ ಅವಘಡ ಸಂಭವಿಸಿರಬಹುದು’ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ಪ್ರಯಾಣಿಕರು ಅಗ್ನಿಜ್ವಾಲೆಯಿಂದ ಪಾರಾಗಲು ಬಸ್‌ನಿಂದ ಹೊರಗೆ ಜಿಗಿದಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಅಗ್ನಿಶಾಮಕ ದಳಗಳು ಸ್ಥಳಕ್ಕೆ ತೆರಳಿವೆ. ಗಾಯಾಳುಗಳನ್ನು ಜಮ್‌ಶೊರೊ ಮತ್ತು ನೂರಿಬಾದ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲು ಸಿಂಧ್ ಮುಖ್ಯಮಂತ್ರಿ ಮುರದ್ ಆದೇಶಿಸಿದ್ದಾರೆ.
ಪಾಕಿಸ್ತಾನದಲ್ಲಿ ಜೂನ್ ತಿಂಗಳ ಮಧ್ಯಭಾಗದಿಂದ ಬೀಳುತ್ತಿರುವ ಭಾರಿ ಮಳೆಯಿಂದ ಉಂಟಾಗಿರುವ ಭೀಕರ ಪ್ರವಾಹದಲ್ಲಿ ಈವರೆಗೆ 1,700ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 3.3 ಕೋಟಿಗೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.