ಭಾನುವಾರ, ಜುಲೈ 3, 2022
27 °C

ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿ ಸ್ಥಾಪಿಸಲು ಭಾರತ–ಯುರೋಪಿಯನ್ ಒಕ್ಕೂಟ ನಿರ್ಧಾರ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಮತ್ತು ಯುರೋಪಿಯನ್ ಒಕ್ಕೂಟಗಳು(ಇಯು) ತಮ್ಮ ನಡುವಿನ ಸಹಕಾರವನ್ನು ಹೆಚ್ಚಿಸಲು ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯನ್ನು ಸ್ಥಾಪಿಸಲು ಸೋಮವಾರ ಒಪ್ಪಿಕೊಂಡಿವೆ.

ನವದೆಹಲಿಯಲ್ಲಿ ಇಯು ಮುಖ್ಯಸ್ಥರು ಮತ್ತು ಸರ್ಕಾರದ ಅಧಿಕಾರಿಗಳ ಭೇಟಿ ಬಳಿಕ ಬಿಡುಗಡೆ ಮಾಡಲಾಗಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಎರಡು ದಿನಗಳ ಭಾರತದ ಪ್ರವಾಸದಲ್ಲಿದ್ದಾರೆ. ಈ ಮಂಡಳಿ ರಚನೆಯು ಉಕ್ರೇನ್‌ ಮೇಲೆ ಆಕ್ರಮಣ ಮಾಡಿರುವ ಭಾರತದ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ ದೇಶ ರಷ್ಯಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತವನ್ನು ಉತ್ತೇಜಿಸುವ ಪಾಶ್ಚಿಮಾತ್ಯ ಪ್ರಯತ್ನಗಳ ಭಾಗವಾಗಿದೆ.

ಭಾರತವು ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವನ್ನು ಸ್ಪಷ್ಟವಾಗಿ ಖಂಡಿಸುವುದರಿಂದ ದೂರವಿದ್ದು, ಹಿಂಸಾಚಾರವನ್ನು ತಕ್ಷಣವೇ ಕೊನೆಗೊಳಿಸಬೇಕು ಎಂದಷ್ಟೇ ಹೇಳಿದೆ.

ಭಾರತದೊಂದಿಗೆ ಸೋಮವಾರ ಯುರೋಪಿಯನ್ ಒಕ್ಕೂಟವು ಮಾಡಿಕೊಂಡಿರುವ ತಾಂತ್ರಿಕ ಒಪ್ಪಂದದ ರೀತಿ ಒಪ್ಪಂದ ಹೊಂದಿರುವ ಮತ್ತೊಂದು ದೇಶ ಅಮೆರಿಕ ಮಾತ್ರ.

‘ಭೌಗೋಳಿಕ ರಾಜಕೀಯ ಪರಿಸರದಲ್ಲಿನ ತ್ವರಿತ ಬದಲಾವಣೆಗಾಗಿ ಉಭಯ ಪಕ್ಷಗಳು ಒಪ್ಪಿಗೆ ಸೂಚಿಸಿದ್ದು, ಆಳವಾದ ಜಂಟಿ ಕಾರ್ಯತಂತ್ರದ ಅಗತ್ಯವನ್ನು ಎತ್ತಿ ತೋರಿಸುತ್ತದೆ’ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯು ರಾಜಕೀಯ ನಿರ್ಧಾರಗಳನ್ನು ಕಾರ್ಯಗತಗೊಳಿಸಲು, ತಾಂತ್ರಿಕ ಕಾರ್ಯಗಳ ಸಮನ್ವಯ ಮತ್ತು ಯುರೋಪಿಯನ್ ಒಕ್ಕೂಟ ಹಾಗೂ ಭಾರತದ ಸುಸ್ಥಿರ ಪ್ರಗತಿಗೆ ಮುಖ್ಯವಾದ ಕ್ಷೇತ್ರಗಳಲ್ಲಿ ಅನುಷ್ಠಾನ ಮತ್ತು ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ವೇದಿಕೆ ಒದಗಿಸುತ್ತದೆ’ಎಂದು ಹೇಳಿಕೆ ತಿಳಿಸಿದೆ.

ಬ್ರಿಟನ್ ಪ್ರಧಾನಿ ಬೋರಿಸ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ರಕ್ಷಣೆ ಮತ್ತು ವ್ಯಾಪಾರ ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಂಡ ಕೆಲವೇ ದಿನಗಳ ಬಳಿಕ ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ವಾನ್ ಡೆರ್ ಲೇಯೆನ್ ಅವರ ಭೇಟಿ ನಡೆದಿದೆ.

ಪ್ರಧಾನಿ ಮೋದಿ ಭೇಟಿ ವೇಳೆ ಭಾರತಕ್ಕೆ ಯುರೋಪಿಯನ್ ಮಿಲಿಟರಿ ಉಪಕರಣಗಳ ಮಾರಾಟ ಹೆಚ್ಚಳ ಮತ್ತು ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳನ್ನು ಮರುಪ್ರಾರಂಭಿಸುವ ನಿರೀಕ್ಷೆಯಿದೆ. ಅವರು(ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ವಾನ್ ಡೆರ್ ಲೇಯೆನ್) ಈಗಾಗಲೇ ಭಾರತದ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರನ್ನು ಭೇಟಿ ಮಾಡಿದ್ದಾರೆ.

ಭಾರತ ಮತ್ತು ಯರೋಪಿಯನ್ ಪಾಲುದಾರಿಕೆಯನ್ನು ಹೆಚ್ಚಿಸುವ ಕುರಿತಂತೆ ಚರ್ಚಿಸಲಾಗಿದೆ’ಎಂದು ಜೈಶಂಕರ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ‘ಉಕ್ರೇನ್ ಸಂಘರ್ಷದ ಆರ್ಥಿಕ ಮತ್ತು ರಾಜಕೀಯ ಪರಿಣಾಮಗಳ ಬಗ್ಗೆಯೂ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ’ಎಂದೂ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು