ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ಅನಿಲ: ಆಫ್ರಿಕಾದತ್ತ ಮುಖ ಮಾಡಿದ ಯೂರೋಪ್ ರಾಷ್ಟ್ರಗಳು

Last Updated 12 ಅಕ್ಟೋಬರ್ 2022, 15:50 IST
ಅಕ್ಷರ ಗಾತ್ರ

ಡಕಾರ್‌, ಸೆನೆಗಲ್‌: ರಷ್ಯಾ ಮತ್ತು ಉಕ್ರೇನ್‌ ನಡುವಣ ಯುದ್ಧದಿಂದಾಗಿ ಯೂರೋಪ್‌ನಲ್ಲಿ ಇಂಧನ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಅಲ್ಲಿನ ರಾಷ್ಟ್ರಗಳು ನೈಸರ್ಗಿಕ ಅನಿಲಕ್ಕಾಗಿ ಈಗ ಆಫ್ರಿಕಾದತ್ತ ಮುಖಮಾಡಿವೆ.

ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ ಕೈಗೊಳ್ಳಲಾಗಿರುವ ದ್ರವೀಕೃತ ನೈಸರ್ಗಿಕ ಅನಿಲ ಯೋಜನೆಯು ಸದ್ಯ ಶೇ 80ರಷ್ಟು ಪೂರ್ಣಗೊಂಡಿದೆ. ಇಲ್ಲಿಗೆ ಈಗಾಗಲೇ ಜರ್ಮನಿ ಹಾಗೂ ಪೋಲೆಂಡ್‌ನ ನಾಯಕರು ಭೇಟಿ ನೀಡಿದ್ದಾರೆ.

ಸೆನೆಗಲ್ ಮತ್ತು ಮೌರಿಟಾನಿಯಾದ ಕರಾವಳಿ ಭಾಗದಲ್ಲಿ 15 ಲಕ್ಷ ಕೋಟಿ ಘನ ಅಡಿಯಷ್ಟು ಅನಿಲ ಇರಬಹುದೆಂದು ಅಂದಾಜಿಸಲಾಗಿದೆ. ಜರ್ಮನಿಯು 2019ರಲ್ಲಿ ಬಳಕೆ ಮಾಡಿದ್ದ ಒಟ್ಟು ಅನಿಲಕ್ಕೆ ಹೋಲಿಸಿದರೆ ಇದು ಐದು ಪಟ್ಟು ಹೆಚ್ಚು. ಆದರೆ ಇಲ್ಲಿ ಮುಂದಿನ ವರ್ಷದ ಅಂತ್ಯದ ಬಳಿಕವೇ ಅನಿಲ ಉತ್ಪಾದನೆ ಆರಂಭವಾಗುವ ಸಾಧ್ಯತೆ ಇದೆ.

ಆಫ್ರಿಕಾದಲ್ಲಿ ನೈಸರ್ಗಿಕ ಅನಿಲದ ನಿಕ್ಷೇಪಗಳು ಹೇರಳವಾಗಿವೆ. ಅಲ್ಜೀರಿಯಾದಂತಹ ಉತ್ತರ ಆಫ್ರಿಕಾದ ರಾಷ್ಟ್ರಗಳು ಯೂರೋಪ್‌ನ ಕೆಲ ರಾಷ್ಟ್ರಗಳಿಗೆ ಅನಿಲ ಪೂರೈಕೆ ಮಾಡಲು ಅಗತ್ಯವಿರುವ ಕೊಳವೆ ಮಾರ್ಗಗಳನ್ನು ಈಗಾಗಲೇ ನಿರ್ಮಾಣ ಮಾಡಿವೆ. ಭದ್ರತೆ ಹಾಗೂ ಮೂಲಸೌಕರ್ಯದ ಕೊರತೆಯಿಂದಾಗಿ ಇತರ ಭಾಗಗಳಿಗೆ ರಫ್ತು ಹೆಚ್ಚಿಸುವುದು ಅಸಾಧ್ಯವೆನಿಸಿದೆ.

ಆಫ್ರಿಕಾದ ಕೆಲ ರಾಷ್ಟ್ರಗಳು ಹೆಚ್ಚಿನ ಅನಿಲವನ್ನು ಮಾರಾಟ ಮಾಡುವ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಮುಂದಾಗಿವೆ. ಇದಕ್ಕಾಗಿ ಅವು ಒಪ್ಪಂದಗಳನ್ನು ಕಡಿತಗೊಳಿಸುತ್ತಿದ್ದು, ಇಂಧನ ಬಳಕೆಯನ್ನೂ ತಗ್ಗಿಸಿವೆ.

‘ಮೊಜಾಂಬಿಕ್‌ನಲ್ಲಿ ಅನಿಲ ನಿಕ್ಷೇಪಗಳು ಹೇರಳವಾಗಿವೆ. ಇಸ್ಲಾಮಿಕ್‌ ಉಗ್ರಗಾಮಿಗಳ ಹಿಂಸಾಚಾರದಿಂದಾಗಿ ಅಲ್ಲಿ ಯಾವುದೇ ಯೋಜನೆ ಕೈಗೊಳ್ಳಲು ಆಗುತ್ತಿಲ್ಲ’ ಎಂದು ಪೆಟ್ರೋಲಿಯಂ ಸಚಿವರ ವಕ್ತಾರ ಹೊರಾಟಿಯಸ್‌ ಇಗುವಾ ಹೇಳಿದ್ದಾರೆ.

ಇಂಧನ ಸಚಿವರ ಸಭೆ

ಇಂಧನ ಬಿಕ್ಕಟ್ಟು ನಿಭಾಯಿಸಲು ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚಿಸಲು ಯೂರೋಪ್‌ ರಾಷ್ಟ್ರಗಳ ಇಂಧನ ಸಚಿವರು ಬುಧವಾರ ಪರಗ್ವೆಯಲ್ಲಿ ಸಭೆ ನಡೆಸಿದ್ದಾರೆ.

ಅನಿಲ ಬೆಲೆ ಮೇಲೆ ಮಿತಿ ಹೇರಬೇಕೆಂದು ಕೆಲ ರಾಷ್ಟ್ರಗಳು ಒತ್ತಾಯಿಸಿದರೆ, ಜರ್ಮನಿಯು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ನಿರ್ಧಾರದಿಂದ ಅನಿಲ ಪೂರೈಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆಎಂದು ವಾದಿಸಿದೆ.

‘ಪೋಲೆಂಡ್‌ನ ಪ್ಲಾಕ್‌ ನಗರದಿಂದ 70 ಕಿ.ಮೀ.ದೂರದಲ್ಲಿರುವ ದ್ರುಜ್‌ಬಾ ವಿಭಾಗದಲ್ಲಿ ಮಂಗಳವಾರ ಸಂಜೆ ತೈಲದ ಕೊಳವೆಯೊಂದರಲ್ಲಿ ಸೋರಿಕೆ ಕಂಡುಬಂದಿದೆ’ ಎಂದು ಕೊಳವೆ ಮಾರ್ಗ ನಿರ್ವಹಣೆ ಮಾಡುತ್ತಿರುವ ಪರ್ನ್‌ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT