ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಇಂದು ಸ್ವದೇಶಕ್ಕೆ ವಾಪಸ್

Last Updated 3 ಸೆಪ್ಟೆಂಬರ್ 2022, 1:53 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಇಂದು (ಶನಿವಾರ) ಥಾಯ್ಲೆಂಡ್‌ನಿಂದ ಸ್ವದೇಶಕ್ಕೆ ವಾಪಸಾಗಲಿದ್ದಾರೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

ರಾಜಪಕ್ಸ ಅವರು ಶನಿವಾರ ಮುಂಜಾವ ಲಂಕಾಕ್ಕೆ ಮರಳಲಿದ್ದಾರೆ. ಅವರು ಬರುವ ವಿಮಾನದ ಕುರಿತ ವಿವರಗಳು ಲಭ್ಯವಿಲ್ಲ ಎಂದು ಮೂಲಗಳು ಹೇಳಿವೆ.

ಕೊಲಂಬೊದ ಪೂರ್ವಭಾಗದಲ್ಲಿರುವ ಉಪನಗರ ಮಿರಿಹಾನದಲ್ಲಿರುವ ಖಾಸಗಿ ನಿವಾಸಕ್ಕೆ ಅವರು ಮರಳಲಿದ್ದಾರೆಯೇ ಎಂಬುದು ಖಚಿತಗೊಂಡಿಲ್ಲ.

ಮಾಜಿ ಅಧ್ಯಕ್ಷರಾಗಿರುವುದರಿಂದ ರಾಜಪಕ್ಸ ಅವರು ಸರ್ಕಾರಿ ಮನೆ ಮತ್ತು ಇತರ ಸವಲತ್ತುಗಳನ್ನು ಪಡೆಯಲು ಅರ್ಹರಾಗಿದ್ದಾರೆ.

ರಾಜಪಕ್ಸ ಅವರು ಎರಡು ತಿಂಗಳ ಹಿಂದೆ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನಿಂದ ತತ್ತರಿಸಿದ್ದ ಶ್ರೀಲಂಕಾ ಬಿಟ್ಟು ತೆರಳಿದ್ದರು.

ರಾಜಪಕ್ಸ ವಿರುದ್ಧ ತಿಂಗಳುಗಳ ಕಾಲ ಶ್ರೀಲಂಕಾದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಜುಲೈ 9ರಂದು ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸ ಹಾಗೂ ರಾಜಧಾನಿಯ ಹಲವು ಪ‍್ರಮುಖ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದರು. ಇದಾದ ಬಳಿಕ ಪ್ರತಿಭಟನೆ ತೀವ್ರಗೊಂಡಿತ್ತು. ಜುಲೈ 13ರಂದು ರಾಜಪಕ್ಸ ದೇಶ ತೊರೆದಿದ್ದರು.

ಶ್ರೀಲಂಕಾದ ಏರ್‌ಫೋರ್ಸ್ ವಿಮಾನದಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದರು. ಅಲ್ಲಿಂದ ಸಿಂಗಪುರಕ್ಕೆ ಹೋಗಿದ್ದರು. ಅಲ್ಲಿದ್ದುಕೊಂಡು ಜುಲೈ 14ರಂದು ಅಧ್ಯಕ್ಷರ ಹುದ್ದೆಗೆ ರಾಜೀನಾಮೆ ಪತ್ರ ರವಾನಿಸಿದ್ದರು.

ನಂತರ ತಾತ್ಕಾಲಿಕ ಆಶ್ರಯ ಪಡೆದು ಥಾಯ್ಲೆಂಡ್‌ಗೆ ತೆರಳಿದ್ದರು. ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವ ಕಾರಣ 90 ದಿನ ಮಾತ್ರ ಅಲ್ಲಿತಂಗಲು ಅವರಿಗೆ ಅವಕಾಶವಿದೆ. ಆದಾಗ್ಯೂ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅವರಿಗೆ ಥಾಯ್ಲೆಂಡ್‌ನಲ್ಲಿ ಅವಕಾಶ ದೊರೆತಿಲ್ಲ. ಅವರಿದ್ದ ಹೋಟೆಲ್ ಅನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದರು.

ರಾಜಪಕ್ಸ ಅವರು ಅಮೆರಿಕದಲ್ಲಿ ಪತ್ನಿ ಮತ್ತು ಮಗನೊಂದಿಗೆ ನೆಲೆಸಲು ‘ಗ್ರೀನ್ ಕಾರ್ಡ್’ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಇತ್ತೀಚೆಗೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT