ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಸುದ್ದಿ: ವಾಹಿನಿಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

ಉಕ್ರೇನ್– ರಷ್ಯಾ ಸಂಘರ್ಷ, ದೆಹಲಿ ಗಲಭೆಯ ವರದಿಗಳಲ್ಲಿ ಪ್ರಸಾರ ಸಂಹಿತೆ ಉಲ್ಲಂಘನೆ ಆರೋಪ
Last Updated 23 ಏಪ್ರಿಲ್ 2022, 18:00 IST
ಅಕ್ಷರ ಗಾತ್ರ

ನವದೆಹಲಿ: ಉಕ್ರೇನ್-ರಷ್ಯಾ ಸಂಘರ್ಷ ಮತ್ತು ದೆಹಲಿ ಗಲಭೆಗಳ ಕುರಿತು ಸುದ್ದಿವಾಹಿನಿಗಳು ಸುದ್ದಿ ಪ್ರಸಾರ ಮಾಡಿರುವ ರೀತಿಗೆ ಕೇಂದ್ರ ಸರ್ಕಾರವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಾನೂನು ಪ್ರಕಾರ ನಿಗದಿಪಡಿಸಿರುವ ಕಾರ್ಯಕ್ರಮ ಪ್ರಸಾರ ಸಂಹಿತೆಯನ್ನು ಪಾಲಿಸಬೇಕು ಎಂದು ಸುದ್ದಿವಾಹಿನಿಗಳಿಗೆ ಶನಿವಾರ ಕಠಿಣ ಎಚ್ಚರಿಕೆ ನೀಡಿದೆ.

ಕೇಬಲ್ ಟಿ.ವಿ. ಜಾಲಗಳು (ನಿಯಂತ್ರಣ) ಕಾಯ್ದೆ 1995 ಮತ್ತು ಅದರ ಅಡಿಯಲ್ಲಿನ ನಿಯಮ ಮತ್ತು ನಿಬಂಧನೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಯಾವುದೇ ಸುದ್ದಿ ಪ್ರಕಟಣೆ ಮತ್ತು ಪ್ರಸಾರವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕಠಿಣ ಎಚ್ಚರಿಕೆ ಕೊಟ್ಟಿದೆ.

ಉಕ್ರೇನ್-ರಷ್ಯಾ ಸಂಘರ್ಷದ ಬಗ್ಗೆ ವರದಿ ಪ್ರಸಾರದಲ್ಲಿ ಸುದ್ದಿ ನಿರೂಪಕರು ಬಳಸಿದ ‘ಅತಿರಂಜಿತ’ ಹೇಳಿಕೆಗಳು ಮತ್ತು ‘ಹತ್ಯಾಕಾಂಡದ ಶೀರ್ಷಿಕೆಗಳು/ ಟ್ಯಾಗ್‌ಲೈನ್‌ಗಳು’ ಹಾಗೂ ವಾಯವ್ಯ ದೆಹಲಿಯಲ್ಲಿನ ಹಿಂಸಾಚಾರದ್ದು ಎಂದು ಹೇಳಲಾದ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸದೆಯೇ ಪ್ರಕಟಿಸಲಾಗಿದೆ. ಈ ನಡೆಯು ತನಿಖಾ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುತ್ತದೆ ಎಂದುಸರ್ಕಾರ ಹೇಳಿದೆ.

ವಾಯವ್ಯ ದೆಹಲಿಯಲ್ಲಿ ನಡೆದಘಟನೆಗಳ ಕುರಿತು ಸುದ್ದಿವಾಹಿನಿಗಳಲ್ಲಿ ನಡೆದ ಚರ್ಚೆಗಳು ‘ಅಸಂಸದೀಯ,ಪ್ರಚೋದನಕಾರಿ ಮತ್ತು ಸಾಮಾಜಿಕವಾಗಿ ಸ್ವೀಕೃತವಲ್ಲದ ಭಾಷೆಯನ್ನು ಹೊಂದಿದ್ದವು’ ಎಂದು ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಕಳೆದ ವಾರ, ವಾಯವ್ಯ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿತ್ತು.

‘ಇಂತಹ ವಿಷಯಗಳಲ್ಲಿ ಸುದ್ದಿವಾಹಿನಿಗಳು ನಡೆದುಕೊಳ್ಳುತ್ತಿರುವ ರೀತಿಗೆ ಮತ್ತು ಸಮಾಜಕ್ಕೆ ರವಾನಿಸುತ್ತಿರುವ ಸಂದೇಶಗಳ ಬಗ್ಗೆ ಸರ್ಕಾರಕ್ಕೆ ಗಂಭೀರ ಕಳವಳವಿದೆ’ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.

ಕಾಯ್ದೆಯಲ್ಲಿರುವ ಕಾರ್ಯಕ್ರಮ ಸಂಹಿತೆಯ ಸೆಕ್ಷನ್ 6ರ ಪ್ರಕಾರ, ‘ಯಾವುದೇ ಕಾರ್ಯಕ್ರಮವು ಉತ್ತಮಅಭಿರುಚಿ ಅಥವಾ ಸಭ್ಯತೆಗೆ ಧಕ್ಕೆ ತರುವಂತೆ ಇರಬಾರದು, ಮಿತ್ರ ರಾಷ್ಟ್ರಗಳ ಕುರಿತು ಟೀಕೆಯನ್ನು ಹೊಂದಿರಬಾರದು, ಧರ್ಮ ಅಥವಾ ಸಮುದಾಯಗಳ ಮೇಲೆ ದಾಳಿ ಮಾಡುವಂತಿರಬಾರದು, ಧಾರ್ಮಿಕ ಗುಂಪುಗಳನ್ನು ತುಚ್ಛೀಕರಿಸುವಂತಿರಬಾರದು, ಅಶ್ಲೀಲ, ಮಾನಹಾನಿಕಾರಕ, ಸುಳ್ಳು ಮತ್ತು ಅರ್ಧಸತ್ಯಗಳನ್ನು ಹೊಂದಿರಬಾರದು, ಕೆಟ್ಟ ಭಾವನೆ ಬರುವಂತಹ ಹೇಳಿಕೆಗಳನ್ನೂ ಹೊಂದಿರಬಾರದು’ ಎನ್ನುವುದನ್ನು ಸಚಿವಾಲಯ ನೆನಪಿಸಿದೆ.

‘ಸುದ್ದಿವಾಹಿನಿಗಳಲ್ಲಿ ಸುಳ್ಳು ಸುದ್ದಿ ಪ್ರಸಾರ’

‘ರಷ್ಯಾ-ಉಕ್ರೇನ್ ಸಂಘರ್ಷದ ಕುರಿತು ಸುದ್ದಿವಾಹಿನಿಗಳು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ.ಅಂತರರಾಷ್ಟ್ರೀಯ ಸಂಸ್ಥೆಗಳು ಅಥವಾ ನಾಯಕರ ಹೇಳಿಕೆಗಳನ್ನು ತಪ್ಪಾಗಿ ಉಲ್ಲೇಖಿಸಲಾಗುತ್ತಿದೆ, ಸುದ್ದಿಗೆ ಸಂಬಂಧವಿಲ್ಲದ ಅವಹೇಳನಕಾರಿ ಶೀರ್ಷಿಕೆಗಳು ಅಥವಾ ಟ್ಯಾಗ್‌ಲೈನ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ವೀಕ್ಷಕರನ್ನು ಪ್ರಚೋದಿಸುವುದಕ್ಕಾಗಿ ಸತ್ಯಕ್ಕೆ ದೂರವಾದ ಮತ್ತು ಅತಿಶಯೋಕ್ತಿಯಿಂದ ಕೂಡಿದ ಹೇಳಿಕೆಗಳನ್ನುಸುದ್ದಿವಾಹಿನಿಗಳಅನೇಕ ಪತ್ರಕರ್ತರು ಮತ್ತು ಸುದ್ದಿ ನಿರೂಪಕರು ಕೊಡುತ್ತಿರುವುದು ಗಮನಕ್ಕೆ ಬಂದಿದೆ’ಎಂದು ಕೇಂದ್ರಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.

‘ಅಣ್ವಸ್ತ್ರ ಹೊಂದಿರುವ ಪುಟಿನ್‌ ಬಗ್ಗೆ ಝೆಲೆನ್‌ಸ್ಕಿಗೆ ಚಿಂತೆ’, ‘ಅಣ್ವಸ್ತ್ರ ಬಳಕೆ ಭೀತಿಯಿಂದ ಝೆಲೆನ್‌ಸ್ಕಿಗೆ ಖಿನ್ನತೆ’, ‘ಪರಮಾಣು ಆಕ್ಷನ್ ಕಿ ಚಿಂತಾ ಸೆ ಝೆಲೆನ್‌ಸ್ಕಿ ಕೊ ಡಿಪ್ರೆಶನ್’ (ಪರಮಾಣು ದಾಳಿ ಭೀತಿ: ಝೆಲೆನ್‌ಸ್ಕಿಗೆ ಖಿನ್ನತೆ), ‘ಮೂರನೇ ಮಹಾಯುದ್ಧ ಪ್ರಾರಂಭ’ ಇಂತಹ ಶೀರ್ಷಿಕೆಗಳು ಮತ್ತು ಟ್ಯಾಗ್‌ಲೈನ್‌ಗಳನ್ನು ಬಳಸಲಾಗಿದೆ. ಅಂತರರಾಷ್ಟ್ರೀಯ ಸಂಸ್ಥೆಗಳ ಹೇಳಿಕೆಗಳನ್ನು ಪರಿಶೀಲಿಸದೆಯೇ ತಪ್ಪಾಗಿ ಉದ್ಧರಿಸಿರುವ ಉದಾಹರಣೆಗಳನ್ನು ಸಚಿವಾಲಯ ನೀಡಿರುವ ಕಠಿಣ ಎಚ್ಚರಿಕೆಯಲ್ಲಿ ಉಲ್ಲೇಖಿಸಲಾಗಿದೆ.

‘ಉಕ್ರೇನ್‌ ಮೇಲೆ ಅಣ್ವಸ್ತ್ರ ದಾಳಿ ನಡೆಯಲಿದೆ ಎಂಬುದಕ್ಕೆ ಪುರಾವೆ ಎಂದು ತಿರುಚಿದ ಚಿತ್ರಗಳನ್ನು ಸುದ್ದಿವಾಹಿನಿಯೊಂದು ಪ್ರಸಾರ ಮಾಡಿದೆ.

‘ಸುದ್ದಿವಾಹಿನಿಯೊಂದು ಉಕ್ರೇನ್ ಮೇಲೆ ಮುಂಬರುವ ಪರಮಾಣು ದಾಳಿಯ ಪುರಾವೆ ಎಂದು ಬಿಂಬಿಸುವ ಕಟ್ಟುಕಥೆಯ ಚಿತ್ರಗಳನ್ನು ಪ್ರಸಾರ ಮಾಡಿದೆ. ಇಂತಹ ಊಹಾಪೋಹದ ಸುದ್ದಿಗಳು ವೀಕ್ಷಕರನ್ನು ದಾರಿತಪ್ಪಿಸುತ್ತವೆ ಮತ್ತು ಅವರೊಳಗೆ ಚಿತ್ತ ಕ್ಷೋಭೆ ಹುಟ್ಟುಹಾಕುತ್ತವೆ’ ಎಂದು ಅದು ಎಚ್ಚರಿಸಿದೆ.

ದೆಹಲಿ ಗಲಭೆಯಲ್ಲಿ, ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಖಡ್ಗ ಹಿಡಿದಿರುವ ದೃಶ್ಯದ ತುಣುಕನ್ನು ಸುದ್ದಿ ವಾಹಿನಿಯೊಂದು ಪದೇ ಪದೇ ಪ್ರಸಾರ ಮಾಡಿದೆ. ಇನ್ನೊಂದು ವಾಹಿನಿ, ಧಾರ್ಮಿಕ ಮೆರವಣಿಗೆ ಗುರಿಯಾಗಿಸಿ ನಡೆದ ಹಿಂಸಾಚಾರ ಪೂರ್ವಯೋಜಿತ ಎಂದು ಹೇಳಿದೆ. ಇಂತಹ ಸುದ್ದಿ ಪ್ರಸಾರಕ್ಕೆ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT