ಭಾನುವಾರ, ಜೂನ್ 13, 2021
20 °C
ಟ್ರಂಪ್‌ ವಿರುದ್ಧ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಕಟುಟೀಕೆ

ಟ್ರಂಪ್ ವಿರುದ್ಧ ಕ್ಲಿಂಟನ್ ಟೀಕೆ: ಸಾಮಾಜಿಕ ಮಾಧ್ಯಮದಲ್ಲಿ ಕಾಲಹರಣವೇ ಕೆಲಸ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವಿರುದ್ಧ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರು ವಾಗ್ದಾಳಿ ನಡೆಸಿದ್ದಾರೆ. ಅವರ ಪಾಲಿಗೆ ಅಧ್ಯಕ್ಷ ಹುದ್ದೆ ನಿರ್ವಹಣೆ ಎಂದರೆ ಗಂಟೆಗಟ್ಟಲೇ ಟಿ.ವಿ ನೋಡುವುದು, ಸಾಮಾಜಿಕ ಮಾಧ್ಯಮಗಳಲ್ಲಿ ಜನರೊಂದಿಗೆ ಕಾಲಹರಣ ಮಾಡುವುದೇ ಆಗಿದೆ ಎಂದು ಟೀಕಿಸಿದ್ದಾರೆ.

ಅಧ್ಯಕ್ಷರ ಕಚೇರಿ ದೇಶವನ್ನು ಮುನ್ನಡೆಸುವ ಕೇಂದ್ರವಾಗಿಲ್ಲ ಬದಲಿಗೆ ವಿವಾದಗಳನ್ನೆಬ್ಬಿಸುವ ತಾಣವಾಗಿದೆ ಎಂದು ಟೀಕಿಸಿದ್ದಾರೆ.

ಡೆಮಾಕ್ರಟಿಕ್‌ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬೈಡನ್‌, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರ ಪರ ಪ್ರಚಾರ ಭಾಷಣ ಮಾಡಿದರು.

‘ಅಮೆರಿಕ ವಿಶ್ವವನ್ನು ಮುನ್ನಡೆಸುವ ರಾಷ್ಟ್ರ ಎಂಬುದಾಗಿ ಟ್ರಂಪ್‌ ಹೇಳುತ್ತಾರೆ. ಆದರೆ, ಉದ್ದಿಮೆಗಳ ದೃಷ್ಟಿಯಿಂದ ಮುಂಚೂಣಿಯಲ್ಲಿರುವ ಅಮೆರಿಕದಲ್ಲಿ ನಿರುದ್ಯೋಗ ದರ ಮೂರು ಪಟ್ಟು ಹೆಚ್ಚಾಗಿದೆ’ ಎಂದು ಕ್ಲಿಂಟನ್‌ ಹೇಳಿದರು.

‘ಕೋವಿಡ್‌–19 ಪಿಡುಗಿನಿಂದಾಗಿ 1.70 ಲಕ್ಷಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ವ್ಯಾಪಾರ–ವಹಿವಾಟು ಕುಸಿದಿದೆ. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದ ಈ ಬಾರಿಯ ಅಧ್ಯಕ್ಷೀಯ ಚುನಾವಣೆಗೆ ವಿಶೇಷ ಮಹತ್ವದ ಇದೆ’ ಎಂದರು.

‘ಇಂಥ ಸಂದರ್ಭದಲ್ಲಿ ಅಧ್ಯಕ್ಷ ಕಚೇರಿ ಅಧಿಕಾರ ಚಲಾಯಿಸಿ, ಸಂಕಷ್ಟದ ಸಮಯದಲ್ಲಿ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಆದರೆ, ಈ ಕಚೇರಿ ಗೊಂದಲಗಳ ಗೂಡಾಗಿದೆ. ಪ್ರತಿಯೊಂದು ವೈಫಲ್ಯಕ್ಕೂ ಇತರರ ಮೇಲೆ ಗೂಬೆ ಕೂರಿಸುವುದು, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸವನ್ನು ಮಾತ್ರ ಡೊನಾಲ್ಡ್‌ ಟ್ರಂಪ್‌ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು