ಕಠ್ಮಂಡು (ಪಿಟಿಐ): ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ (ಪ್ರಚಂಡ) ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆಯಲು ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್– ಯುನಿಫೈಡ್ ಮಾರ್ಕ್ಸಿಸ್ಟ್–ಲೆನಿನಿಸ್ಟ್ (ಸಿಪಿಎನ್–ಯುಎಂಎಲ್) ಪಕ್ಷವು ಸೋಮವಾರ ನಿರ್ಧರಿಸಿದೆ.
‘ಸೋಮವಾರ ಒಲಿ ಅವರ ನೇತೃತ್ವದಲ್ಲಿ ಪಕ್ಷವು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಪ್ರಸ್ತುತ ಸರ್ಕಾರವನ್ನು ತೊರೆಯಲು ಹಾಗೂ ಪ್ರಚಂಡ ಅವರ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ’ ಎಂದು ಸಿಪಿಎನ್–ಯುಎಂಎಲ್ ಪಕ್ಷದ ಕೇಂದ್ರ ಪ್ರಚಾರ ಸಮಿತಿಯ ಉಪ ಮುಖ್ಯಸ್ಥ ಬಿಷ್ಣು ರಿಜಲ್ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮುಂಬರುವ ನೇಪಾಳ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ನೇಪಾಳಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಮಚಂದ್ರ ಪೌದೇಲ್ ಅವರಿಗೆ ಸಿಪಿಎನ್–ಯುಎಂಎಲ್ ಬೆಂಬಲ ಸೂಚಿಸಲು ನಿರ್ಧರಿಸಿರುವುದೇ ಈ ಮೈತ್ರಿ ಮುರಿಯಲು ಮುಖ್ಯ ಕಾರಣ ಎನ್ನಲಾಗಿದೆ.
ನೇಪಾಳದಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಮಾರ್ಚ್ 9ರಂದು ಚುನಾವಣೆ ನಡೆಯಲಿದೆ.
ಡಿಸೆಂಬರ್ 25ರ ಒಪ್ಪಂದದ ಉಲ್ಲಂಘನೆ: ‘ನೇಪಾಳ ಪ್ರಧಾನಿ ಪ್ರಚಂಡ ಅವರು ಏಳು ಪಕ್ಷಗಳ ಸಮ್ಮಿಶ್ರ ಸರ್ಕಾರವನ್ನು ರಚಿಸುವ ವೇಳೆ ಮಾಡಿಕೊಂಡಿದ್ದ ಡಿಸೆಂಬರ್ 25ರ ಒಪ್ಪಂದವನ್ನು ಉಲ್ಲಂಘಿಸಿದ್ದು, ಸಿಪಿಎನ್–ಯುಎಂಎಲ್‌ಗೆ ದ್ರೋಹ ಎಸಗಿದ್ದಾರೆ. ಆದ್ದರಿಂದ ನಮ್ಮ ಪಕ್ಷವು ಸರ್ಕಾರವನ್ನು ತೊರೆಯಲು ನಿರ್ಧರಿಸಿದೆ. ಉಪಪ್ರಧಾನಿ ಹಾಗೂ ಹಣಕಾಸು ಸಚಿವ ಸಚಿವ ಬಿಷ್ಣು ಪೌದ್ಯಾಲ್, ವಿದೇಶಾಂಗ ಸಚಿವೆ ಬಿಮಲಾ ರಾಯ್ ಪೌದ್ಯಾಲ್ ಅವರು ಸೇರಿದಂತೆ ಸಿಪಿಎನ್–ಯುಎಂಎಲ್‌ನ ಮಂತ್ರಿಗಳು ಪ್ರಚಂಡ ಅವರಿಗೆ ರಾಜೀನಾಮೆ ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದಾರೆ’ ಎಂದು ಬಿಷ್ಣು ರಿಜಲ್ ವಿವರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.