ಭಾನುವಾರ, ನವೆಂಬರ್ 29, 2020
25 °C

ಟರ್ಕಿ, ಗ್ರೀಕ್‌ಗೆ ಪ್ರಬಲ ಭೂಕಂಪದ ಹೊಡೆತ: 22 ಸಾವು, 786 ಮಂದಿಗೆ ಗಾಯ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಇಸ್ತಾಂಬುಲ್‌: ಟರ್ಕಿ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಶುಕ್ರವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ಟರ್ಕಿಯ ಪಶ್ಚಿಮ ಇಜ್ಮಿರ್ ಪ್ರಾಂತ್ಯದ ಹಲವಾರು ಕಟ್ಟಡಗಳು ನೆಲಕ್ಕುರುಳಿವೆ. ಪರಿಣಾಮವಾಗಿ ಕನಿಷ್ಠ 22 ಜನರು ಮೃತಪಟ್ಟಿದ್ದಾರೆ, 786ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಇಜ್ಮಿರ್‌ನಲ್ಲಿ ಅವಶೇಷಗಳ ಕೆಳಗೆ ಬಹಳಷ್ಟು ಜನರು ಸಿಕ್ಕಿಬಿದ್ದಿರುವ ಕುರಿತು ವರದಿಗಳು ಬಂದಿವೆ. ಅವಶೇಷಗಳಡಿ ಸಿಲುಕಿದ್ದ 70ಕ್ಕೂ ಹೆಚ್ಚಿನ ಜನರನ್ನು ರಕ್ಷಿಸಲಾಗಿದೆ. ಕತ್ತಲಾದ ಬಳಿಕವೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ರಕ್ಷಿಸಲೆಂದು ಕಾಂಕ್ರೀಟ್ ಬ್ಲಾಕ್‌ಗಳನ್ನು ತೆರವುಗೊಳಿಸುವ ಮೂಲಕ ರಕ್ಷಣಾ ಕಾರ್ಯವನ್ನು ಮುಂದುವರಿಸಲಾಗಿತ್ತು. 

ಈ ಕುರಿತು ಟ್ವೀಟ್‌ ಮಾಡಿರುವ ಟರ್ಕಿಯ ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ, 'ಇಜ್ಮಿರ್‌ನಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. 120 ಮಂದಿ ಗಾಯಗೊಂಡಿದ್ದಾರೆ. 38 ಆಂಬುಲೆನ್ಸ್‌ಗಳು, ಎರಡು ಹೆಲಿಕಾಪ್ಟರ್ ‌ ಆಂಬ್ಯುಲೆನ್ಸ್ ಮತ್ತು 35 ವೈದ್ಯಕೀಯ ರಕ್ಷಣಾ ತಂಡಗಳು ಇಜ್ಮೀರ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ,' ಎಂದು ಅವರು ಅದೇ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ ಸಾವಿನ ಸಂಖ್ಯೆ 22ಕ್ಕೆ ಏರಿದೆ. ಟರ್ಕಿ ಮತ್ತು ಗ್ರೀಸ್ ಎರಡೂ ದೇಶಗಳು ದೋಷದ ರೇಖೆಗಳಲ್ಲಿ ಕಂಡುಬರುವುದರಿಂದಾಗಿ ಭೂಕಂಪಗಳು ಸಾಮಾನ್ಯವಾಗಿದೆ.

ಸುಮಾರು ಮೂರು ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಟರ್ಕಿಯ ಮೂರನೇ ಅತಿದೊಡ್ಡ ನಗರವಾದ ಇಜ್ಮಿರ್‌ನಲ್ಲಿ, ಭೂಕಂಪನ ಸಂಭವಿಸಿದ ನಂತರ ಅನೇಕ ಜನರು ಭಯಭೀತರಾಗಿ ಮತ್ತು ಭಯದಿಂದ ಬೀದಿಗಿಳಿಯುತ್ತಿರುವುದು ಕಂಡುಬಂತು. ಇಲ್ಲಿ ಕನಿಷ್ಠ 20 ಕಟ್ಟಡಗಳು ಕುಸಿದಿವೆ.

'ಗ್ರೀಕ್ ದ್ವೀಪದ ಸಮೋಸ್‌ನ ಈಶಾನ್ಯಕ್ಕೆ 13 ಕಿಲೋಮೀಟರ್ (8 ಮೈಲಿ) ದೂರದಲ್ಲಿ ಭೂಕಂಪನ ಕೇಂದ್ರ ಬಿಂದು ಗುರುತಾಗಿದೆ. ಅದರ ತೀವ್ರತೆಯು 6.9 ರಷ್ಟಿತ್ತು,' ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನಶಾಸ್ತ್ರ ವಿಭಾಗ ತಿಳಿಸಿದೆ. ಇದೇ ವೇಳೆ ಅಮೆರಿಕ ಭೂ ವಿಜ್ಞಾನ ಕೇಂದ್ರವು 'ಭೂಕಂಪನದ ತೀವ್ರತೆಯು 7.0 ಇತ್ತು,' ಎಂದು ಹೇಳಿದೆ. ಭೂಕಂಪದ ನಂತರದ ಆರಂಭಿಕ ಗಂಟೆಗಳು ಮತ್ತು ದಿನಗಳಲ್ಲಿ ತೀವ್ರತೆಯು ಭಿನ್ನವಾಗಿ ವರದಿಯಾಗುವುದು ಸಾಮಾನ್ಯ.

ಯುರೋಪಿಯನ್ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಬಳಸಿಕೊಂಡು ಗ್ರೀಸ್‌ನ ಪ್ರಧಾನ ಸಚಿವಾಲಯವು ನಾಗರಿಕರಿಗೆ ಎರಡು ಸಂದೇಶಗಳನ್ನು ಕಳುಹಿಸಿದೆ. ಇಕಾರಿಯಾ, ಕೋಸ್ ಮತ್ತು ಚಿಯೋಸ್ ದ್ವೀಪಗಳಲ್ಲಿನ ಜನರಿಗೆ ಸುನಾಮಿಯ ಅಪಾಯದ ಎಚ್ಚರಿಕೆ ನೀಡಿದೆ. ಅಲ್ಲದೆ ಕಟ್ಟಡಗಳ ಸಮೀಪ ಇರದಂತೆ ಸೂಚಿಸಿದೆ.

ಭೂಕಂಪನದಿಂದಾಗಿ ಸಮೋಸ್ನಲ್ಲಿ ಸಣ್ಣಪ್ರಮಾಣದ ಸುನಾಮಿಯಿಂದಾಗಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಸಮೋಸ್ನಲ್ಲಿ ಸುಮಾರು 45,000 ಜನರು ನೆಲೆಸಿದ್ದಾರೆ.

ಇನ್ನೊಂದೆಡೆ ಸಮುದ್ರದ ಮಟ್ಟ ಏರಿಕೆಯಾದ ಬಳಿಕ ನಗರದಲ್ಲಿ ಪ್ರವಾಹ ಉಂಟಾಗಿರುವ ವರದಿಯಾಗಿದ್ದು, ಕೆಲವು ಮೀನುಗಾರರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

'ಇದು ನಿಜವಾಗಿಯೂ ಬಲವಾದ ಕಂಪನ ಆಗಿತ್ತು. ನನ್ನ ಮಕ್ಕಳೊಂದಿಗೆ ಮನೆಯಿಂದ ಹೊರಗೆ ಓಡುವಾಗ ಕುಡಿದಾಗಿನ ಕಂಪನದಂತಿತ್ತು' ಎಂದು ಇಜ್ಮೀರ್‌ನ ಪಶ್ಚಿಮದಲ್ಲಿರುವ ಉರ್ಲಾದಲ್ಲಿ ವಾಸಿಸುವ ನಿವೃತ್ತ ಬ್ರಿಟಿಷ್ ಶಿಕ್ಷಕ ಕ್ರಿಸ್ ಬೆಡ್‌ಫೋರ್ಡ್ ಬಿಬಿಸಿಗೆ ತಿಳಿಸಿದ್ದಾರೆ.

20 ಮಂದಿಯಲ್ಲಿ ಒಬ್ಬರಂತೆ ಪ್ರವಾಹದಲ್ಲಿ ಮುಳುಗಿಹೋಗಿರುವುದು ದೃಢಪಟ್ಟಿದೆ ಎಂದು ಟರ್ಕಿಶ್ ತುರ್ತು ಸಂಸ್ಥೆ ತಿಳಿಸಿದೆ.

ಗಾಲಿಕುರ್ಚಿಗೆ ಬಲವಾದ ಪೆಟ್ಟು ಬಿದ್ದು ವೇಗವಾಗಿ ಹರಿಯುತ್ತಿದ್ದ ನೀರಿನೆಡೆಗೆ ಅದು ತಿರುಗಿದ ಪರಿಣಾಮ ಉರುಳಿಬಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಇಜ್ಮಿರ್ ಬಳಿಯ ಸಿಗಾಸಿಕ್‌ನಲ್ಲಿರುವ ಅಧಿಕಾರಿ ಯಾಸರ್ ಕೆಲೆಸ್ ಬಿಬಿಸಿ ಟರ್ಕಿಶ್‌ಗೆ ತಿಳಿಸಿದ್ದಾರೆ.

'ನಮ್ಮ ದೇಶದಲ್ಲಿ ಲಭ್ಯವಿರುವ ಎಲ್ಲಾ ವಿಧಾನಗಳೊಂದಿಗೆ ಸರ್ಕಾರವು ಭೂಕಂಪನದಿಂದ ಹಾನಿಗೊಳಗಾದವರಿಗೆ ಸಹಾಯ ಮಾಡುತ್ತದೆ ಎಂದು ಟರ್ಕಿಶ್ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.

ಗ್ರೀಸ್‌ನ ಸಮೋಸ್‌ನಲ್ಲಿ ಗೋಡೆ ಕುಸಿದು ಇಬ್ಬರು ಯುವಜನರು ಮೃತಪಟ್ಟಿದ್ದಾರೆ. ದ್ವೀಪದಾದ್ಯಂತ ಎಂಟು ಜನರು ಗಾಯಗೊಂಡಿದ್ದಾರೆ. 1904 ರಿಂದೀಚೆಗೆ ದ್ವೀಪಕ್ಕೆ ಅಪ್ಪಳಿಸಿದ ದೊಡ್ಡ ಕಂಪನ ಇದು ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು