ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಢಾಕಾ: ಮೋದಿ ಭೇಟಿ ವಿರೋಧಿಸಿ ನಡೆದ ಹಿಂಸಾಚಾರದಲ್ಲಿ ನಾಲ್ವರ ಸಾವು

Last Updated 27 ಮಾರ್ಚ್ 2021, 3:04 IST
ಅಕ್ಷರ ಗಾತ್ರ

ಢಾಕಾ: ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಢಾಕಾಗೆ ಭೇಟಿ ನೀಡಿದ್ದು, ಈ ಸಂದರ್ಭ ಮೋದಿ ಭೇಟಿ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಘರ್ಷಣೆಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಆಗ್ನೇಯ ಚಟ್ಟೋಗ್ರಾಮ್‌ ಜಿಲ್ಲೆಯ ಪ್ರಮುಖ ಮದರಸಾ ಅಥವಾ ಇಸ್ಲಾಮಿಕ್ ಶಾಲೆಯ ವಿದ್ಯಾರ್ಥಿಗಳು ಮತ್ತು ಇಸ್ಲಾಮಿಕ್ ಗುಂಪಿನ ಸದಸ್ಯರು, ಪೊಲೀಸರ ಜೊತೆಯೇ ಘರ್ಷಣೆಗೆ ಇಳಿದಿದ್ದರಿಂದ ಈ ಸಾವುಗಳು ಸಂಭವಿಸಿವೆ.

ಗಾಯಗೊಂಡ ಐದು ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅದರಲ್ಲಿ ನಾಲ್ವರು ಚಿಕಿತ್ಸೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಚಟ್ಟೋಗ್ರಾಮ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಬಳಿ ಪೊಲೀಸ್ ಅಧಿಕಾರಿ ಅಲಾವುದ್ದೀನ್ ತಾಲ್ಲೂಕದರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪೊಲೀಸರು ಕ್ರಮ ಜರುಗಿಸುವುದಕ್ಕೂ ಮುನ್ನ, ಬಾಂಗ್ಲಾದಲ್ಲಿ ಇಸ್ಲಾಮಿಕ್ ಶಾಲೆಗಳ ನೆಟ್ವರ್ಕ್ ಹೊಂದಿರುವ ಹೆಫಜತ್-ಇ-ಇಸ್ಲಾಂ ಗುಂಪಿನ ಸದಸ್ಯರು, ಚಟ್ಟೋಗ್ರಾಮ್‌ನ ಹಥಜಾರಿ ಪ್ರದೇಶದಲ್ಲಿ ಪೊಲೀಸ್ ಠಾಣೆ ಮತ್ತು ಭೂ ಕಚೇರಿ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಢಾಕಾದ ಪ್ರಮುಖ ಮಸೀದಿ ಬಳಿ ಪ್ರತಿಭಟನಾಕಾರರ ಗುಂಪುಗಳು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದಾರೆ.

ಬ್ರಹ್ಮನ್‌ಬರಿಯ ಜಿಲ್ಲೆಯಲ್ಲಿ ರೈಲು ಸಂಚಾರಕ್ಕೆ ಅಡ್ಡಿಪಡಿಸಿರುವ ಪ್ರತಿಭಟನಾಕಾರರು ರೈಲ್ವೆ ನಿಲ್ದಾಣದ ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಬಳಿಕ ಇದು ಮೋದಿಯವರ ಮೊದಲ ವಿದೇಶಿ ಭೇಟಿಯಾಗಿದೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ತಂದೆ ಹಾಗೂ ಸ್ವಾತಂತ್ರ್ಯ ನಾಯಕ ಶೇಖ್ ಮುಜಿಬುರ್ ರಹಮಾನ್ ಅವರ 100ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿಯೂ ಮೋದಿ ಪಾಲ್ಗೊಳ್ಳಲಿದ್ದಾರೆ.

ಇತ್ತೀಚೆಗೆ, ಬಾಂಗ್ಲಾದೇಶದ ಕೆಲ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಭೇಟಿಯನ್ನು ವಿರೋಧಿಸಿದ್ದರು. ಮೋದಿಗೆ ಆಹ್ವಾನ ಕೊಟ್ಟ ಪ್ರಧಾನಿ ಶೇಖ್ ಹಸೀನಾ ಅವರನ್ನೂ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT