ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸ್ಟ್ಯಾನ್‌ ಸ್ವಾಮಿ ಸಾವು ಭಾರತದ ಮಾನವ ಹಕ್ಕುಗಳ ದಾಖಲೆಯಲ್ಲಿ ಕಪ್ಪು ಚುಕ್ಕೆ'

Last Updated 17 ಜುಲೈ 2021, 6:59 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ/ಜಿನೀವಾ: ಮಾನವ ಹಕ್ಕುಗಳಿಗಾಗಿ ಹೋರಾಡಿದ ಸಾಮಾಜಿಕ ಕಾರ್ಯಕರ್ತ ಫಾದರ್ ಸ್ಟ್ಯಾನ್‌ ಸ್ವಾಮಿ ಅವರ ಸಾವು, ಭಾರತದ ಮಾನವ ಹಕ್ಕುಗಳ ದಾಖಲೆಯಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯುತ್ತದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಣತರು ಹೇಳಿದ್ದಾರೆ.

ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡಿದ ಸ್ವಾಮಿ ಅವರಿಗೆ, ಸಕಾರಣವಿಲ್ಲದೇ ಅವರ ಹಕ್ಕುಗಳನ್ನೇ ನಿರಾಕರಿಸಲಾಯಿತು. ಬಂಧನದಲ್ಲೇ ಸಾವನ್ನಪ್ಪಿದ್ದ ಸ್ವಾಮಿ ಅವರ ಸುದ್ದಿ ದಿಗ್ಭ್ರಮೆ ಮೂಡಿಸಿದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಗರ್‌ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಸ್ಟ್ಯಾನ್‌ ಸ್ವಾಮಿ ಅವರನ್ನು ಬಂಧಿಸಲಾಗಿತ್ತು. ಅವರು ಜುಲೈ 5 ರಂದು ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಣತರು ಗುರುವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಮೇರಿ ಲಾವ್‌ಲೋರ್‌ ಅವರು ’ಫಾದರ್ ಸ್ವಾಮಿ ಅವರ ಸಾವಿನ ಪ್ರಕರಣ, ಎಲ್ಲ ದೇಶಗಳ ಮಾನವ ಹಕ್ಕುಗಳ ರಕ್ಷಕರನ್ನು ಎಚ್ಚರಿಸುತ್ತಿದೆ. ಹಾಗೆಯೇ, ಸೂಕ್ತ ಸಾಕ್ಷಿ, ಆಧಾರವಿಲ್ಲದೇ ಬಂಧಿಸಿರುವ ಎಲ್ಲ ಮಾನವ ಹಕ್ಕುಗಳ ಕಾರ್ಯಕರ್ತರನ್ನು ಬಿಡಗಡೆ ಮಾಡಬೇಕು ಎಂಬ ಸಂದೇಶವನ್ನು ನೀಡುತ್ತಿದೆ’ ಎಂದು ಹೇಳಿದ್ದಾರೆ.

ಸತತ ನಾಲ್ಕು ದಶಕಗಳ ಕಾಲ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಫಾದರ್ ಸ್ವಾಮಿ ಕಸ್ಟಡಿಯಲ್ಲಿದ್ದಾಗಲೇ ಸಾವನ್ನಪ್ಪಿರುವ ಘಟನೆ, ಭಾರತದ ಮಾನವ ಹಕ್ಕುಗಳ ದಾಖಲೆಯಲ್ಲಿ ಶಾಶ್ವತ ಕಪ್ಪು ಚುಕ್ಕೆಯಾಗಿ ಉಳಿಯಲಿದೆ’ ಎಂದು ಲಾವ್‌ಲೊರ್ ಹೇಳಿದ್ದಾರೆ.

ಸ್ಟ್ಯಾನ್ ಸ್ವಾಮಿ ಸಾವಿನ ಕುರಿತು ಅಂತರರಾಷ್ಟ್ರೀಯ ಮಟ್ಟದಿಂದ ಕೇಳಿಬರುತ್ತಿರುವ ಇಂಥ ಆರೋಪಗಳನ್ನು ಭಾರತ ತಳ್ಳಿ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT