ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ ಚರ್ಚ್‌ಗಳಲ್ಲಿ 70 ವರ್ಷದಲ್ಲಿ 3.30 ಲಕ್ಷ ಮಕ್ಕಳಿಗೆ ಲೈಂಗಿಕ ದೌರ್ಜನ್ಯ

Last Updated 5 ಅಕ್ಟೋಬರ್ 2021, 10:33 IST
ಅಕ್ಷರ ಗಾತ್ರ

ಪ್ಯಾರಿಸ್‌: ಫ್ರಾನ್ಸ್‌ನ ಕ್ಯಾಥೋಲಿಕ್‌ ಚರ್ಚ್‌ಗಳಲ್ಲಿ 70 ವರ್ಷಗಳಲ್ಲಿ ಅಂದಾಜು 3,30,000 ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಮಂಗಳವಾರ ಬಿಡುಗಡೆ ಆಗಿರುವ ಫ್ರೆಂಚ್‌ ವರದಿಯೊಂದು ತಿಳಿಸಿದೆ.

ಪಾದ್ರಿಗಳು, ಧರ್ಮಗುರುಗಳು ಹಾಗೂ ಧಾರ್ಮಿಕೇತರ ಜನರು ಈ ಕೃತ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ದೌರ್ಜನ್ಯಕ್ಕೆ ಒಳಗಾದವರಲ್ಲಿ ಶೇ 80ರಷ್ಟು ಪುರುಷರು ಎಂದು ಈ ಕುರಿತು ವರದಿ ಸಲ್ಲಿಸಿದ ಆಯೋಗದ ಅಧ್ಯಕ್ಷ ಜೀನ್‌–ಮಾರ್ಕ್‌ ಸಾವೆ ತಿಳಿಸಿದ್ದಾರೆ.

ಈ ದೌರ್ಜನ್ಯಕ್ಕೆ ಒಳಗಾದವರ ಮೇಲೆ ಇದು ಗಂಭೀರ ಪರಿಣಾಮಗಳನ್ನು ಬೀರಿವೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸುಮಾರು ಶೇ 60ರಷ್ಟು ಪುರುಷರು ಮತ್ತು ಮಹಿಳೆಯರು ಜೀವನದಲ್ಲಿ ಭಾವನಾತ್ಮಕ ಅಥವಾ ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಸ್ವತಂತ್ರ ಆಯೋಗವು ಸಿದ್ಧಪಡಿಸಿದ ಸುಮಾರು 2,500 ಪುಟಗಳ ದಾಖಲೆಯು ಫ್ರಾನ್ಸ್‌ನ ಕ್ಯಾಥೊಲಿಕ್ ಚರ್ಚ್‌ಗಳ ನಾಚಿಕೆಗೇಡಿನ ರಹಸ್ಯಗಳನ್ನು ಬಿಚ್ಚಿಟ್ಟಿದೆ.

ಮಕ್ಕಳನ್ನು ದೌರ್ಜನ್ಯಕ್ಕೆ ಒಳಪಡಿಸಿಕೊಂಡ 3 ಸಾವಿರ ಜನರ ಪೈಕಿ ಮೂರನೇ ಎರಡರಷ್ಟು ಮಂದಿ ಇದೀಗ ಪಾದ್ರಿಗಳಾಗಿದ್ದಾರೆ. ಒಟ್ಟಾರೆ ಪಾದ್ರಿಗಳು, ಧರ್ಮಗುರುಗಳಿಂದಲೇ ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ 2.16 ಲಕ್ಷದಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎರಡೂವರೆ ವರ್ಷಗಳ ಕಾಲ ಕಾರ್ಯ ನಿರ್ವಹಿಸಿರುವ ಆಯೋಗವು ಸಂತ್ರಸ್ತರು ಮತ್ತು ಸಾಕ್ಷಿಗಳ ಮಾತುಗಳನ್ನು ಆಲಿಸಿದೆ. 1950ರಿಂದ ಚರ್ಚ್‌, ನ್ಯಾಯಾಲಯ, ಪೊಲೀಸ್‌ ಇಲಾಖೆಯ ಕಡತಗಳು ಮತ್ತು ಪತ್ರಿಕಾ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಿದೆ. ತನಿಖೆಯ ಆರಂಭದಲ್ಲಿ ಪ್ರಾರಂಭಿಸಲಾದ ಹಾಟ್‌ಲೈನ್‌ಗೆ 6,500 ಕರೆಗಳು ಬಂದಿದ್ದವು. ಅವುಗಳ ಪೈಕಿ ಸಂತ್ರಸ್ತರು ಹಾಗೂ ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ತಿಳಿದಿದ್ದವರು ಮಾಹಿತಿ ನೀಡಿದ್ದಾರೆ.

ಈ ಆಯೋಗವು ದೌರ್ಜನ್ಯ ತಡೆಗೆ 45 ಶಿಫಾರಸುಗಳನ್ನು ಮಾಡಿದೆ. ಅವುಗಳಲ್ಲಿ ಪಾದ್ರಿಗಳು ಮತ್ತು ಧರ್ಮಗುರುಗಳಿಗೆ ತರಬೇತಿ ನೀಡುವುದು, ಕ್ಯಾನನ್ ಕಾನೂನನ್ನು ಪರಿಷ್ಕರಿಸುವುದು, ಸಂತ್ರಸ್ತರನ್ನು ಗುರುತಿಸುವುದು ಮತ್ತು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಿವಿಧ ಶಿಫಾರಸುಗಳನ್ನು ಮಾಡಲಾಗಿದೆ ಎಂದು ಸಾವೆ ಹೇಳಿದ್ದಾರೆ.

ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಕ್ಯಾಥೋಲಿಕ್‌ ಪಾದ್ರಿ ಬರ್ನಾಡ್‌ ಪ್ರೀನಾಟ್‌ ಅವರಿಗೆ ಐದು ವರ್ಷಗಳ ಶಿಕ್ಷೆಯನ್ನು ಕಳೆದ ವರ್ಷವಷ್ಟೇ ವಿಧಿಸಲಾಗಿದೆ. ಅವರು 75 ಬಾಲಕರ ಮೇಲೆ ದೌರ್ಜನ್ಯ ಎಸಗಿರುವುದನ್ನು ಆ ವೇಳೆ ಒಪ್ಪಿಕೊಂಡಿದ್ದರು. ಆ ಪ್ರಕರಣದ ಬೆನ್ನಲ್ಲೇ ಇದೀಗ ಈ ವರದಿ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT