ಭಾನುವಾರ, ಅಕ್ಟೋಬರ್ 24, 2021
23 °C
ನಾಯಕತ್ವದಲ್ಲಿ ಬಿರುಕು ಅಲ್ಲಗಳೆದ ತಾಲಿಬಾನ್ ವಕ್ತಾರ

ತಾಲಿಬಾನ್‌ನಲ್ಲಿ ಬಣ ಜಗಳ ಭುಗಿಲು: ನಾಯಕತ್ವದಲ್ಲಿ ಬಿರುಕು ಅಲ್ಲಗಳೆದ ವಕ್ತಾರ

ಎಪಿ Updated:

ಅಕ್ಷರ ಗಾತ್ರ : | |

ಕಾಬೂಲ್: ತೀವ್ರವಾದಿಗಳಿಂದ ಕೂಡಿರುವ ಸಂಪುಟವನ್ನು ತಾಲಿಬಾನ್ ರಚಿಸಿರುವುದು ಸಂಘಟನೆಯ ವಾಸ್ತವವಾದಿಗಳು ಮತ್ತು ತೀವ್ರವಾದಿಗಳ ನಡುವಿನ ಘರ್ಷಣೆಗೆ ಕಾರಣವಾಗಿದೆ. ತೆರೆಮರೆಯಲ್ಲಿ ಜಗಳಗಳು ನಡೆದಿವೆ. ಆದರೆ ಅಧ್ಯಕ್ಷರ ಅರಮನೆಯಲ್ಲಿ ಎರಡು ಬಣಗಳ ನಡುವೆ ಇತ್ತೀಚೆಗೆ ನಡೆದ ಹಿಂಸಾತ್ಮಕ ಸಂಘರ್ಷದ ವದಂತಿಗಳು ಮಾತ್ರ ಬೇಗನೆ ಹರಡಿತು. ಒಂದು ಬಣದ ನಾಯಕ ಅಬ್ದುಲ್ ಘನಿ ಬರದರ್ ಹತ್ಯೆಯಾಯಿತು ಎಂಬಂತಹ ಸುದ್ದಿಗಳೂ ಹರಡಿದವು.

ವದಂತಿಗಳು ತೀವ್ರವಾಗಿ ಹರಡಿದ ಕಾರಣ, ಬರದರ್‌ನ ಧ್ವನಿಮುದ್ರಿಕೆ ಹಾಗೂ ಕೈಬರಹವನ್ನು ಬಿಡುಗಡೆ ಮಾಡ
ಬೇಕಾಯಿತು. ದೇಶದ ರಾಷ್ಟ್ರೀಯ ಸುದ್ದಿವಾಹಿನಿಯಲ್ಲಿ ಬರದರ್ ಕಾಣಿಸಿಕೊಂಡು, ತಾನು ಬದುಕಿದ್ದೇನೆ ಎಂದು ಸಾಬೀತುಪಡಿಸಬೇಕಾಯಿತು. 

ಅಮೆರಿಕ ಜೊತೆ ಸಂಧಾನ ಮಾತುಕತೆಯಲ್ಲಿ ಬರದರ್ ಮುಖ್ಯ ಸಂಧಾನಕಾರನ ಪಾತ್ರ ನಿರ್ವಹಿಸಿದ್ದರು. ಈ ಒಪ್ಪಂದದ ಬಳಿಕ  ಅಮೆರಿಕದ ಸೇನೆಯು ಅಫ್ಗನ್‌ನಿಂದ ವಾಪಸಾಗಿದೆ.

ರಾಜಧಾನಿ ಕಾಬೂಲ್ ನಗರವನ್ನು ಸ್ವಾಧೀನಪಡಿಸಿಕೊಂಡ ಸ್ವಲ್ಪ ಸಮಯದ ನಂತರ, ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ರಚನೆಯನ್ನು ಬರದರ್ ಮೊದಲಿಗೆ ಪ್ರಸ್ತಾಪಿಸಿದ್ದರು. ಆದರೆ ಕೇವಲ ಪುರುಷರು ಹಾಗೂ ತಾಲಿಬಾನಿಗಳಿಂದಲೇ ಕೂಡಿದ ಸರ್ಕಾರ ರಚನೆ ಮಾಡಿದ್ದರಿಂದ ಬರದರ್ ನೀಡಿದ್ದ ಭರವಸೆ ಹುಸಿಯಾಯಿತು. ತೀವ್ರವಾದಿಗಳ ಕೈ ಮೇಲಾಗಿದೆ ಎಂಬುದಕ್ಕೆ ಸಾಕ್ಷ್ಯವೆಂಬಂತೆ ಅಧ್ಯಕ್ಷರ ಅರಮನೆಯ ಮೇಲೆ ಅಫ್ಗಾನಿಸ್ತಾನದ ರಾಷ್ಟ್ರೀಯ ಧ್ವಜದ ಬದಲು ತಾಲಿಬಾನ್ನ ಬಿಳಿ ಧ್ವಜ ಹಾರಾಡುತ್ತಿದೆ.

ದೇಶದ ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ದೂರವಿಟ್ಟು ತಾಲಿಬಾನ್ ಸರ್ಕಾರ ರಚನೆಯಾಗಿರುವುದನ್ನು ಖಂಡಿಸಿ ಸಚಿವರೊಬ್ಬರು ತಮಗೆ ನೀಡಿದ್ದ ಮಂತ್ರಿ ಪದವಿಯನ್ನು ನಿರಾಕರಿಸಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಇಬ್ಬರು ವ್ಯಕ್ತಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಪ್ರಮುಖ ಕಾರ್ಯಕ್ರಮಗಳಲ್ಲಿ ಬರದರ್ ಕಾಣಿಸಿಕೊಳ್ಳುತ್ತಿಲ್ಲ. ಕತಾರ್ ಉಪಪ್ರಧಾನಿ ಭೇಟಿ ನೀಡಿದಾಗಲೂ ಅಧ್ಯಕ್ಷರ ಅರಮನೆಯಲ್ಲಿ ಬರದರ್ ಇರಲಿಲ್ಲ. ಕಾಬೂಲ್‌ಗೆ ಕತಾರ್‌ ನಿಯೋಗ ಬರುತ್ತಿರುವ ಮಾಹಿತಿ ತನಗೆ ಇರಲಿಲ್ಲ ಎಂದು ಬರದರ್ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ. ಸಂಘಟನೆ ಮುಖ್ಯಸ್ಥ ಹೈಬತುಲ್ಲಾ ಅಖುಂಜಾದಾ ಭೇಟಿಯಾಗಲು ಬರದರ್ ಕಂದಹಾರ್‌ನಲ್ಲಿದ್ದಾನೆ ಎಂದು ಮೂಲಗಳು ತಿಳಿಸಿವೆ. 20 ವರ್ಷಗಳ ಯುದ್ಧದ ಬಳಿಕ ತನ್ನ ಕುಟುಂಬದ ಭೇಟಿಗೆ ಹೋಗಿದ್ದಾರೆ ಎಂದು ಮತ್ತೊಂದು ಮೂಲ ತಿಳಿಸಿದೆ. ಶ್ರೀ

ನಾಯಕತ್ವದಲ್ಲಿ ಬಿರುಕು?

ನಾಯಕತ್ವದಲ್ಲಿ ಬಿರುಕು ಮೂಡಿದೆ ಎಂಬುದನ್ನು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ನಿರಾಕರಿಸಿದ್ದಾರೆ. ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತಾಕಿ ಸಹ ಅಲ್ಲಗಳೆದಿದ್ದಾರೆ.

‘ಪ್ರಸ್ತುತ ಆಂತರಿಕ ಭಿನ್ನಾಭಿಪ್ರಾಯಗಳನ್ನು ತಾಲಿಬಾನ್ ನಿರ್ವಹಿಸಬಹುದು. ಆದರೆ, ತನ್ನ ಶಕ್ತಿ ವೃದ್ಧಿಸಿಕೊಳ್ಳಲು, ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಪಡೆಯಲು ಹಾಗೂ ಪ್ರಮುಖ ನೀತಿಗಳನ್ನು ರೂಪಿಸುವ ಸವಾಲುಗಳು ತಾಲಿಬಾನ್ ಮುಂದಿವೆ.  ಈ ಪ್ರಯತ್ನಗಳು ವಿಫಲವಾದರೆ, ಸಂಘಟನೆಯಲ್ಲಿ ಹೆಚ್ಚು ಹೆಚ್ಚು ಗಂಭೀರ ಅಂತಃಕಲಹಗಳು ಉಂಟಾಗಬಹುದು’ ಎಂದು ಅಮೆರಿಕದ ವಿಲ್ಸನ್ ಸೆಂಟರ್‌ನ ವಿಶ್ಲೇಷಕ ಮೈಕೆಲ್ ಕುಗೆಲ್‌ಮನ್ ಅಭಿಪ್ರಾಯಪಟ್ಟಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು