ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಭೇಟಿ ನೀಡಲು ಪೋಪ್‌ ಸಮ್ಮತಿ: ಪ್ರಧಾನಿ ಮೋದಿಯಿಂದ ಪುಸ್ತಕ ಉಡುಗೊರೆ

ಆತ್ಮೀಯ ಸಂವಾದ; ಆಲಂಗಿಸಿ, ಉಡುಗೊರೆ ಕೊಟ್ಟ ಪ್ರಧಾನಿ
Last Updated 30 ಅಕ್ಟೋಬರ್ 2021, 21:15 IST
ಅಕ್ಷರ ಗಾತ್ರ

ವ್ಯಾಟಿಕನ್ ಸಿಟಿ: ಜಿ–20 ಶೃಂಗಸಭೆ ಪ್ರಯುಕ್ತ ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಕ್ರೈಸ್ತ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರನ್ನು ಶನಿವಾರ ಭೇಟಿ ಮಾಡಿ, ಮಾತುಕತೆ ನಡೆಸಿದರು.

ಭಾರತಕ್ಕೆ ಭೇಟಿ ನೀಡುವಂತೆ ಪೋಪ್‌ ಅವರನ್ನು ಆಮಂತ್ರಿಸಿದರು. ಮೋದಿ ಆಹ್ವಾನವನ್ನು ಪೋಪ್ ಒಪ್ಪಿಕೊಂಡಿದ್ದು, ಅವರು ಭಾರತಕ್ಕೆ ಭೇಟಿ ನೀಡುವುದು ಖಚಿತಪಟ್ಟಿದೆ.

ಪೋಪ್ ಅವರನ್ನು ಆತ್ಮೀಯವಾಗಿ ಆಲಂಗಿಸಿಕೊಂಡ ಮೋದಿ, ಬೆಳ್ಳಿಯಿಂದ ತಯಾರಿಸಲಾದ ಮೇಣದಬತ್ತಿ ಸ್ಟ್ಯಾಂಡ್ ಹಾಗೂ ಹವಾಮಾನ ವೈಪರೀತ್ಯ ತಡೆ ಹೋರಾಟದಲ್ಲಿ ಭಾರತದ ನಿಲುವು ಕುರಿತ ಪುಸ್ತಕವೊಂದನ್ನು ಪ್ರಧಾನಿ ಉಡುಗೊರೆಯಾಗಿ ನೀಡಿದರು.

1999ರಲ್ಲಿ ಪೋಪ್ ಜಾನ್ ಪಾಲ್ 2 ಅವರು ಭಾರತಕ್ಕೆ ಬಂದಿದ್ದು,ಅಧಿಕೃತವಾಗಿ ಕೊನೆಯ ಭೇಟಿಯಾಗಿತ್ತು.

‘ಪೋಪ್ ಫ್ರಾನ್ಸಿಸ್ ಅವರೊಂದಿಗೆ ಅತ್ಯಂತ ಆತ್ಮೀಯ ಸಂವಾದ ನಡೆಸಿದ್ದೇನೆ. ಅವರೊಂದಿಗೆ ವ್ಯಾಪಕ ವಿಷಯಗಳ ಬಗ್ಗೆ ಚರ್ಚಿಸಲು ನನಗೆ ಅವಕಾಶ ಸಿಕ್ಕಿತು. ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದೆ’ ಎಂದು ಮೋದಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

‘ನಿಮ್ಮ ಭೇಟಿಗೆ ತುಂಬಾ ಧನ್ಯವಾದಗಳು. ನನಗೆ ತುಂಬಾ ಸಂತೋಷವಾಗಿದೆ’ ಎಂದು ಪೋಪ್ ಹೇಳಿದ್ದಾರೆ. ‘ನಿಮ್ಮನ್ನು ಭಾರತದಲ್ಲಿ ಭೇಟಿಯಾಗಲು ಬಯಸುತ್ತೇನೆ’ ಎಂದು ಪ್ರಧಾನಿ ಪ್ರತಿಕ್ರಿಯಿಸಿದರು.

ಫ್ರಾನ್ಸಿಸ್ ಮತ್ತು ಮೋದಿ ನಡುವಿನ ಮೊದಲ ಭೇಟಿಗೆ 20 ನಿಮಿಷ ಸಮಯ ನಿಗದಿಯಾಗಿತ್ತು. ಆದರೆ ಮಾತುಕತೆ ಒಂದು ಗಂಟೆ ಮುಂದುವರಿಯಿತು. ಮಾತುಕತೆ ಆ‍ಪ್ತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಾಟಿಕನ್ ಹೊರಡಿಸಿರುವ ಟಿಪ್ಪಣಿಯಲ್ಲಿ ಇದನ್ನು ‘ಸಂಕ್ಷಿಪ್ತ ಸಂಭಾಷಣೆ’ ಎಂದು ವಿವರಿಸಲಾಗಿದೆ. ಭಾರತದ ನಡುವಿನ ಸೌಹಾರ್ದ ಸಂಬಂಧಗಳನ್ನು ಚರ್ಚಿಸಲಾಗಿದೆ ಎಂದು ಉಲ್ಲೇಖಿಸಿದೆ. ಹವಾಮಾನ ಬದಲಾವಣೆ ಹಾಗೂ ಬಡತನ ವಿರುದ್ಧದ ಹೋರಾಟದ ಬಗ್ಗೆ ಚರ್ಚಿಸಲಾಗಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಪ್ರಧಾನಿ ಜತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊಭಾಲ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಇದ್ದರು. ಪೋಪ್ ಅವರನ್ನು ಆಹ್ವಾನಿಸಿದ ಪ್ರಧಾನಿಯವರ ನಿರ್ಧಾರ ಐತಿಹಾಸಿಕ ಎಂದು ಕೇರಳಕ್ಯಾಥೊಲಿಕ್ ಬಿಷಪ್ ಮಂಡಳಿ ಹೇಳಿದೆ.

2017ರಲ್ಲಿ ಬರಬೇಕಿತ್ತು:ವರ್ಷಗಳ ಹಿಂದೆ ಪೋಪ್ ಅವರ ಭಾರತ ಪ್ರವಾಸದ ವೇಳಾಪಟ್ಟಿಯನ್ನು ವ್ಯಾಟಿಕನ್ ಸಿದ್ಧಪಡಿಸಿತ್ತು. ‘ಮುಂದಿನ ವರ್ಷ ಬಾಂಗ್ಲಾದೇಶ ಹಾಗೂ ಭಾರತಕ್ಕೆ ಭೇಟಿ ನೀಡುವುದು ಬಹುತೇಕ ಖಚಿತ’ ಎಂದು 2016ರಲ್ಲಿ ಫ್ರಾನ್ಸಿಸ್ ಹೇಳಿದ್ದರು. ಆದರೆ ಅವರ ಭೇಟಿ ಸಾಧ್ಯವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT