ಬುಧವಾರ, ಜನವರಿ 27, 2021
16 °C

ಎಚ್‌1ಬಿ ವೀಸಾ ನಿಯಮ ಬದಲು: ವಲಸಿಗರ ಕನಿಷ್ಠ ವೇತನ ಭಾರಿ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಎಚ್‌1ಬಿಯಂತಹ ವೀಸಾಗಳ ಮೂಲಕ ಬಂದು ಕೆಲಸ ಮಾಡುವ ವಿದೇಶಿ ವೃತ್ತಿಪರರ ಕನಿಷ್ಠ ವೇತನವನ್ನು ಗಣನೀಯವಾಗಿ ಏರಿಕೆ ಮಾಡಿ, ಹೊಸ ನಿಯಮಗಳನ್ನು ಅಮೆರಿಕ ಸರ್ಕಾರ ಪ್ರಕಟಿಸಿದೆ. ವಿದೇಶದ ವೃತ್ತಿಪರರು ಕಡಿಮೆ ವೇತನಕ್ಕೆ ಅಮೆರಿಕಕ್ಕೆ ಬಂದು ಕೆಲಸ ಮಾಡಿ, ಅಮೆರಿಕನ್ನರಿಗೆ ಕೆಲಸ ಸಿಗದಂತೆ ಆಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. 

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಧಿಕಾರದಿಂದ ಕೆಳಗೆ ಇಳಿಯಲು ಕೆಲವೇ ದಿನಗಳಿರುವಾಗ ಅಲ್ಲಿನ ಕಾರ್ಮಿಕ ಇಲಾಖೆಯು ಈ ನಿಯಮಗಳನ್ನು ಜಾರಿಗೆ ತಂದಿದೆ. ಇದರಿಂದಾಗಿ ಅಮೆರಿಕದ ಜನರ ಉದ್ಯೋಗದ ಅವಕಾಶಗಳು ಮತ್ತು ವೇತನ ಪ್ರಮಾಣಕ್ಕೆ ರಕ್ಷಣೆ ದೊರೆಯುತ್ತದೆ.  ಎಚ್‌1ಬಿಯಂತಹ ವೀಸಾಗಳ ದುರ್ಬಳಕೆ ತಪ್ಪುತ್ತದೆ ಎಂದು ಕಾರ್ಮಿಕ ಇಲಾಖೆಯು ಹೇಳಿದೆ. 

ಒಂದೇ ರೀತಿಯ ಉದ್ಯೋಗಕ್ಕೆ ಅಮೆರಿಕದ ವೃತ್ತಿಪರರಿಗೆ ನೀಡಿದಷ್ಟೇ ವೇತನವನ್ನು ವಲಸಿಗ ವೃತ್ತಿಪರರಿಗೂ ನೀಡಬೇಕು ಎಂದು ಹೊಸ ನಿಯಮವು ಹೇಳುತ್ತಿದೆ. 

ಎಚ್‌1ಬಿ ಎಂಬುದು ವಲಸೆ ವೀಸಾ ಅಲ್ಲ, ಅದು ಅಲ್ಲಿ ಕೆಲಸ ಮಾಡುವುದಕ್ಕೆ ಮಾತ್ರ ಅವಕಾಶ ಇರುವ ವೀಸಾ. ತಾಂತ್ರಿಕ ಮತ್ತು ಇತರ ವೃತ್ತಿ ಪರಿಣತರನ್ನು ಈ ವೀಸಾದ ಮೂಲಕ ಅಮೆರಿಕಕ್ಕೆ ಕರೆಸಿಕೊಳ್ಳಲು ಕಂಪನಿಗಳಿಗೆ ಅವಕಾಶ ಇದೆ. ತಂತ್ರಜ್ಞಾನ ಆಧಾರಿತ ಕಂಪನಿಗಳು, ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ (ಐ.ಟಿ) ಕಂಪನಿಗಳು ಈ ವೀಸಾ ಮೂಲಕ ಭಾರತ ಮತ್ತು ಚೀನಾದಿಂದ ಸಾವಿರಾರು ವೃತ್ತಿಪರರನ್ನು ಕರೆಸಿಕೊಂಡಿವೆ. 

ಅಮೆರಿಕದ ವೃತ್ತಿಪರರಿಗಿಂತ ಕಡಿಮೆ ವೇತನಕ್ಕೆ ವಿದೇಶಿ ವೃತ್ತಿಪರರು ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕೆ ಕಂಪನಿಗಳು ಈ ವೀಸಾ ಮೂಲಕ ವೃತ್ತಿಪರರನ್ನು ತಾತ್ಕಾಲಿಕ ಅಥವಾ ಕಾಯಂ ಆಗಿ ನೇಮಿಸಿಕೊಳ್ಳುತ್ತಿದ್ದವು. ಆದರೆ, ಇನ್ನು ಮುಂದೆ ಕಂಪನಿಗಳಿಗೆ ಆ ಆರ್ಥಿಕ ಅನುಕೂಲ ಸಿಗದು ಎಂದು ಕಾರ್ಮಿಕ ಇಲಾಖೆ ತಿಳಿಸಿದೆ. 

ವಲಸಿಗರನ್ನು ನಿಯಂತ್ರಿಸುವುದು ಟ್ರಂಪ್‌ ಅವರ ಮುಖ್ಯ ನಿಲುವುಗಳಲ್ಲಿ ಒಂದಾಗಿತ್ತು. ಮುಸ್ಲಿಮರು ಬಹುಸಂಖ್ಯಾತರಾಗಿರುವ ಏಳು ದೇಶಗಳಿಂದ ಅಮೆರಿಕಕ್ಕೆ ವಲಸೆ ಹೋಗುವುದಕ್ಕೆ ಅವರು ನಿಷೇಧ ಹೇರಿದ್ದರು. ಟ್ರಂಪ್‌ ಅವರ ಅಧಿಕಾರಾವಧಿಯ ಕೊನೆಯವರೆಗೂ ಅದು ಮುಂದುವರಿದಿದೆ. 

ಎಚ್‌1ಬಿ ವೀಸಾ, ಇತರ ವೃತ್ತಿಪರ ವೀಸಾಗಳು ಮತ್ತು ಗ್ರೀನ್ ‌ಕಾರ್ಡ್‌ ನೀಡಿಕೆಯನ್ನು ಅವರು ಮಾರ್ಚ್‌ 31ರವರೆಗೆ ಸ್ಥಗಿತಗೊಳಿಸಿದ್ದಾರೆ. ಎಚ್‌1ಬಿ ವೀಸಾ ನೀಡಿಕೆಗೆ ಈತನಕ ಲಾಟರಿ ಪದ್ಧತಿ ಅನುಸರಿಸಲಾಗುತ್ತಿತ್ತು. ಈ ನಿಯಮವನ್ನು ಕಳೆದ ವಾರ ಅವರು ಬದಲಾಯಿಸಿದ್ದಾರೆ. ವೇತನ ಮತ್ತು ಕೌಶಲದ ಆಧಾರದಲ್ಲಿ ವೀಸಾ ನೀಡುವ ನಿಯಮವನ್ನು ಜಾರಿಗೆ ತರಲಾಗಿದೆ. 

ಬೈಡನ್‌ ನಿಲುವು ಭಿನ್ನ

ಅಮೆರಿಕದ 46ನೇ ಅಧ್ಯಕ್ಷರಾಗಿ ಇದೇ 20ರಂದು ಅಧಿಕಾರ ವಹಿಸಿಕೊಳ್ಳಲಿರುವ ಜೋ ಬೈಡನ್‌ ಅವರಿಗೆ ಟ್ರಂಪ್‌ ಅವರ ವಲಸೆ ನೀತಿಯ ಬಗ್ಗೆ ಒಲವು ಇಲ್ಲ. ಇದು ಅತ್ಯಂತ ಕ್ರೂರ ವಲಸೆ ನೀತಿ ಎಂದು ಅವರು ಟೀಕಿಸಿದ್ದಾರೆ. ತಾವು ಅಧಿಕಾರಕ್ಕೆ ಬಂದ ಬಳಿಕ ಎಚ್‌1ಬಿ ವೀಸಾ ಸ್ಥಗಿತ ಆದೇಶವನ್ನು ರದ್ದುಗೊಳಿಸುವುದಾಗಿಯೂ ಅವರು ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು