ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್‌ ಒಪ್ಪಂದದಲ್ಲಿ ಅಮೆರಿಕ ಮರುಸೇರ್ಪಡೆ: ಕಮಲಾ ಹ್ಯಾರಿಸ್‌

Last Updated 29 ಆಗಸ್ಟ್ 2020, 8:40 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ನಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಪ್ಯಾರಿಸ್‌ ಒಪ್ಪಂದದಲ್ಲಿ ಅಮೆರಿಕವನ್ನು ಮರು ಸೇರ್ಪಡೆ ಮಾಡುತ್ತೇವೆ. ಇರಾನ್‌ ಜೊತೆಗಿನ ಐತಿಹಾಸಿಕ ಪರಮಾಣು ಒಪ್ಪಂದಕ್ಕೂ ಮರುಜೀವ ನೀಡಿ ಅದನ್ನು ಬಲಪಡಿಸುತ್ತೇವೆ’ ಎಂದು ಅಮೆರಿಕದ ಉಪಾಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರು ಪ್ರತಿಜ್ಞೆ ಮಾಡಿದ್ದಾರೆ.

ಹವಾಮಾನ ಬದಲಾವಣೆಯನ್ನು ತಡೆಯುವುದಕ್ಕಾಗಿ ಜಾಗತಿಕ ಮಟ್ಟದಲ್ಲಿ 2015ರಲ್ಲಿ ಮಾಡಲಾದ ಮಹತ್ವದ ಪ್ಯಾರಿಸ್‌ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಿತ್ತು. ಟ್ರಂಪ್‌ ಅಧ್ಯಕ್ಷರಾದ ನಂತರ ಅಮೆರಿಕವು ಈ ಒಪ್ಪಂದದಿಂದ ಹಿಂದೆ (2017) ಸರಿದಿತ್ತು.

ಬರಾಕ್‌ ಒಬಾಮ ಅವರು ಅಧ್ಯಕ್ಷರಾಗಿದ್ದ ವೇಳೆ (2015) ಮಾಡಿಕೊಳ್ಳಲಾಗಿದ್ದ ಇರಾನ್‌ ಜೊತೆಗಿನ ಪರಮಾಣು ಒಪ್ಪಂದವನ್ನೂ ಟ್ರಂಪ್‌ 2018ರಲ್ಲಿ ರದ್ದುಗೊಳಿಸಿದ್ದರು.

55 ವರ್ಷ ವಯಸ್ಸಿನ ಕಮಲಾ ಅವರು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಶುಕ್ರವಾರ ನಡೆದ ಆನ್‌ಲೈನ್‌ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಟ್ರಂಪ್‌ ಅಧಿಕಾರಕ್ಕೆ ಬಂದ ಬಳಿಕ ಅನೇಕ ಎಡವಟ್ಟುಗಳನ್ನು ಮಾಡಿದ್ದಾರೆ. ಅವುಗಳನ್ನೆಲ್ಲಾ ಸರಿಪಡಿಸಲು ನಾವು ಪ್ರಯತ್ನಿಸುತ್ತೇವೆ. ಜಾಗತಿಕ ಮಟ್ಟದಲ್ಲಿ ಅಮೆರಿಕವು ಮತ್ತೆ ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇವೆ. ಏಷ್ಯಾ ಮತ್ತು ಯುರೋಪ್‌ ರಾಷ್ಟ್ರಗಳ ಜೊತೆಗಿನ ಮೈತ್ರಿಯನ್ನು ಗಟ್ಟಿಗೊಳಿಸುವುದಲ್ಲದೆ ಆ ದೇಶಗಳ ನಂಬಿಕೆಯನ್ನೂ ಮರಳಿ ಗಳಿಸುತ್ತೇವೆ’ ಎಂದಿದ್ದಾರೆ.

‘ಒಮ್ಮೆ ಮಿತ್ರ ರಾಷ್ಟ್ರಗಳಿಗೆ ಮಾತು ಕೊಟ್ಟ ನಂತರ ಅದಕ್ಕೆ ಬದ್ಧರಾಗಿರಬೇಕು. ಅದು ನ್ಯಾಟೊ, ಪ್ಯಾರಿಸ್‌ ಅಥವಾ ಇನ್ಯಾವುದೇ ಒಪ್ಪಂದವಾಗಿರಬಹುದು. ಆದರೆ ಟ್ರಂಪ್‌ ಹಾಗೆ ಮಾಡಲಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆ ಇಲ್ಲ. ಏಕತೆ ಮತ್ತು ಸ್ಥಿರತೆಯ ಮಹತ್ವವೇ ಅವರಿಗೆ ಗೊತ್ತಿಲ್ಲ’ ಎಂದು ಹ್ಯಾರಿಸ್‌, ಕಿಡಿಕಾರಿದ್ದಾರೆ.

‘2009ರಲ್ಲಿ ಜಾಗತಿಕ ಆರ್ಥಿಕತೆ ಕುಸಿಯುವ ಹಂತದಲ್ಲಿತ್ತು. ಆಗ ಅಧ್ಯಕ್ಷ ಬರಾಕ್‌ ಒಬಾಮ ಮತ್ತು ಜೊ ಬೈಡನ್‌ ಅವರು ಅಮೆರಿಕದ ವಾಹನ ಉದ್ಯಮವನ್ನು ಬಲಪಡಿಸಿ ಮಿಷಿಗನ್‌ ಜನರಲ್ಲಿ ಆತ್ಮಸ್ಥೈರ್ಯ ತುಂಬಿದ್ದರು. ಅಮೆರಿಕದ ಆರ್ಥಿಕತೆಗೆ ಹೊಸ ಸ್ಪರ್ಶ ನೀಡಿದ್ದರು. ಆಗ ಅವರು ತೆಗೆದುಕೊಂಡ ನಿರ್ಧಾರ ನಿಜಕ್ಕೂ ಶ್ಲಾಘನೀಯ. ನಾವೀಗ ಮತ್ತೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದೇವೆ. ಈಗ ಮತ್ತೆ ಬೈಡನ್‌ ಅವರು ಮರಳಿದ್ದಾರೆ’ ಎಂದು ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT