ಭಾನುವಾರ, ಮೇ 29, 2022
21 °C

ಕ್ಯಾಪಿಟಲ್‌ ಹಿಲ್‌ ದಾಳಿ: 9/11 ಮಾದರಿಯಲ್ಲಿ ಸ್ವತಂತ್ರ ಆಯೋಗದಿಂದ ತನಿಖೆ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಕ್ಯಾಪಿಟಲ್‌ ಹಿಲ್‌ ಕಟ್ಟಡದ ಮೇಲೆ ಜನವರಿ 6ರಂದು ನಡೆದ ದಾಳಿಯ ಬಗ್ಗೆ 9/11 ದಾಳಿಯ ಬಳಿಕ ರಚಿಸಿದಂತಹ ಸ್ವತಂತ್ರ ಆಯೋಗದ ಮಾದರಿಯಲ್ಲೇ ಆಯೋಗ ರಚಿಸಿ ತನಿಖೆ ನಡೆಸುವ ಚಿಂತನೆ ನಡೆದಿದೆ.

ಅಮೆರಿಕದ ಜನಪ್ರತಿನಿಧಿಗಳ ಸಭೆಯ ಸಭಾಧ್ಯಕ್ಷೆ ನ್ಯಾನ್ಸಿ ಪೆಲೋಸಿ ಅವರು ಈ ಪ್ರಸ್ತಾಪ ಮಂಡಿಸಿದ್ದು, ಟ್ರಂಪ್‌ ಅವರು ವಾಗ್ದಂಡನೆಯಿಂದ ಪಾರಾದ ಎರಡು ದಿನಗಳ ಒಳಗೆಯೇ ಈ ಬೆಳವಣಿಗೆ ನಡೆದಿದೆ.

‘ವಾಗ್ದಂಡನೆಯ ವಿಚಾರಣೆ ವೇಳೆ ಕೆಲವೊಂದು ವಿಷಯಗಳು ತಿಳಿದುಬಂದಿದೆ. ಹಾಗಾಗಿ ನಿಜವಾಗಿ ಏನು ನಡೆದಿದೆ. ಇದರ ಹಿಂದಿನ ಸತ್ಯವೇನು ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ’ ಎಂದು ನ್ಯಾನ್ಸಿ ಪೆಲೊಸಿ ಅವರು ಸಂಸತ್‌ ಸಭೆಗೆ ಪತ್ರದ ಮೂಲಕ ತಿಳಿಸಿದ್ದಾರೆ.

‘ನಮ್ಮ ಭದ್ರತೆಯನ್ನು ಕಾಪಾಡಿಕೊಳ್ಳಲು ನಾವು ಮುಂದಿನ ನಡೆಯನ್ನು ಕೈಗೊಳ್ಳಬೇಕು. ಜನವರಿ 6ರಂದು ಕ್ಯಾಪಿಟಲ್‌ ಹಿಲ್‌ ಕಟ್ಟಡದ ಮೇಲೆ ನಡೆದ ದೇಶೀಯ ಭಯೋತ್ಪಾದನಾ ದಾಳಿಯ ಬಗ್ಗೆ ತನಿಖೆ ನಡೆಸಲು 9/11 ದಾಳಿ ಮಾದರಿ ಸ್ವತಂತ್ರ ಆಯೋಗವನ್ನು ಸ್ಥಾಪಿಸಬೇಕು’ ಎಂದು ಪೆಲೋಸಿ ಅವರು ಪತ್ರದಲ್ಲಿ ಬರೆದಿದ್ದಾರೆ.

ಎರಡು ಪಕ್ಷದ ನಾಯಕರು ಇದೇ ಬೇಡಿಕೆಯನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷೆ ನ್ಯಾನ್ಸಿ ಪೆಲೊಸಿ ಅವರು ಜನಪ್ರತಿನಿಧಿಗಳ ಸಭೆಯಲ್ಲಿ ಆಯೋಗದ ರಚನೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.  ರಿಪಬ್ಲಿಕನ್‌ ಸಂಸದರಾದ ರೊಡ್ನಿ ಡೇವಿಸ್‌, ಜಾನ್‌ ಕ‌ಟ್ಕೊ ಮತ್ತು ಜೇಮ್ಸ್‌ ಕಮರ್‌ ಅವರು ಉಭಯಪಕ್ಷೀಯ ಆಯೋಗವನ್ನು ರಚಿಸುವ ಮಸೂದೆಯನ್ನು ಮಂಡಿಸುವ ಸಿದ್ಧತೆಯಲ್ಲಿದ್ದಾರೆ.

ಈ ಬಗ್ಗೆ ಬೆಂಬಲ ಸೂಚಿಸಿ ಟ್ವೀಟ್‌ ಮಾಡಿರುವ ಭಾರತ ಮೂಲದ ಅಮೆರಿಕನ್‌ ಸಂಸದ ರಾಜಾ ಕೃಷ್ಣಮೂರ್ತಿ ಅವರು,‘ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕ್ಯಾಪಿಟಲ್‌ ಹಿಲ್‌ ಹಿಂಸಾಚಾರವು ಕರಾಳ ದಿನವಾಗಿದೆ. ಈ ಬಗ್ಗೆ ಸಂಪೂರ್ಣ ಪರಿಶೀಲನೆ ಮತ್ತು ತನಿಖೆ ಆಗಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು