ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆರುಸಲೇಂ ಹಿಂಸಾಚಾರ: ಭಾರತ ಕಳವಳ

Last Updated 12 ಮೇ 2021, 5:47 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ : ಇಸ್ರೇಲ್‌ ಮತ್ತು ಪ್ಯಾಲೆಸ್ಟೈನ್‌ ಉಗ್ರರ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತ, ಜೆರುಸಲೇಂನ ‘ಟೆಂಪಲ್‌ ಮೌಂಟ್‌’ ಪ್ರದೇಶದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿದೆ.

ಶೇಕ್‌ ಜರಾ ಮತ್ತು ಅಲ್ಲಿನ ಸುತ್ತಮುತ್ತಲು ನೆಲೆಸಿರುವವರನ್ನು ಬಲವಂತವಾಗಿ ಹೊರದಬ್ಬುತ್ತಿರುವ ಕೃತ್ಯಕ್ಕೂ ಭಾರತ ಬೇಸರ ವ್ಯಕ್ತಪಡಿಸಿದೆ. ಎರಡೂ ಕಡೆಯವರು ಯಥಾಸ್ಥಿತಿ ಬದಲಿಸುವ ಪ್ರಯತ್ನವನ್ನು ಕೈಬಿಡಬೇಕು ಎಂದೂ ಆಗ್ರಹಿಸಿದೆ.

ಪೂರ್ವ ಜೆರುಸಲೇಂನಲ್ಲಿ ಉಲ್ಬಣಗೊಳ್ಳು‌ತ್ತಿರುವ ಉದ್ವಿಗ್ನ ಪರಿಸ್ಥಿತಿಯ ಕುರಿತು ಮಂಗಳವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ, ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್‌. ತಿರುಮೂರ್ತಿ ಅವರು ಭಾರತದ ಕಳವಳವನ್ನು ದಾಖಲಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ತಿರುಮೂರ್ತಿ, ಎರಡೂ ಕಡೆಯವರು ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಅದನ್ನು ಬದಲಿಸುವ ಪ್ರಯತ್ನಗಳಿಂದ ದೂರ ಇರಬೇಕು ಎಂದು ಭಾರತ ಆಗ್ರಹಿಸಿದ್ದಾಗಿ ಹೇಳಿದ್ದಾರೆ. ಅಲ್ಲದೆ ಗಾಜಾದ ರಾಕೆಟ್‌ ದಾಳಿಯನ್ನು ಭಾರತ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ಎರಡೂ ಕಡೆಯವರ ನಡುವೆ ನೇರವಾಗಿ ಶಾಂತಿ ಮಾತುಕತೆಯನ್ನು ತಕ್ಷಣ ಪುನರಾರಂಭಿಸಬೇಕು ಎಂದು ತಿರುಮೂರ್ತಿ ಒತ್ತಾಯಿಸಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್‌ ಅವರೂ ಸಹ ಪ್ಯಾಲೆಸ್ಟೈನ್‌ ಮತ್ತು ಇಸ್ರೇಲ್‌ನಲ್ಲಿ ಉಲ್ಬಣಗೊಂಡಿರುವ ಉದ್ವಿಗ್ನ ಸ್ಥಿತಿಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ರಾತ್ರಿ 9 ಗಂಟೆಯವರೆಗೆ ಹಿಂಸಾಚಾರದಲ್ಲಿ ಕನಿಷ್ಠ 31 ಜನರು ಮೃತರಾಗಿದ್ದಾರೆ. ಸೋಮವಾರ ಸಂಜೆಯಿಂದ ಗಾಜಾ ಮೂಲದ ಉಗ್ರರು ಇಸ್ರೇಲ್‌ ಮೇಲೆ ನೂರಾರು ರಾಕೆಟ್‌ ದಾಳಿ ನಡೆಸಿದ್ದರು.

ಇಸ್ರೇಲ್‌ನಲ್ಲಿರುವ 30 ವರ್ಷದ ಭಾರತೀಯ ಮಹಿಳೆ ಸೌಮ್ಯಾ ಸಂತೋಷ್ ಎಂಬುವರು ಗಾಜಾದ ಪ್ಯಾಲೆಸ್ಟೈನ್‌ ಉಗ್ರರು ನಡೆಸಿದ ರಾಕೆಟ್ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇವರು ಕೇರಳದ ಇಡುಕ್ಕಿ ಜಿಲ್ಲೆಯವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT