ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆಯಾಗುತ್ತಿದೆ ರಷ್ಯಾ ಮೇಲಿನ ಭಾರತದ ಮಿಲಿಟರಿ ಅವಲಂಬನೆ: ಜಾನ್ ಕಾರ್ನಿನ್

Last Updated 28 ಅಕ್ಟೋಬರ್ 2021, 5:38 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತವು ರಷ್ಯಾದ ಮೇಲಿನ ಮಿಲಿಟರಿ ಅವಲಂಬನೆಯನ್ನು ಕಡಿಮೆ ಮಾಡಲು ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಅಮೆರಿಕದ ಹಿರಿಯ ಸೆನೆಟ್‌ ಸದಸ್ಯ ಜಾನ್ ಕಾರ್ನಿನ್ ಹೇಳಿದ್ದಾರೆ.

ಅಮೆರಿಕ– ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಸಹಯೋಗದೊಂದಿಗೆ ‘ಅಮೆರಿಕ ಇಂಡಿಯಾ ಫ್ರೆಂಡ್‌ಶಿಪ್ ಕೌನ್ಸಿಲ್’ ಆಯೋಜಿಸಿದ್ದ ‘ಸದ್ಯದ ಜಾಗತಿಕ ವಿದ್ಯಮಾನದಲ್ಲಿ ಭಾರತ– ಅಮೆರಿಕ ಸಹಭಾಗಿತ್ವ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. ಕಾರ್ನಿನ್‌ ಅವರು ಪ್ರಬಲ ಸೆನೆಟ್ ಇಂಡಿಯಾ ಸಮಿತಿಯ ಸಹ-ಅಧ್ಯಕ್ಷರೂ ಆಗಿದ್ದಾರೆ.

‌ಎಸ್‌–400 ಕ್ಷಿಪಣಿ ವ್ಯವಸ್ಥೆಯನ್ನು ಭಾರತವು ರಷ್ಯಾದಿಂದ ಖರೀದಿಸುತ್ತಿರುವ ಕಾರಣ ಭಾರತದ ವಿರುದ್ಧ ಸಿಎಎಟಿಎಸ್‌ಎ ಕಾಯ್ದೆಯ ಮೂಲಕ ನಿರ್ಬಂಧ ಹೇರಲು ಬೈಡನ್‌ ಆಡಳಿತ ಚಿಂತಿಸುತ್ತಿದೆ. ಇದರ ಬೆನ್ನಲ್ಲೇ ಈ ರೀತಿಯ ನಿರ್ಬಂಧಗಳನ್ನು ಹೇರದಂತೆ ಜಾನ್‌ ಕಾರ್ನಿನ್‌ ಅವರು ಬೈಡನ್‌ ಸರ್ಕಾರವನ್ನು ಆಗ್ರಹಿಸಿ, ಸಂಸದ ಮೈಕ್ ವಾಲ್ಟ್ಜ್ ಜತೆಗೂಡಿ ಮಂಗಳವಾರ ಪತ್ರ ಬರೆದಿದ್ದರು.

‘ಭಾರತವು ಜವಾಬ್ದಾರಿಯುತ ರಾಷ್ಟ್ರ ಎಂಬುದು ನಮಗೆಲ್ಲ ತಿಳಿದಿದೆ. ಭಾರತದಿಂದ ಅಮೆರಿಕಕ್ಕೆ ಆರ್ಥಿಕ ಪ್ರಯೋಜನಗಳೂ ಇವೆ. ಜತೆಗೆ ಮಿಲಿಟರಿ ಮತ್ತು ಭದ್ರತಾ ಸಹಕಾರವೂ ಇದೆ. 2016ರಲ್ಲಿ ಅಮೆರಿಕವು ಭಾರತವನ್ನು ತನ್ನ ಪ್ರಮುಖ ಪಾಲುದಾರ ರಾಷ್ಟ್ರ ಎಂದು ಗುರುತಿಸಿದೆ. ಆನಂತರ ನಾವು ರಕ್ಷಣಾ ಪಾಲುದಾರಿಕೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಶ್ರಮಿಸಿದ್ದೇವೆ’ ಎಂದು ರಿಪಬ್ಲಿಕನ್‌ ಪಕ್ಷದ ಹಿರಿಯ ನಾಯಕರೂ ಆಗಿರುವ ಕಾರ್ನಿನ್‌ ತಿಳಿಸಿದ್ದಾರೆ.

‘ರಷ್ಯಾದಿಂದ ಎಸ್‌–400 ಕ್ಷಿಪಣಿ ವ್ಯವಸ್ಥೆಯ ಖರೀದಿ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ನಿರ್ಬಂಧಗಳನ್ನು ಹೇರಿದರೆ, ಅದು ಭಾರತ– ಅಮೆರಿಕದ ನಡುವೆ ಬೆಳೆಯುತ್ತಿರುವ ಸಂಬಂಧಕ್ಕೆ ತೊಡಕಾಗಬಹುದು’ ಎಂದು ಅವರು ಹೇಳಿದ್ದಾರೆ.

‘ಆದರೆ, ಭಾರತವು ರಷ್ಯಾದ ಮಿಲಿಟರಿ ಉಪಕರಣಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿರುವುದನ್ನು ಗಮನಿಸಿದರೆ ನಮ್ಮಲ್ಲಿ ವಿಶ್ವಾಸ ಮೂಡುತ್ತದೆ ಎಂದು ಭಾವಿಸಿದ್ದೇನೆ. ಭಾರತವು ಇನ್ನೊಂದೆಡೆ ಅಮೆರಿಕದಿಂದ ಉಪಕರಣಗಳನ್ನು ಖರೀದಿಸಲು ಆಸಕ್ತಿ ತೋರಿಸಿದೆ. ಅಲ್ಲದೆ ಎರಡೂ ದೇಶಗಳ ನಡುವೆ ಸಮಾನ ಮೌಲ್ಯಗಳು ಹಂಚಿಕೆಯಾಗಿರುವುದು ಉಭಯ ದೇಶಗಳ ನಡುವೆ ಸಂಬಂಧವನ್ನು ನಿಕಟವಾಗಿಸುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT