ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತವನ್ನು ಎಷ್ಟು ಕಾಲ ಹೊರಗಿಡುತ್ತೀರಿ?

ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ 75ನೇ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ
Last Updated 26 ಸೆಪ್ಟೆಂಬರ್ 2020, 22:48 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ‘ನಿರ್ಧಾರಗಳನ್ನು ಕೈ ಗೊಳ್ಳುವ ವಿಶ್ವ ಸಂಸ್ಥೆಯ ರಚನಾ ವ್ಯವಸ್ಥೆಯಿಂದ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವನ್ನು ಎಷ್ಟು ಕಾಲದವರೆಗೆ ಹೊರಗಿಡುತ್ತೀರಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯನ್ನು ಪ್ರಶ್ನಿಸಿದ್ದಾರೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯ 75ನೇ ಅಧಿವೇಶನಕ್ಕೆ ನೀಡಿದ್ದ ಪೂರ್ವಮುದ್ರಿತ ವಿಡಿಯೊ ಹೇಳಿಕೆಯಲ್ಲಿ, ಜಗತ್ತಿನ ಕಲ್ಯಾಣಕ್ಕಾಗಿ ವಿಶ್ವಸಂಸ್ಥೆಯನ್ನು ಬಲಪಡಿಸಬೇಕಾಗಿದೆ. ಜಾಗತಿಕ ಬೆಳವಣಿಗೆಗಳ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳುವ ಈ ಸಂಸ್ಥೆಯ ರಚನೆಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದ್ದು ಇಂದಿನ ಅಗತ್ಯ ಎಂದು ವಾದಿಸಿದ್ದಾರೆ.

‘ದೇಶವೊಂದ ರಲ್ಲಿ ಆಗುತ್ತಿರುವ ಪರಿವರ್ತನೆಗಳು ಜಗತ್ತಿನ ಮೇಲೆ ಪರಿಣಾಮ ಬೀರುತ್ತಿದ್ದರೆ, ಅಂಥ ರಾಷ್ಟ್ರವನ್ನು ಎಷ್ಟು ಕಾಲದವರೆಗೆ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಿಂದ ಹೊರಗಿಡಲು ಸಾಧ್ಯ? ವಿಶ್ವಸಂಸ್ಥೆಯ ತೀರ್ಮಾನಗಳನ್ನು ಕೈಗೊಳ್ಳುವ ರಚನಾ ವ್ಯವಸ್ಥೆಯೊಳಗಿನಿಂದ ಭಾರತವನ್ನು ಎಷ್ಟು ಕಾಲ ಹೊರಗಿಡಲು ಸಾಧ್ಯ? ಭಾರತದ 130 ಕೋಟಿ ಜನರು ವಿಶ್ವಸಂಸ್ಥೆಯ ಮೇಲೆ ಸಾಟಿ ಇಲ್ಲದ ವಿಶ್ವಾಸವಿಟ್ಟಿದ್ದಾರೆ. ವಿಶ್ವಸಂಸ್ಥೆಯ 1945ರಲ್ಲಿ ರಚನೆಯಾದ ಭದ್ರತಾ ಮಂಡಳಿಯು ಸಮಕಾಲೀನ ವಾಸ್ತವಗಳನ್ನು ಪ್ರತಿನಿಧಿಸುತ್ತಿಲ್ಲ. 21ನೇ ಶತಮಾನದ ಸವಾಲುಗಳನ್ನು ಎದುರಿಸಲು ಅದು ಸಮರ್ಥವಾಗಿಲ್ಲ. ಭದ್ರತಾ ಮಂಡಳಿಯ ಪುನರ್‌ರಚನೆ ಆಗಬೇಕು ಎಂಬುದನ್ನು ಭಾರತೀಯರು ಬಹುಕಾಲದಿಂದ ನಿರೀಕ್ಷಿಸುತ್ತಿದ್ದಾರೆ ಎಂದರು.

ವಿಶ್ವ ಸಂಸ್ಥೆಯ ರಚನೆಯಲ್ಲಿ ಬದಲಾವಣೆ ಆಗಬೇಕು ಎಂಬುದನ್ನು ಒತ್ತಿ ಹೇಳಿದ ಅವರು, ಭಾರತವು ಜಗತ್ತಿನ ಶೇ 18ರಷ್ಟು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ. ನಾವು ಬಲಿಷ್ಠರಾಗಿದ್ದಾಗ ಯಾವ ದೇಶಕ್ಕೂ ನಾವು ಅಪಾಯಕಾರಿ ಆಗಿರಲಿಲ್ಲ, ನಾವು ದುರ್ಬಲರಾದಾಗ ಯಾವ ದೇಶಕ್ಕೂ ಹೊರೆಯೂ ಆಗಿರಲಿಲ್ಲ. ಬದಲಾಗುತ್ತಿರುವ ಸಮಯಕ್ಕೆ ಅನುಗುಣವಾಗಿ ನಾವೂ ಬದಲಾಗಬೇಕಾಗಿದೆ ಎಂದು ಹೇಳಿದರು.

ಅಲ್ಪಸಂಖ್ಯಾತರಷ್ಟೇ ಅಲ್ಲ, ಮುಸ್ಲಿಮರ ಹತ್ಯೆಯೂ ನಿಂತಿಲ್ಲ: ಭಾರತ ಆರೋಪ
ನವದೆಹಲಿ:
‍‍ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ, ಕ್ರೈಸ್ತರು‌ ಹಾಗೂ ಸಿಖ್ಖರಿಗೆ ಕಿರುಕುಳ ನೀಡುವುದಲ್ಲದೇ, ಕೊಲ್ಲಲಾಗುತ್ತಿದೆ. ಮುಸ್ಲಿಮರ ಹತ್ಯೆಯೂ ನಡೆಯುತ್ತಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಭಾರತ ಆರೋಪಿಸಿತು.

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು, ಇಸ್ಲಾಂ ಕುರಿತಂತೆ ಭಾರತದ ಜನರಲ್ಲಿ ಭಯ ಹುಟ್ಟುಹಾಕುತ್ತಿದೆ (ಇಸ್ಲಾಮೋಫೋಬಿಯಾ) ಎಂದು ಆರೋಪಿಸಿದರು. ಇದನ್ನು ಪ್ರತಿಭಟಿಸಿದ ಭಾರತದ ಪ್ರತಿನಿಧಿಗಳು ಸಭೆಯಿಂದ ಹೊರ ನಡೆಸಿದರು.

ನಂತರ, ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿಯ ಪ್ರಥಮ ಕಾರ್ಯದರ್ಶಿ ಮಿಜಿತೊ ವಿನಿಟೊ ಅವರು,ಇಮ್ರಾನ್‌ಖಾನ್‌ ಆರೋಪಕ್ಕೆ ತಿರುಗೇಟು ನೀಡಿದರು.

‘ಒತ್ತಾಯದ ಮತಾಂತರ, ಧರ್ಮನಿಂದನೆ ಕಾನೂನು ಬಳಸಿ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂ,ಕ್ರೈಸ್ತರು ಹಾಗೂ ಸಿಖ್ಖರ ಜನಸಂಖ್ಯೆಯನ್ನು ವ್ಯವಸ್ಥಿತವಾಗಿ ಕಡಿಮೆ ಮಾಡಲಾಗಿದೆ‘ ಎಂದು ಟೀಕಿಸಿದರು.

‘ತನ್ನನ್ನು ಇಸ್ಲಾಂನ ಅನುಯಾಯಿ ಎಂದು ಹೇಳಿಕೊಳ್ಳುತ್ತಿರುವ ರಾಷ್ಟ್ರದಲ್ಲಿರುವ ಇಸ್ಲಾಂನ ಬೇರೆ ಮತಾನುಯಾಯಿಗಳು, ಬೇರೆ ಪ್ರದೇಶಕ್ಕೆ ಸೇರಿದವರನ್ನು ಕೊಲ್ಲಲಾಗುತ್ತಿದೆ. ಅವರ ಮೇಲೆ ಭಯೋತ್ಪಾದಕ ದಾಳಿ ನಡೆಸಲಾಗುತ್ತಿದೆ’ ಎಂದೂ ವಾಗ್ದಾಳಿ ನಡೆಸಿದರು.

‘ಜುಲೈನಲ್ಲಿ ಪಾಕಿಸ್ತಾನದ ಸಂಸತ್‌ನಲ್ಲಿ ಮಾತ ನಾಡಿದ ಪ್ರಧಾನಿ ಇಮ್ರಾನ್‌ ಖಾನ್‌,ಅಲ್‌ಕೈದಾ ಮುಖಂಡ ಒಸಾಮಾ ಬಿನ್‌ ಲಾಡೆನ್‌ನನ್ನು ಹುತಾತ್ಮ ಎಂಬುದಾಗಿ ಕರೆದರು. 2019ರಲ್ಲಿ ಅಮೆರಿಕದ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ಪಾಕಿಸ್ತಾನದಲ್ಲಿ ಇನ್ನೂ 30,000–40,000 ಉಗ್ರರು ಸಕ್ರಿಯರಾಗಿದ್ದಾರೆ. ಅಫ್ಗಾನಿಸ್ತಾನ, ಜಮ್ಮು–ಕಾಶ್ಮೀರದಲ್ಲಿ ಹೋರಾಡಲು ಇವರಿಗೆ ತರಬೇತಿ ನೀಡಲಾಗಿದೆ ಎಂದಿದ್ದರು’ ಎಂದೂ ಟೀಕಿಸಿದರು.

ಪೂರ್ಣ ಸಾಮರ್ಥ್ಯ ಬಳಕೆ: ಮೋದಿ
‘ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತವು ಜಗತ್ತಿನ ರಾಷ್ಟ್ರಗಳ ಜತೆ ಕೈಜೋಡಿಸಲಿದೆ. ಲಸಿಕೆ ತಯಾರಿಕೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯ ರಾಷ್ಟ್ರವೆನಿಸಿರುವ ಭಾರತವು ತನ್ನ ತಯಾರಿಕೆ ಮತ್ತು ವಿತರಣಾ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಲಿದೆ ಎಂಬ ಭರವಸೆಯನ್ನು ನೀಡುತ್ತೇನೆ’ ಎಂದು ಮೋದಿ ಹೇಳಿದರು.

ಕೊರೊನಾ ವಿರುದ್ಧದ ಹೋರಾಟದಲ್ಲಿ ವಿಶ್ವ ಸಂಸ್ಥೆಯ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೋದಿ, ಕಳೆದ 8–9 ತಿಂಗಳಿಂದ ಇಡೀ ಜಗತ್ತು ಕೊರೊನಾ ಪಿಡುಗನ್ನು ಎದುರಿಸುತ್ತಿದೆ. ಈ ಹೋರಾಟ ದಲ್ಲಿ ವಿಶ್ವ ಸಂಸ್ಥೆ ಎಲ್ಲಿದೆ? ಪರಿಣಾಮಪಾರಿ ಪ್ರತಿಕ್ರಿಯೆ ಎಲ್ಲಿದೆ? ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT