ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್ ಗೃಹ ಕಾರ್ಯದರ್ಶಿ ಸ್ಥಾನಕ್ಕೆ ಭಾರತೀಯ ಮೂಲದ ಪ್ರೀತಿ ಪಟೇಲ್ ರಾಜೀನಾಮೆ

Last Updated 6 ಸೆಪ್ಟೆಂಬರ್ 2022, 1:29 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ನ ನೂತನ ಪ್ರಧಾನಿಯಾಗಿ ಲಿಜ್‌ ಟ್ರಸ್‌ ಅವರು ಆಯ್ಕೆಯಾದ ಬೆನ್ನಲ್ಲೇ ಭಾರತೀಯ ಮೂಲದಪ್ರೀತಿ ಪಟೇಲ್‌ ಅವರು ಗೃಹ ಕಾರ್ಯದರ್ಶಿ ಸ್ಥಾನ ತೊರೆಯಲು ನಿರ್ಧರಿಸಿದ್ದಾರೆ. ಈ ಸಂಬಂಧ ನಿರ್ಗಮಿತ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್‌ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿರುವ ಅವರು, ನೂತನ ಪ್ರಧಾನಿಗೆ ಅಗತ್ಯ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಪಟೇಲ್‌ ಅವರು ಜಾನ್ಸನ್‌ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದರು. ಅವರು ಲಿಜ್‌ ಟ್ರಸ್‌ ಬಣದಲ್ಲಿ ಮುಂದುವರಿಯುವ ಬಗ್ಗೆ ವ್ಯಾಪಕ ಅನುಮಾನಗಳು ವ್ಯಕ್ತವಾಗಿದ್ದವು.

'ನಮ್ಮ ನೂತನ ನಾಯಕಿಯಾಗಿ ಆಯ್ಕೆಯಾಗಿರುವ ಲಿಟ್‌ ಟ್ರಸ್‌ ಅವರನ್ನು ಅಭಿನಂದಿಸುತ್ತೇನೆ. ನಮ್ಮ ನೂತನ ಪ್ರಧಾನ ಮಂತ್ರಿಗೆ ನನ್ನ ಬೆಂಬಲವನ್ನು ನೀಡುತ್ತೇನೆ' ಎಂದುಪಟೇಲ್‌ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

'ಲಿಜ್‌ ಅವರು ಅಧಿಕಾರ ವಹಿಸಿಕೊಂಡ ಬಳಿಕ, ನೂತನ ಗೃಹ ಕಾರ್ಯದರ್ಶಿ ನೇಮಕವಾದ ನಂತರವೂ ದೇಶ ಹಾಗೂ ವಿಧಮ್‌ ಕ್ಷೇತ್ರದ ಜನರ ಸೇವೆ ಮುಂದುವರಿಸುತ್ತೇನೆ. ಹಿಂದಿನ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿದ್ದುಕೊಂಡು ಹಲವು ಯೋಜನೆಗಳನ್ನು ರೂಪಿಸಿದ್ದೇನೆ' ಎಂದೂ ಹೇಳಿಕೊಂಡಿದ್ದಾರೆ.

ಪಟೇಲ್‌ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ಭಾರತೀಯ ಮೂಲದವರೇ ಆದ ಸುವೆಲ್ಲಾ ಬ್ರೇವ್‌ಮನ್‌ ಆಯ್ಕೆಯಾಗುವ ಸಾಧ್ಯತೆ ಇದೆ.

ಹಗರಣ ಮತ್ತು ಸಂಪುಟ ಸದಸ್ಯರ ಅವಿಶ್ವಾಸದಿಂದ ಅಧಿಕಾರ ಕಳೆದುಕೊಂಡಿರುವ ಬೋರಿಸ್‌ ಅವರ ನಂತರ ಬ್ರಿಟನ್‌ನ ಮುಂದಿನ ಪ್ರಧಾನಿ ಯಾರು ಆಗಲಿದ್ದಾರೆಂಬ ಹಲವು ತಿಂಗಳುಗಳ ಕುತೂಹಲಕ್ಕೆ ಸೋಮವಾರ ತೆರೆ ಬಿದ್ದಿದೆ.

ವಿದೇಶಾಂಗ ಸಚಿವೆಯಾಗಿದ್ದ ಲಿಜ್‌ ಟ್ರಸ್‌ ಅವರು ಕನ್ಸರ್ವೇಟಿವ್ ಪಕ್ಷದ ನೂತನ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಅವರು,ಮಾರ್ಗರೇಟ್‌ ಥ್ಯಾಚರ್‌ ಮತ್ತು ಥೆರೆಸಾ ಮೇ ಅವರ ನಂತರ ದೇಶ ಮುನ್ನಡೆಸುವ ಮೂರನೇ ಮಹಿಳಾ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಬ್ರಿಟನ್‌ ಟೋರಿ ನಾಯಕತ್ವ ಚುನಾವಣಾ ಅಖಾಡದಲ್ಲಿ 47ರ ಹರೆಯದ ಲಿಜ್‌ ಟ್ರಸ್‌ ಅವರಿಗೆ ನಿರೀಕ್ಷಿತ ಗೆಲುವು ಸಿಕ್ಕಿದೆ. ಜಾನ್ಸನ್‌ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಭಾರತೀಯ ಮೂಲದ ರಿಷಿ ಸುನಕ್‌ ಅವರನ್ನು ಸುಮಾರು 21 ಸಾವಿರ ಮತಗಳ ಅಂತರದಿಂದ ಮಣಿಸಿದ್ದಾರೆ. ಹೀಗಾಗಿ ಟೋರಿ ನಾಯಕಿ ಮತ್ತು ಬ್ರಿಟನ್‌ ಪ್ರಧಾನಿ ಹುದ್ದೆಯ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಟ್ರಸ್‌ ಅವರು,2015ರ ಚುನಾವಣೆ ನಂತರ ಕನ್ಸರ್ವೇಟಿವ್‌ ಪಕ್ಷದಿಂದ ಆಯ್ಕೆಯಾದ ನಾಲ್ಕನೇ ಪ್ರಧಾನಿ ಎಂಬುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT