ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಹುಗಾರಿಕೆ ನೌಕೆ ವಿಚಾರದಲ್ಲಿ ಭಾರತವನ್ನು ಟೀಕಿಸಿದ್ದ ಚೀನಾಕ್ಕೆ ತಕ್ಕ ತಿರುಗೇಟು 

Last Updated 28 ಆಗಸ್ಟ್ 2022, 3:14 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದ ಹಂಬಂಟೋಟ ಬಂದರಿಗೆ ಚೀನಾದ ಬೇಹುಗಾರಿಕಾ ನೌಕೆ ‘ಯುವಾನ್ ವಾಂಗ್–5’ ಬರುವುದನ್ನು ಆಕ್ಷೇಪಿಸಿದ್ದಕ್ಕೆ ಭಾರತವನ್ನು ಟೀಕಿಸಿದ್ದ ಚೀನಾಕ್ಕೆ ಶನಿವಾರ ಸರಿಯಾದ ತಿರುಗೇಟು ಸಿಕ್ಕಿದೆ.

ಶ್ರೀಲಂಕಾದಲ್ಲಿರುವ ಚೀನಾ ರಾಯಭಾರಿ ಮೂಲ ರಾಜತಾಂತ್ರಿಕ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಎಂದು ಭಾರತ ಹೇಳಿದೆ.

ಹಂಬಂಟೋಟ ಬಂದರಿನಲ್ಲಿ ಲಂಗರು ಹಾಕಲು ಚೀನಾದ ಬೇಹುಗಾರಿಕಾ ನೌಕೆಗೆ ಅನುಮತಿ ನೀಡಿದ ಶ್ರೀಲಂಕಾದ ನಿರ್ಧಾರವನ್ನು ಭಾರತ ಆಕ್ಷೇಪಿಸಿತ್ತು. ಈ ಬಗ್ಗೆ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದ ಶ್ರೀಲಂಕಾದಲ್ಲಿರುವ ಚೀನಾದ ರಾಯಭಾರಿ ಕ್ವಿ ಝೆನ್‌ಹಾಂಗ್, ‘ಯಾವುದೇ ಪುರಾವೆಗಳಿಲ್ಲದೆ ಭದ್ರತಾ ಕಾಳಜಿ ಆಧಾರದಲ್ಲಿ ಬಾಹ್ಯ ಶಕ್ತಿಗಳಿಂದ ಆಗುವ ಅಡಚಣೆಯು, ವಾಸ್ತವವಾಗಿ ಶ್ರೀಲಂಕಾದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯದ ವಿಚಾರದಲ್ಲಿ ಮಾಡಿದ ಹಸ್ತಕ್ಷೇಪವಾಗಿದೆ’ ಎಂದಿದ್ದರು. ಆದರೆ, ಎಲ್ಲಿಯೂ ಭಾರತದ ಉಲ್ಲೇಖವನ್ನು ಮಾಡುವ ಧೈರ್ಯವನ್ನು ಚೀನಾದ ರಾಯಭಾರಿ ಮಾಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸರಣಿ ಟ್ವೀಟ್‌ ಮಾಡಿದ್ದು, ಆಕ್ರೋಶ ವ್ಯಕ್ತಪಡಿಸಿದೆ. ‘ಚೀನಾ ರಾಯಭಾರಿಯವರ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ರಾಜತಾಂತ್ರಿಕ ಶಿಷ್ಟಾಚಾರದ ಉಲ್ಲಂಘನೆಯ ಅವರ ನಡೆಯು ವೈಯಕ್ತಿಕವೂ ಆಗಿರಬಹುದು ಅಥವಾ ರಾಷ್ಟ್ರೀಯ ಮನೋಭಾವವನ್ನು ಪ್ರತಿಬಿಂಬಿಸುತ್ತಲೂ ಇರಬಹುದು’ ಎಂದು ಹೇಳಿದೆ.

‘ಭಾರತದ ಬಗೆಗಿನ ಅವರ ವರ್ತನೆ ಅವರ ಸ್ವಂತ ದೇಶದ ನಡವಳಿಕೆಯ ಪ್ರತಿಬಿಂಬವಾಗಿದೆ. ಆದರೆ ಭಾರತ ಹಾಗಲ್ಲ ಎಂದು ನಾವು ಅವರಿಗೆ ಭರವಸೆ ನೀಡುತ್ತೇವೆ. ವೈಜ್ಞಾನಿಕ ಸಂಶೋಧನೆಗೆಂದು ಹೇಳಲಾದ ಹಡಗಿನ ಆಗಮನಕ್ಕೆ ಭೌಗೋಳಿಕ ರಾಜಕೀಯ ಬಣ್ಣ ಕಟ್ಟುವ ಅವರ ಕ್ರಮವು ಬೂಟಾಟಿಕೆಯಾಗಿದೆ’ ಎಂದು ಭಾರತ ಟೀಕಿಸಿದೆ.

‘ಅಪಾರದರ್ಶಕತೆ ಮತ್ತು ಸಾಲ ನೀಡುವುದರ ಹಿಂದಿನ ಅಜೆಂಡಾಗಳು ಶ್ರೀಲಂಕಾದಂಥ ಸಣ್ಣ ರಾಷ್ಟ್ರಗಳಿಗೆ ಸದ್ಯ ಇರುವ ಪ್ರಮುಖ ಸವಾಲು. ಇತ್ತೀಚಿನ ಬೆಳವಣಿಗೆಗಳು ಎಚ್ಚರಿಕೆ ಕರೆಗಂಟೆಯಾಗಿವೆ. ಶ್ರೀಲಂಕಾಕ್ಕೆ ಈಗ ಬೆಂಬಲದ ಅಗತ್ಯವಿದೆ. ಮತ್ತೊಂದು ದೇಶದ ಕಾರ್ಯಸೂಚಿಯನ್ನು ಪೂರೈಸಲು ಅನಗತ್ಯ ಒತ್ತಡ ಅಥವಾ ಅನಗತ್ಯ ವಿವಾದಗಳಲ್ಲ‘ ಎಂದು ಭಾರತೀಯ ಹೈಕಮಿಷನ್ ತನ್ನ ಟ್ವಿಟರ್ ಸ್ಪಷ್ಟಪಡಿಸಿದೆ.

ಚೀನಾದ ರಾಯಭಾರಿ ಶುಕ್ರವಾರ ಲೇಖನವೊಂದನ್ನು ಬರೆದಿದ್ದರು. "ಉತ್ತರದ ನೆರೆಹೊರೆಯವರಿಂದ 17 ಬಾರಿ ಆಕ್ರಮಣವನ್ನು ಶ್ರೀಲಂಕಾ ಜಯಿಸಿದೆ. ಅದರ ಶ್ರೇಷ್ಠ ಇತಿಹಾಸವನ್ನು ಒಮ್ಮೆ ಹಿಂತಿರುಗಿ ನೋಡಿದರೆ, 450 ವರ್ಷಗಳ ಪಾಶ್ಚಾತ್ಯ ವಸಾಹತುಶಾಹಿ, ಮೂರು ದಶಕಗಳ ಭಯೋತ್ಪಾದನಾ ವಿರೋಧಿ ಸಮರ ಕಾಣುತ್ತದೆ. ಆದರೂ, ಜಗತ್ತಿನಲ್ಲಿ ಧೈರ್ಯದಿಂದ ಮತ್ತು ಹೆಮ್ಮೆಯಿಂದ ಶ್ರೀಲಂಕಾ ನಿಂತಿದೆ. ಶ್ರೀಲಂಕಾದ ರಾಷ್ಟ್ರೀಯ ಸಾರ್ವಭೌಮತ್ವ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆಯ ವಿಚಾರದಲ್ಲಿನ ಯಾವುದೇ ಉಲ್ಲಂಘನೆಯನ್ನು ಸಹಿಸಲಾಗದು’ ಎಂದು ಬರೆದಿದ್ದಾರೆ.

ಆಗಸ್ಟ್‌ 16ರಂದು ಶ್ರೀಲಂಕಾದ ಹಂಬಂಟೋಟದಲ್ಲಿರುವ, ಚೀನಾ ನಿರ್ಮಿತ ಬಂದರಿಗೆ ಬಂದಿದ್ದ ‘ಯುವಾನ್ ವಾಂಗ್ 5’ ಹೆಸರಿನ ಚೀನಾ ನೌಕೆ ಏಳು ದಿನಗಳ ಕಾಲ ಅಲ್ಲಿಯೇ ಲಂಗರು ಹಾಕಿತ್ತು. ಆಗಸ್ಟ್‌ 22ರಂದು ನಿರ್ಗಮಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT