ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಸಾಯುವ ಭಯ- ಅಪ್ರಾಪ್ತ ಮಗಳನ್ನು ಇರಿದು ಹತ್ಯೆ ಮಾಡಿದ ಭಾರತೀಯ ಮಹಿಳೆ

Last Updated 26 ಜೂನ್ 2021, 4:34 IST
ಅಕ್ಷರ ಗಾತ್ರ

ಲಂಡನ್: ಕೋವಿಡ್‌ನಿಂದಾಗಿ ತಾನು ಸಾಯುವ ಮತ್ತು ತಾನಿಲ್ಲದೆ ಪುಟ್ಟ ಮಗಳು ಇರುವುದಿಲ್ಲವೆಂದು ಭಾವಿಸಿದ ಕಾರಣ ಇಂಗ್ಲೆಂಡ್‌ನಲ್ಲಿ ಭಾರತ ಮೂಲದ 36 ವರ್ಷದ ಮಹಿಳೆಯೊಬ್ಬಳು ತನ್ನ ಐದು ವರ್ಷದ ಮಗಳನ್ನು ಹತ್ಯೆ ಮಾಡಿರುವುದಾಗಿ ಶುಕ್ರವಾರ ಮಾಧ್ಯಮಗಳು ವರದಿ ಮಾಡಿವೆ.

ಸುತಾ ಶಿವನಾಥಂ ಎಂಬಾಕೆ ತನ್ನ ಪುತ್ರಿ ಸಯಾಗಿಯನ್ನು ತಮ್ಮ ದಕ್ಷಿಣ ಲಂಡನ್ ಫ್ಲಾಟ್‌ನ ಮಲಗುವ ಕೋಣೆಯಲ್ಲಿ 15 ಬಾರಿ ಇರಿದಿದ್ದಾರೆ ಎಂದು ಮೆಟ್ರೋ.ಸಿಒ.ಯುಕೆ ವರದಿ ಮಾಡಿದೆ.

'ಕೊರೊನಾ ವೈರಸ್ ಸೋಂಕು ತಗುಲಬಹುದು ಎಂಬ ಬಗ್ಗೆ ಭಯಗೊಂಡಿದ್ದಳು ಮತ್ತು ಲಾಕ್‌ಡೌನ್ ನಿರ್ಬಂಧಗಳು ಆಕೆಯನ್ನು ಈ ರೀತಿ ಮಾಡುವಂತೆ ಪ್ರೇರೇಪಿಸಿರಬಹುದು' ಎಂದು ಆಕೆಯ ಪತಿ ತಿಳಿಸಿದ್ದಾರೆ.

ಗುರುವಾರ ನ್ಯಾಯಾಲಯಕ್ಕೆ ಹಾಜರಾದ ಶಿವನಾಥಂ ಕೊಲೆ ಮಾಡಿರುವುದನ್ನು ನಿರಾಕರಿಸಿದರು. ಆದರೆ ಬಳಿಕ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ವಿವಾಹದ ನಂತರ 2006 ರಿಂದ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದ ಶಿವನಾಥಂ, ದುರಂತಕ್ಕೂ ಮುನ್ನ ಸುಮಾರು ಒಂದು ವರ್ಷದ ಮೊದಲಿನಿಂದಲೂ ನಿಗೂಢ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಆಕೆಯು ಅಸಹಜ ಅನಾರೋಗ್ಯದಿಂದ ಬಳಲುತ್ತಿದ್ದಳು ಮತ್ತು ಆಕೆ ತಾನು ಸಾಯುತ್ತೇನೆಂದು ಮನವರಿಕೆ ಮಾಡಿಕೊಂಡಿದ್ದಳು ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

ದುರಂತ ನಡೆಯುವ ದಿನದಂದು ಆಕೆ ಕೆಲಸಕ್ಕೆ ಹೋಗದಂತೆ ತನ್ನ ಗಂಡನನ್ನು ಬೇಡಿಕೊಂಡಿದ್ದಳು ಮತ್ತು ತಾನು ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಸ್ನೇಹಿತರಿಗೂ ಕರೆ ಮಾಡಿ ತಿಳಿಸಿದ್ದರು. ಸಂಜೆ 4 ಗಂಟೆ ಸುಮಾರಿಗೆ ನೆರೆಹೊರೆಯವರು ಮಿಚಮ್‌ನ ಮೊನಾರ್ಕ್ ಪೆರೇಡ್‌ನಲ್ಲಿರುವ ಫ್ಲ್ಯಾಟ್‌ಗೆ ತೆರಳಿದಾಗ ಶಿವನಾಥಂ ಅವರ ಹೊಟ್ಟೆಯಲ್ಲಾಗಿರುವ ಇರಿತದ ಗಾಯಗಳನ್ನು ಗಮನಿಸಿದ್ದಾರೆ. ಅಲ್ಲದೆ ಹಾಸಿಗೆ ಮೇಲೆ ಮಲಗಿದ್ದ ಸಯಾಗಿಯ ಕುತ್ತಿಗೆ, ಎದೆ ಮತ್ತು ಹೊಟ್ಟೆ ಭಾಗದಲ್ಲಿ ಹಲವಾರು ಬಾರಿ ಇರಿಯಲಾಗಿತ್ತು.

ಗಾಯಗೊಂಡಿದ್ದ ಶಿವನಾಥಂ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯು ಪೊಲೀಸ್ ಕಸ್ಟಡಿಗೆ ತೆರಳುವ ಮುನ್ನ ಎರಡು ತಿಂಗಳಿಗಿಂತಲೂ ಹೆಚ್ಚು ಕಾಲ ಚಿಕಿತ್ಸೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT