ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ನಿರ್ಬಂಧಕ್ಕೆ ರಾಜಕೀಯ ಕಾರಣಗಳಿಂದ ತಡೆ: ಚೀನಾ ವಿರುದ್ಧ ಭಾರತ ಕಿಡಿ

26/11 ಕೃತ್ಯ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚೀನಾ ವಿರುದ್ಧ ಭಾರತದ ಆರೋಪ
Last Updated 25 ನವೆಂಬರ್ 2022, 12:04 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಮುಂಬೈನ 26/11ರ ಉಗ್ರರ ದಾಳಿ ಪ್ರಕರಣದ ಅಪರಾಧಿಗಳು ಹಾಗೂ ಅವರಿಗೆ ನೆರವಾದವರಿಗೆ ನಿರ್ಬಂಧ ಹೇರುವ ಭಾರತದ ಯತ್ನಕ್ಕೆ ‘ರಾಜಕೀಯ ಕಾರಣಗಳಿಗೆ’ ತಡೆಯೊಡ್ಡಲಾಗಿದೆ ಎಂದು ಭಾರತ ಪ್ರತಿಪಾದಿಸಿದೆ. ಅಲ್ಲದೆ, ದೇಶದ ವಿರುದ್ಧ ಹಿಂಸಾಕೃತ್ಯ ಎಸಗಲು ಬೆಂಬಲ ನೀಡಲಾಗುತ್ತಿದೆ ಎಂದು ಚೀನಾದ ವಿರುದ್ಧ ಪರೋಕ್ಷವಾಗಿ ಆರೋಪಿಸಿದೆ.

ಪಾಕ್‌ ಮೂಲದ ಉಗ್ರರ ಸಂಘಟನೆಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಭಾರತದ ಕ್ರಮಕ್ಕೆ ತಡೆಯೊಡ್ಡುವ ಚೀನಾದ ಪುನರಾವರ್ತಿತ ಪ್ರಯತ್ನವನ್ನು ಉಲ್ಲೇಖಿಸಿ ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿ, ರಾಯಭಾರಿ ರುಚಿರಾ ಕಾಂಬೋಜ್ ಈ ಮಾತು ಹೇಳಿದರು.

ಭಯೋತ್ಪಾದನೆ ಈಗಲೂ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ದೊಡ್ಡ ಬೆದರಿಕೆಯಾಗಿದೆ. ಐಎಸ್ ಮತ್ತು ಅಲ್‌ಖೈದಾ ಮತ್ತು ಅದರ ಸಹಭಾಗಿ ಗುಂಪುಗಳು ಮುಖ್ಯವಾಗಿ ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ನಾಗರಿಕರು ಹಾಗೂ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿವೆ ಎಂದು ಆರೋಪ ಮಾಡಿದರು.

‘ನವೆಂಬರ್ 2008ರಂದು ಪಾಕಿಸ್ತಾನದಿಂದ ಜಲಮಾರ್ಗದ ಮೂಲಕ 10 ಜನರ ಉಗ್ರರು ಮುಂಬೈಗೆ ಪ್ರವೇಶಿಸಿ ದಾಳಿ ಮಾಡಿದ್ದು, 26 ವಿದೇಶಿಯರು ಸೇರಿದಂತೆ 166ರ ಬಲಿ ಪಡೆದಿದ್ದನ್ನು ನಾವು ಮರೆಯುವುದಿಲ್ಲ’ ಎಂದು ಹೇಳಿದರು. ಮುಂಬೈ ದಾಳಿ ಕೃತ್ಯವು ಘಟಿಸಿ 14 ವರ್ಷ ಆಗುತ್ತಿರುವ ಸಂದರ್ಭದಲ್ಲಿಯೇ ರುಚಿರಾ ಅವರು ಈ ಮಾತು ಹೇಳಿದ್ದಾರೆ.

ಭಯೋತ್ಪಾದನೆ ನಿಗ್ರಹ ಕುರಿತು 15 ರಾಷ್ಟ್ರಗಳಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವಿವಿಧ ಉಪಸಮಿತಿಗಳ ಅಧ್ಯಕ್ಷರಿಂದ ವಿವರಣೆ ಪಡೆಯಿತು. ಅಲ್‌ಖೈದಾ ನಿರ್ಬಂಧ ಸಮಿತಿ ಮತ್ತು ಶಸ್ತ್ರಾಸ್ತ್ರಗಳ ಸಾಮೂಹಿಕ ನಾಶ ಕುರಿತ ಸಮಿತಿ ವಿವರಣೆ ನೀಡಿದವು. ಭಯೋತ್ಪಾದನಾ ನಿಗ್ರಹ ಸಮಿತಿ ಅಧ್ಯಕ್ಷತೆಯನ್ನು ಭಾರತ ವಹಿಸಿದ್ದು, ರಾಯಭಾರಿ ಈ ಕುರಿತು ವಿವರಣೆ ನೀಡಿದರು.

ಈ ಸಮಿತಿ ಅಧ್ಯಕ್ಷತೆ ಮುಂದೆ ಯುಎಇಗೆ ಹೋಗಲಿದೆ. ನಿರ್ಬಂಧ ಹೇರಲು ಯುಎಇ ಕ್ರಮವಹಿಸಲಿದೆ ಎಂದು ಭಾರತ ಆಶಿಸಿದೆ.

ಪಾಕ್‌ ಮೂಲದ ಉಗ್ರ ಹಫೀಜ್‌ ತಲಾಹ್‌ ಸಯೀದ್‌, ಲಷ್ಕರ್ ಇ ತೈಯಬಾ ಮುಖಂಡ ಶಾಹೀದ್ ಮಹಮೂದ್‌, ಸಾಜಿದ್‌ ಮಿರ್, ಜೈಷ್ ಇ ಮೊಹಮ್ಮದ್‌ ನಾಯಕ ಅಬ್ದುಲ್‌ ರೌಫ್‌ ಅಜರ್, ಅಬ್ದುಲ್‌ ರೆಹಮಾನ್‌ ಮಕ್ಕಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಭಾರತ ಯತ್ನಿಸುತ್ತಿದೆ. ಆದರೆ, ಪಾಕಿಸ್ತಾನದ ಸಹವರ್ತಿಯಾಗಿರುವ ಚೀನಾ ಈ ವರ್ಷದ ಜೂನ್‌ ತಿಂಗಳಿಂದಲೂ ಇದಕ್ಕೆ ತಡೆಯೊಡ್ಡುತ್ತಿದೆ. ಪ್ರಯಾಣಕ್ಕೆ ನಿರ್ಬಂಧ, ಆಸ್ತಿ ಜಪ್ತಿ ಸೇರಿ ವಿವಿಧ ಕ್ರಮಗಳ ಕುರಿತಂತೆ ಭಾರತ ಮತ್ತು ಅಮೆರಿಕ ಪ್ರಸ್ತಾವ ಸಲ್ಲಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT