ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾದಿ ಮಹಮ್ಮದ್‌ಗೆ ಅವಮಾನ: ಗಲ್ಫ್‌ ದೇಶಗಳಲ್ಲಿ ಆಕ್ರೋಶ ತೀವ್ರ

ಸೌದಿ ಅರೇಬಿಯಾ, ಬಹರೈನ್‌, ಯುಎಇ, ಅಫ್ಗಾನಿಸ್ತಾನ ಖಂಡನೆ
Last Updated 6 ಜೂನ್ 2022, 20:41 IST
ಅಕ್ಷರ ಗಾತ್ರ

ದುಬೈ: ಬಿಜೆಪಿ ವಕ್ತಾರರಾಗಿದ್ದ ನೂಪುರ್‌ ಶರ್ಮಾ ಅವರು ಪ್ರವಾದಿ ಮಹಮ್ಮದ್‌ ಅವರಿಗೆ ಅಪಮಾನವಾಗುವಂತಹ ಹೇಳಿಕೆ ನೀಡಿದ್ದನ್ನು ಖಂಡಿಸಿದ ದೇಶಗಳ ಸಾಲಿಗೆ ಸೌದಿ ಅರೇಬಿಯಾ, ಬಹರೈನ್‌, ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ), ಇಂಡೊನೇಷ್ಯಾ, ಜೋರ್ಡನ್‌ ಮತ್ತು ಅಫ್ಗಾನಿಸ್ತಾನ ಕೂಡ ಸೋಮವಾರ ಸೇರಿವೆ.

‘ಇಸ್ಲಾಂ ಧರ್ಮದ ಸಂಕೇತದ ವಿರುದ್ಧದ ಪೂರ್ವಗ್ರಹವನ್ನು ಶಾಶ್ವತವಾಗಿ ತಿರಸ್ಕರಿಸಲಾಗುವುದು. ಯಾವುದೇ ಧರ್ಮದ ವ್ಯಕ್ತಿ ಮತ್ತು ಸಂಕೇತಗಳ ವಿರುದ್ಧ ಪೂರ್ವಗ್ರಹ ಮೂಡಿಸುವ ಯಾವುದೇ ಕೃತ್ಯವನ್ನು ಶಾಶ್ವತವಾಗಿ ತಿರಸ್ಕರಿಸಲಾಗುವುದು’ ಎಂದು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯವು ಹೇಳಿದೆ.

ಬಿಜೆಪಿ ವಕ್ತಾರ ಹುದ್ದೆಯಿಂದ ನೂಪುರ್‌ ಅವರನ್ನು ವಜಾಗೊಳಿಸಿದ್ದನ್ನು ಸೌದಿ ಅರೇಬಿಯಾ ಸ್ವಾಗತಿಸಿದೆ. ಪ್ರವಾದಿಯ ಬಗ್ಗೆ ‘ಅವಹೇಳನಕಾರಿ’ ಹೇಳಿಕೆ ನೀಡಿದ್ದ ನೂಪುರ್‌ ಶರ್ಮಾ ಅವರನ್ನು ಅಮಾನತು ಮಾಡಲಾಗಿದೆ. ದೆಹಲಿ ಬಿಜೆಪಿಯ ಮಾಧ್ಯಮ ಘಟಕದ ಮುಖ್ಯಸ್ಥ ನವೀನ್‌ ಕುಮಾರ್‌ ಜಿಂದಾಲ್‌ ಅವರನ್ನು ಭಾನುವಾರ ಉಚ್ಚಾಟನೆ ಮಾಡಲಾಗಿದೆ.

ಈ ಇಬ್ಬರು ಮುಖಂಡರ ಹೇಳಿಕೆಗಳು ಬಹಿರಂಗವಾದ ಬಳಿಕ ಹಲವು ದೇಶಗಳು ಇದನ್ನು ಖಂಡಿಸಿದ್ದವು. ಹಾಗಾಗಿ, ಎಲ್ಲ ಧರ್ಮಗಳನ್ನೂ ಗೌರವಿಸುವುದಾಗಿಯೂ ಯಾವುದೇ ಧರ್ಮದ ವ್ಯಕ್ತಿಗೆ ಅವಮಾನ ಮಾಡುವುದನ್ನು ಬಲವಾಗಿ ಖಂಡಿಸುವುದಾಗಿಯೂ ಬಿಜೆಪಿ ಭಾನುವಾರ ಹೇಳಿತ್ತು.

‘ನೂಪುರ್‌ ಅವರ ಹೇಳಿಕೆ ಮತ್ತು ಜಿಂದಾಲ್‌ ಅವರ ಟ್ವೀಟ್‌ಗಳು ಯಾವುದೇ ರೀತಿಯಲ್ಲಿಯೂ ಸರ್ಕಾರದ ನಿಲುವುಗಳಲ್ಲ. ಇವು ಅಂಧಾಭಿಮಾನಿ ಗುಂಪುಗಳ ನಿಲುವುಗಳು’ ಎಂದು ಕತಾರ್ ಮತ್ತು ಕುವೈತ್‌ನಲ್ಲಿರುವ ಭಾರತದ ರಾಯಭಾರಿಗಳು ಹೇಳಿದ್ದರು. ಈ ಮೂಲಕ, ರಾಜತಾಂತ್ರಿಕ ವಿವಾದವನ್ನು ತಣ್ಣಗಾಗಿಸಲು ಯತ್ನಿಸಿದ್ದರು.

ಕುವೈತ್‌ನ ಸೂಪರ್ ಮಾರ್ಕೆಟ್‌ ಒಂದರಲ್ಲಿ ಭಾರತದ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿ ಪ್ರತಿಭಟಿಸಲಾಗಿದೆ. ಕುವೈತ್ ನಗರದ ಹೊರವಲಯದಲ್ಲಿರುವ ಅಲ್‌ ಅರ್ದಿಯಾ ಸಹಕಾರ ಸಂಘದಲ್ಲಿ ಮಾರಾಟಕ್ಕೆ ಇಟ್ಟಿದ್ದ ಭಾರತದಿಂದ ರಫ್ತಾಗಿದ್ದ ಅಕ್ಕಿ, ಸಾಂಬಾರ ಪದಾರ್ಥಗಳನ್ನು ಪ್ಲಾಸ್ಟಿಕ್‌ ಹಾಕಿ ಮುಚ್ಚಲಾಗಿದೆ. ‘ಭಾರತದ ಉತ್ಪನ್ನಗಳನ್ನು ತೆಗೆದು ಹಾಕಲಾಗಿದೆ’ ಎಂಬ ಫಲಕವನ್ನು ಅಲ್ಲಿ ಹಾಕಲಾಗಿದೆ.

ಪಾಕಿಸ್ತಾನಕ್ಕೆ ಭಾರತ ತಿರುಗೇಟು
ನವದೆಹಲಿ:
ಬಿಜೆಪಿಯ ಇಬ್ಬರು ಮುಖಂಡರ ಹೇಳಿಕೆಗಳಿಂದ ಆಗಿರುವ ಹಾನಿ ಸರಿಪಡಿಸುವುದರ ನಡುವೆಯೇ, ಈ ಸಂದರ್ಭವನ್ನು ಬಳಸಿಕೊಳ್ಳಲು ಯತ್ನಿಸಿದ ಪಾಕಿಸ್ತಾನಕ್ಕೆ ಭಾರತವು ತಿರುಗೇಟು ನೀಡಿದೆ.

‘ಬಿಜೆಪಿಯ ಇಬ್ಬರು ನಾಯಕರು ಪ್ರವಾದಿ ಮಹಮ್ಮದ್‌ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ತಡವಾಗಿ ಮತ್ತು ಕಾಟಾಚಾರದ ರೀತಿಯಲ್ಲಿ ಕೈಗೊಂಡ ಶಿಸ್ತು ಕ್ರಮಗಳು ಮುಸ್ಲಿಮರಿಗೆ ಆಗಿರುವ ನೋವಿಗೆ ಸಾಂತ್ವನ ಆಗದು’ ಎಂದು ಪಾಕಿಸ್ತಾವ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಭಾರತದ ರಾಯಭಾರಿಯನ್ನು ಕರೆದು ಹೇಳಿದ್ದಾರೆ.

ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ದೇಶವು ಬೇರೊಂದು ದೇಶದಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡುವುದು ಅಸಂಗತ ಮತ್ತು ಅದರಿಂದ ಯಾವ ಪ್ರಯೋಜನವೂ ಆಗದು ಎಂದು ಭಾರತದ ವಿದೇಶಾಂಗ ಸಚಿವಾಲಯವ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದಾರೆ.

ಪಾಕಿಸ್ತಾನದಲ್ಲಿರುವ ಹಿಂದೂ, ಸಿಖ್‌, ಕ್ರೈಸ್ತ ಮತ್ತು ಅಹಮದೀಯ ಅಲ್ಪಸಂಖ್ಯಾತರಿಗೆ ವ್ಯವಸ್ಥಿತವಾಗಿ ಕಿರುಕುಳ ನೀಡಲಾಗುತ್ತಿರುವುದಕ್ಕೆ ಇಡೀ ಜಗತ್ತು ಸಾಕ್ಷಿಯಾಗಿದೆ ಎಂದೂ ಅವರು ಹೇಳಿದ್ದಾರೆ.

ಇಸ್ಲಾಮಿಕ್‌ ಸಹಕಾರ ಸಂಘಟನೆಯ (ಒಐಸಿ) ಪ್ರಧಾನ ಕಾರ್ಯದರ್ಶಿ ನೀಡಿದ ಹೇಳಿಕೆಗೂ ಭಾರತವು ಕಟುವಾದ ಪ್ರತಿಕ್ರಿಯೆ ನೀಡಿದೆ. ನೂಪುರ್ ಮತ್ತು ಜಿಂದಾಲ್ ಅವರ ಹೇಳಿಕೆಗಳು ‘ಇಸ್ಲಾಂ ಬಗ್ಗೆ ಭಾರತದಲ್ಲಿ ಹೆಚ್ಚುತ್ತಿರುವ ದ್ವೇಷ ಮನೋಭಾವಕ್ಕೆ ಉದಾಹರಣೆ’ ಎಂದು 57 ದೇಶಗಳು ಸದಸ್ಯರಾಗಿರುವ ಸಂಘಟನೆಯು ಹೇಳಿದೆ. ಇದು ‘ಅನಪೇಕ್ಷಿತವಾದ, ದುರುದ್ದೇಶದ ಮತ್ತು ಕುಚೋದ್ಯ’ದ ಹೇಳಿಕೆ ಎಂದು ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT