ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲು ಸಾಲು ಆಂಬುಲೆನ್ಸ್.. ಸ್ಟ್ರೆಚರ್ ಮೇಲೆ ಗಾಢ ರಕ್ತದ ಕಲೆ: ನರಕವಾದ ಉಕ್ರೇನ್

Last Updated 12 ಮೇ 2022, 2:56 IST
ಅಕ್ಷರ ಗಾತ್ರ

ಕೀವ್: ರಷ್ಯಾದ ಆಕ್ರಮಣದ ಬಳಿಕ ಉಕ್ರೇನ್‌ನಲ್ಲಿ ಉಂಟಾಗಿರುವ ಭೀಕರ ಪರಿಸ್ಥಿತಿ ಬಗ್ಗೆ ಆಗಾಗ್ಗೆ ವರದಿಗಳು ಕೇಳಿಬರುತ್ತಿರುತ್ತವೆ. ಚಿಕ್ಕ ನಗರ ಬಖ್ಮುಟ್‌ನಲ್ಲಿಯೂ ಸದ್ಯ ಅದೇ ಪರಿಸ್ಥಿತಿ ಇದೆ. ಇಲ್ಲಿನ ಆಸ್ಪತ್ರೆಗೆ ಕೊರೊನಾ ಕಾಲದ ರೀತಿ ಆಂಬುಲೆನ್ಸ್‌ಗಳು ಸರತಿ ಸಾಲಿನಲ್ಲಿ ನಿಂತಿವೆ.

ಯುದ್ಧದಲ್ಲಿ ಗಾಯಗೊಂಡ ಮತ್ತು ಗಂಭೀರ ಸ್ಥಿತಿಯಲ್ಲಿರುವ ಜನರನ್ನು ಹೊತ್ತ ಆಂಬುಲೆನ್ಸ್‌ಗಳು ಆಸ್ಪತ್ರೆಗೆ ಬರುತ್ತಿವೆ. ಇಂತಹ ಭಯಾನಕ ಪರಿಸ್ಥಿತಿ ಬರಬಹುದೆಂದು ನಾವು ಎಂದೂ ಊಹಿಸಿರಲಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ಸ್ವಯಂ ಸೇವಕರು ಹೇಳಿದ್ದಾರೆ.

‘ಈ ಹಿಂದೆ ಎಂದೂ ಇಂತಹ ಮಾನವ ದುರಂತವನ್ನು ನಾನು ನೋಡಿರಲಿಲ್ಲ. ನಿಜಕ್ಕೂ ಇದು ಅನಗತ್ಯ ಸಂಕಷ್ಟ’ಎಂದು ಪಿರೊಗೊವ್ ಆಸ್ಪತ್ರೆಯ ಸ್ವಯಂಸೇವಕಿ ಎಲೆನಾ ಬುಲಕ್ತಿನಾ ಹೇಳಿದ್ದಾರೆ.

ಸದ್ಯ, ಲುಹಾನ್ಸ್ ಪ್ರದೇಶದ ಪೊಪಸ್ನಾ ನಗರದ ಸುತ್ತ ಯುದ್ಧಭೂಮಿಯಲ್ಲಿ ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಅವರನ್ನು ಪಶ್ಚಿಮ ಉಕ್ರೇನ್‌ನ ದೊಡ್ಡ ಆಸ್ಪತ್ರೆಗಳಿಗೆ ಕಳುಹಿಸುವುದು ಈ ಆಸ್ಪತ್ರೆಯ ಕೆಲಸವಾಗಿದೆ.

‘ರಷ್ಯಾದ ಯಾರಾದರೂ ಉಕ್ರೇನ್‌ಗೆ ನೆರವು ನೀಡಲು ಬಯಸುತ್ತಿದ್ದರೆ ಕೂಡಲೇ ಮಾಡಿ.. ಕೇವಲ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕುವುದರಿಂದ ಪ್ರಯೋಜನವಿಲ್ಲ’ಎಂದು ಅವರು ಹೇಳಿದ್ದಾರೆ.

'ಯುದ್ಧವು ಪ್ರಾರಂಭವಾದಾಗ, ಅದು ಯಾವ ಸಾವುನೋವುಗಳನ್ನು ತರುತ್ತದೆೋ ಎಂದು ನಾನು ಆತಂಕಗೊಂಡಿದ್ದೆ. ಈಗ ನನ್ನ ಆತಂಕ ನಿಜವಾಗಿದ್ದು, ಸಂತ್ರಸ್ತರ ಸಂಖ್ಯೆ ದೊಡ್ಡದಾಗಿದೆ. ಎಲ್ಲಾ ನಗರಗಳಲ್ಲಿ ಜನರು ಸಾಯುತ್ತಿದ್ದಾರೆ’ಎಂದು ಸ್ವಯಂ ಸೇವಕಿ ಟ್ಲಾನಾ ಡ್ರುಜೆಂಕೊ ಹೇಳಿದರು.

ಗಾಯಾಳುಗಳನ್ನು ಹೊತ್ತು ತರುವ ಆಂಬುಲೆನ್ಸ್‌ಗಳು ಬಹುತೇಕ ಜರ್ಮನಿ ಮತ್ತು ಪೋಲೆಂಡ್ ದೇಶದವುಗಳಾಗಿದ್ದು, ತುರ್ತು ಚಿಕಿತ್ಸಾ ಕೇಂದ್ರದಿಂದ ಕೆಲವು ಮೀಟರ್‌ಗಳ ದೂರದಲ್ಲಿರುವ ಸ್ಟ್ರೆಚರ್ ಆಗಿ ಬಳಸಲಾದ ಮರದ ಬಾಗಿಲು ರಕ್ತದ ಕಲೆಗಳಿಂದ ಆವೃತ್ತವಾಗಿದೆ.

‘ನಾವು ನರಕದಿಂದ ಬಂದಿದ್ದೇವೆ’ಎಂದು ಫೆಬ್ರುವರಿಯಲ್ಲಿ ಆಕ್ರಮಣವು ಪ್ರಾರಂಭವಾದ ಕೆಲವು ದಿನಗಳ ನಂತರ ಹೋರಾಟದಲ್ಲಿ ಸೇರಿಕೊಂಡು ದಣಿದ-ಸೈನಿಕ ಇಗೊರ್ ಹೇಳಿದ್ದಾರೆ. ರಷ್ಯಾದ ಶೆಲ್, ರಾಕೆಟ್ ದಾಳಿಯಲ್ಲಿ ಗಾಯಗೊಂಡು ದೊಡ್ಡ ಆಸ್ಪತ್ರೆಗೆ ಸ್ಥಳಾಂತರಕ್ಕಾಗಿ ಕಾಯತ್ತಿರುವ ಸೈನಿಕರಲ್ಲಿ ಇವರೂ ಒಬ್ಬರಾಗಿದ್ಧಾರೆ.

‘ಹಗಲು ರಾತ್ರಿ ಎನ್ನದೆ ಫಿರಂಗಿಗಳು, ವಿಮಾನಗಳು, ಶೆಲ್, ಕ್ಷಿಪಣಿ ಹೀಗೆ ಎಲ್ಲ ವಿಧಗಳಲ್ಲೂ ರಷ್ಯಾ ನಮ್ಮ ಮೇಲೆ ದಾಳಿ ನಡೆಸಿದೆ. ನಾವು ಸುಮಾರು ಆರು ದಿನಗಳ ಕಾಲ ಯುದ್ಧದಲ್ಲಿದ್ದೆವು. ಪೊಪಾಸ್ನಾ ನಗರ ಸಂಪೂರ್ಣವಾಗಿ ನಾಶವಾಗಿದೆ’ಎಂದು ಅವರು ಹೇಳಿದ್ದಾರೆ.

ಫೆಬ್ರುವರಿ 24 ರಂದು ರಷ್ಯಾ ಹತ್ತಾರು ಸಾವಿರ ಸೈನಿಕರ ಜೊತೆ ಉಕ್ರೇನ್‌ ಮೇಲೆ ದಾಳಿ ಆರಂಭಿಸಿತ್ತು. ತನ್ನ ದಾಳಿಯನ್ನು ಅದು ‘ಸೇನಾವಿಶೇಷ ಕಾರ್ಯಾಚರಣೆ’ ಎಂದು ಕರೆದಿತ್ತು.

ಯುದ್ಧಭೂಮಿಯಲ್ಲಿ ಗಾಯಾಳುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಒಬ್ಬ ರೋಗಿಯನ್ನು ಮಾತ್ರ ಕರೆದೊಯ್ಯಬಹುದಾದ ಆಂಬುಲೆನ್ಸ್‌ನಲ್ಲಿ ಇದೀಗ ಇಬ್ಬರು ಯೋಧರನ್ನು ಸ್ಥಳಾಂತರಿಸಬೇಕಾಗಿದೆ.

ಯುದ್ಧದಲ್ಲಿ ಒಬ್ಬ ಯೋಧನ ಬೆನ್ನುಮೂಳೆಗೆ ಬಲವಾದ ಗಾಯವಾಗಿದೆ. ಅವರ ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಅವರು ತಮ್ಮ ಕೈ ಮತ್ತು ಕಾಲುಗಳ ಸ್ವಾಧೀನ ಕಳೆದುಕೊಳ್ಳಬಹುದು ಎಂದಿದ್ದಾರೆ. ಹೀಗೆ ಯುದ್ಧದಲ್ಲಿ ಗಾಯಗೊಂಡ ಯೋಧರ ಪೈಕಿ ಒಬ್ಬೊಬ್ಬರದ್ದೂ ಒಂದು ಕಥೆಯಾಗಿದೆ.

ಬಖ್ಮುಟ್‌ನ ವಾಯುವ್ಯಕ್ಕೆ ಸುಮಾರು 70 ಕಿಮೀ (44 ಮೈಲಿಗಳು) ದೂರದಲ್ಲಿರುವ ಸ್ವಿಯಾಟೊಹಿರ್ಸ್ಕ್ ಪಟ್ಟಣದಲ್ಲಿರುವ ಆರೋಗ್ಯ ಘಟಕದಲ್ಲಿ 20 ವರ್ಷ ವಯಸ್ಸಿನ ಸ್ವಯಂಸೇವಕಿ ಅಲೆಕ್ಸಾಂಡ್ರಾ ಪೊಹ್ರಾನಿಚ್ನಾ ಎಂಬುವವರು ಏಕಾಂಗಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿ ಆಂಬುಲೆನ್ಸ್ ವ್ಯವಸ್ಥೆ ಕೂಡ ಇಲ್ಲ. ಗಾಯಾಳುಗಳನ್ನು ಇತರೆ ಯೋಧರು ಹೊತ್ತು ಇವರ ಬಳಿಗೆ ಚಿಕಿತ್ಸೆಗೆ ಕರೆತರುತ್ತಾರೆ.

‘ಎಂಥಾ ಪರಿಸ್ಥಿತಿಯಲ್ಲೂ ನಾನು ಸೇವೆ ಮಾಡಲು ನಿರ್ಧರಿಸಿದ್ದೆ. ನಾವು ಇದನ್ನೂ ಮಾಡಲೇಬೇಕು’ ಎಂದು ಅವರು ಹೇಳುತ್ತಾರೆ.

ಲೀವ್‌ನಲ್ಲಿರುವ ಅವರ ತಂದೆ ಯುದ್ಧದಲ್ಲಿ ತೊಂದರೆಯಾಗದಂತೆ ರಕ್ಷಣೆಗೆ ವೈಯಕ್ತಿಕ ರಕ್ಷಣಾ ಸಾಮಾಗ್ರಿ ಖರೀದಿಸಲು ಹಣ ಕೊಟ್ಟಿದ್ದಾರೆ. ಆದರೆ, ಯುದ್ಧಭೂಮಿಗೆ ಮಗಳನ್ನು ಕಳುಹಿಸಲು ಒಪ್ಪದ ಆಕೆಯ ತಾಯಿ ಅವರ ಜೊತೆ ಮಾತನಾಡುವುದನ್ನೇ ಬಿಟ್ಟಿದ್ದಾರೆ.

ತನ್ನ ತೋಳಿನಲ್ಲಿ ಆಕೆ ಉಕ್ರೇನ್ ಕವಿ ಲೆಸ್ಯಾ ಉಕ್ರೇನ್ಕಾ ಬರೆದಿರುವ ಸಾಲುಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಅದರಲ್ಲಿ ‘ಚಿರಸ್ಥಾಯಿಯಾಗಿ ಉಳಿಯುವಂಥದ್ದು ನನ್ನ ಹೃದಯದಲ್ಲಿದೆ’ ಎಂದು ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT