ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ನಲ್ಲಿ ತೀವ್ರ ಪ್ರತಿಭಟನೆ: ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌ಗೂ ನಿರ್ಬಂಧ

17 ಮಂದಿ ಸಾವು
Last Updated 22 ಸೆಪ್ಟೆಂಬರ್ 2022, 14:04 IST
ಅಕ್ಷರ ಗಾತ್ರ

ಟೆಹರಾನ್‌/ದುಬೈ/ಒಸ್ಲೊ (ಎಪಿ, ಎಎಫ್‌ಪಿ, ರಾಯಿಟರ್ಸ್‌): ಇರಾನ್‌ ಸರ್ಕಾರವು ಸಾಮಾಜಿಕ ಮಾಧ್ಯಮಗಳಾದ ಇನ್‌ಸ್ಟಾಗ್ರಾಂ ಮತ್ತು ವಾಟ್ಸ್‌ಆ್ಯಪ್‌ ಸೇವೆಗಳನ್ನೂ ಗುರುವಾರ ಸ್ಥಗಿತಗೊಳಿಸಿದೆ. ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಪ್ರತಿಭಟನಕಾರರು ಈ ಆ್ಯಪ್‌ಗಳನ್ನು ಬಳಸುತ್ತಿದ್ದರು.

ಫೇಸ್‌ಬುಕ್‌, ಟ್ವಿಟರ್‌, ಟೆಲಿಗ್ರಾಂ, ಯೂಟ್ಯೂಬ್‌ ಮತ್ತು ಇತರಸಾಮಾಜಿಕ ಮಾಧ್ಯಮಗಳಿಗೆ ಇರಾನ್‌ನಲ್ಲಿ ಈಗಾಗಲೇ ನಿರ್ಬಂಧ ಇದೆ. ಆದ್ದರಿಂದ ಇರಾನ್‌ ಜನರು ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್‌ಆ್ಯಪ್‌ ಅನ್ನು ಬಳಸುತ್ತಿದ್ದರು.

ಮಹಸಾ ಅಮೀನಿ ಅವರ ಸಾವಿನ ನಂತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಸರ್ಕಾರವು ಇಂಟರ್‌ನೆಟ್‌ ಸಂಪರ್ಕದ ಮೇಲೆ ನಿರ್ಬಂಧ ಹೇರಿತ್ತು. ಆದರೆ, ವಿಪಿಎನ್‌ ಸಂಪರ್ಕ ಇರುವವರು ಈ ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು ಬಳಸಬಹುದಾಗಿದೆ.

ಇರಾನ್‌ನಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ವಿಡಿಯೊ, ಫೋಟೊಗಳನ್ನು ಹಂಚಿಕೊಳ್ಳಲು @1500tasvir ಎನ್ನುವ ಟ್ವಿಟರ್‌ ಖಾತೆಯನ್ನು ತೆರೆಯಲಾಗಿದೆ. ಈ ಮೂಲಕ ಇರಾನ್‌ನಲ್ಲಿ ನಡೆಯುತ್ತಿರುವುದನ್ನು ಜಗತ್ತಿಗೆ ತೋರಿಸುವ ಯತ್ನ ನಡೆದಿದೆ.

ಟೆಹೆರಾನ್‌ನ ಬೀದಿಗಳಲ್ಲಿ ಅಮೀನಿ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆದವು –ಎಎಫ್‌ಪಿ ಚಿತ್ರ
ಟೆಹೆರಾನ್‌ನ ಬೀದಿಗಳಲ್ಲಿ ಅಮೀನಿ ಹತ್ಯೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆದವು –ಎಎಫ್‌ಪಿ ಚಿತ್ರ

ಸಾವಿನ ಸಂಖ್ಯೆ 17ಕ್ಕೆ ಏರಿಕೆ: ಕಳೆದ ಆರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇಲ್ಲಿಯವರೆಗೂ 17 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ನಾಲ್ಕು ಮಂದಿ ಭದ್ರತಾ ಪಡೆ ಸಿಬ್ಬಂದಿ ಸೇರಿದ್ದಾರೆ. ಭದ್ರತಾ ಸಿಬ್ಬಂದಿಯ ಸಾವಿನ ಸಂಖ್ಯೆಯೂ ಏರಿಕೆ ಆಗುವ ಸಂಭವವಿದೆ ಎನ್ನಲಾಗಿದೆ. ಪ್ರತಿಭಟನೆಯು ಇರಾನ್‌ನ 50 ನಗರಗಳಿಗೆ ವ್ಯಾಪಿಸಿದೆ.

ಪಶ್ಚಿಮ ಅಜರ್‌ಬೈಜಾನ್‌ ಪ್ರದೇಶದಲ್ಲಿ 16 ವರ್ಷದ ಬಾಲಕ ಮತ್ತು 23 ವರ್ಷದ ಯುವಕನನ್ನು ಬುಧವಾರ ಹತ್ಯೆ ಮಾಡಲಾಗಿದೆ ಎಂದು ಮಾನವ ಹಕ್ಕಗಳ ಹೋರಾಟ ಸಂಸ್ಥೆ ‘ಹೆಂಗಾವ್‌’ ಹೇಳಿದೆ. ಈ ಮಧ್ಯೆ, ಪ್ರತಿಭಟನಕಾರರ ಸಾವಿನಲ್ಲಿ ಭದ್ರತಾ ಪಡೆಗಳ ಯಾವುದೇ ಕೈವಾಡವಿಲ್ಲ ಎಂದು ಇರಾನ್‌ ಸರ್ಕಾರ ಹೇಳಿದೆ.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಆಕ್ರೋಶಗೊಂಡಿರುವ ಪ್ರತಿಭಟನಕಾರರು ಬಸೀಜಿ (ಇರಾನ್‌ನ ಅರೆಸೇನಾ ಪಡೆ) ಯೋಧರೊಬ್ಬರನ್ನು ಬುಧವಾರ ಹತ್ಯೆ ಮಾಡಿದ್ದಾರೆ ಎಂದು ಗುರುವಾರ ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ಇರಾನ್‌ನ ಈಶಾನ್ಯ ಭಾಗದಲ್ಲಿ ‘ನಾವು ಸಾಯುತ್ತೇವೆ, ನಾವು ಸಾಯುತ್ತೇವೆ. ಆದರೆ ನಾವು ಇರಾನ್‌ ಅನ್ನು ವಾಪಸ್‌ ಪಡೆಯುತ್ತೇವೆ’ ಎಂದು ಘೋಷಣೆ ಕೂಗಿದ ಪ್ರತಿಭಟನಕಾರರು ಪೊಲೀಸ್‌ ಠಾಣೆಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಈ ವಿಡಿಯೊವನ್ನು @1500tasvir ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಟೆಹರಾನ್‌ನಲ್ಲೂ ಒಂದು ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಲಾಗಿದೆ.

1988 ಹತ್ಯಾಕಾಂಡದ ಸಂತ್ರಸ್ತರ ಫೋಟೊಗಳನ್ನು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕಚೇರಿ ಎದುರು ಇರಿಸಿಇರಾನ್‌ನ ಅಧ್ಯಕ್ಷ ಇಬ್ರಾಹಿಂ ರಯಿಸಿ ವಿರುದ್ಧ ಪ್ರತಿಭಟನೆ ದಾಖಲಿಸಲಾಗಿದೆ –ಎಎಫ್‌ಪಿ ಚಿತ್ರ
1988 ಹತ್ಯಾಕಾಂಡದ ಸಂತ್ರಸ್ತರ ಫೋಟೊಗಳನ್ನು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕಚೇರಿ ಎದುರು ಇರಿಸಿಇರಾನ್‌ನ ಅಧ್ಯಕ್ಷ ಇಬ್ರಾಹಿಂ ರಯಿಸಿ ವಿರುದ್ಧ ಪ್ರತಿಭಟನೆ ದಾಖಲಿಸಲಾಗಿದೆ –ಎಎಫ್‌ಪಿ ಚಿತ್ರ

‘ದೊಡ್ಡ ಬದಲಾವಣೆಯ ಸೂಚನೆ’

ಅಮೀನಿ ಅವರ ಹತ್ಯೆಯು ‘ಒಂದು ದೊಡ್ಡ ಬದಲಾವಣೆಯ’ ಸೂಚನೆಯಾಗಿದೆ ಎಂದು ಓಸ್ಲೊದ ಸರ್ಕಾರೇತರ ಸಂಸ್ಥೆ ‘ಇರಾನ್‌ ಹ್ಯೂಮನ್‌ ರೈಟ್ಸ್‌’ನ ನಿರ್ದೇಶಕ ಮೊಹಮದ್‌ ಅಮ್ರಿ ಮೊಗದ್ದಂ ಅಭಿಪ್ರಾಯಪಟ್ಟಿದ್ದಾರೆ.

‘15 ವರ್ಷಗಳಿಂದ ಮಾನವ ಹಕ್ಕುಗಳ ಹೋರಾಟವನ್ನು ಗಮನಿಸುತ್ತಾ ಬಂದಿದ್ದೇನೆ. ಆದರೆ, ಇಂಥ ಆಕ್ರೋಶವನ್ನು ನಾನು ಕಂಡಿಲ್ಲ. ಅವರು ಇನ್ಯಾವುದಕ್ಕೂ ಭಯಪಡುವುದಿಲ್ಲ. ಅಮೀನಿ ಅವರ ಹತ್ಯೆಯು ಅವರ ತಾಳ್ಮೆಯ ಕಟ್ಟೆ ಒಡೆಯುವ ಕೊನೆಯ ಹನಿಯಾಗಿತ್ತು. ಆದ್ದರಿಂದ ಇದೊಂದು ದೊಡ್ಡ ಬದಲಾವಣೆಯ ಸೂಚನೆ’ ಎಂದರು.

ಇಂಧನ ಬೆಲೆ ಹೆಚ್ಚಳವನ್ನು ವಿರೋಧಿಸಿ 2019ರ ನವೆಂಬರ್‌ನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿತ್ತು. ಈ ವೇಳೆ 1,500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಅಮೀನಿ ಹತ್ಯೆಯನ್ನು ಖಂಡಿಸಿ ನಡೆಯುತ್ತಿರುವ ಹೋರಾಟವು ಇಂಧನ ಬೆಲೆ ಏರಿಕೆ ವಿರೋಧಿ ಹೋರಾಟಕ್ಕಿಂತ ತೀವ್ರವಾಗಿದೆ ಎಂದು ಮಾಧ್ಯಮಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT