ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜತೆ ಮಾತುಕತೆಗೆ ಶಾಹಬಾಝ್ ಷರೀಫ್‌ ಒಲವು?

Last Updated 10 ಏಪ್ರಿಲ್ 2022, 17:32 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌:ಶಾಹಬಾಝ್ ಷರೀಫ್‌ ಅವರು ಪಾಕಿಸ್ತಾನದ ಮುಂದಿನ ಪ್ರಧಾನಿಯಾದರೆ, ಕಾಶ್ಮೀರದ ವಿಚಾರವಾಗಿ ಭಾರತದೊಂದಿಗೆ ಮಾತುಕತೆ ಮತ್ತೆ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಕಠಿಣ ಮತ್ತು ನಿಷ್ಠುರ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹೆಸರಾಗಿರುವ ಶಾಹಬಾಝ್ ಅವರು, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸೋದರ. ನವಾಜ್‌ ಷರೀಫ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆಯಲ್ಲಿ ಉತ್ತಮ ಸ್ನೇಹ ಹೊಂದಿದ್ದರು. ಹೀಗಾಗಿ ಶಾಹಬಾಝ್‌ ಸಹ, ಪ್ರಧಾನಿ ಮೋದಿ ಅವರೊಂದಿಗೆ ಉತ್ತಮ ಸಂಬಂಧ ಮುಂದುವರಿಸಬಹುದು. ಇದರಿಂದ ಎರಡೂ ದೇಶಗಳ ಮಧ್ಯೆ ಮಾತುಕತೆ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಭಾರತದಲ್ಲಿ, 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳಲ್ಲಿ ಭಯೋತ್ಪಾದನಾ ದಾಳಿಗಳ ಕಾರಣ ಪಾಕಿಸ್ತಾನದ ಜತೆಗೆ ಮಾತುಕತೆಯನ್ನು ನಿಲ್ಲಿಸಲಾಗಿತ್ತು. 2018ರಲ್ಲಿ ಇಮ್ರಾನ್‌ ಖಾನ್ ಅವರು ಪ್ರಧಾನಿಯಾದಾಗ, ಭಾರತದೊಂದಿಗೆ ಸಂಬಂಧ ಸುಧಾರಿಸುವ ಮಾತುಗಳನ್ನಾಡಿದ್ದರು. ಆದರೆ, ಪುಲ್ವಾಮಾದಲ್ಲಿ ಸಿಆರ್‌‍‍ಪಿಎಫ್‌ ಯೋಧರ ಮೇಲೆ ಉಗ್ರರ ದಾಳಿ ನಡೆದ ನಂತರ ಮಾತುಕತೆಯ ಯತ್ನಗಳನ್ನು ಕೈಬಿಡಲಾಗಿತ್ತು. 2019ರಲ್ಲಿ ಕಾಶ್ಮೀರದ ವಿಶೇಷ ಸ್ಥಾನವನ್ನು ವಾಪಸ್‌ ಪಡೆದ ನಂತರ, ಮಾತುಕತೆ ಸಾಧ್ಯವೇ ಇಲ್ಲ ಎಂದು ಇಮ್ರಾನ್‌ ಹೇಳಿದ್ದರು.

‘ಇಮ್ರಾನ್‌, ಪಾಕಿಸ್ತಾನದ ವಿದೇಶಾಂಗ ನೀತಿಯನ್ನು ಹಾಳು ಮಾಡಿದ್ದಾರೆ. ನಾವು ಇದನ್ನು ಸರಿಪಡಿಸುತ್ತೇವೆ’ ಎಂದು ಶಾಹಬಾಝ್ ಹಲವು ಬಾರಿ ಹೇಳಿದ್ದಾರೆ. ಹೀಗಾಗಿ ಭಾರತದ ಜತೆಗೂ ಅವರು ಮಾತುಕತೆ ಪುನರಾರಂಭಕ್ಕೆ ಒತ್ತು ನೀಡುವ ಸಾಧ್ಯತೆಗಳು ಅತ್ಯಧಿಕವಾಗಿವೆ ಎಂದು ಪಾಕಿಸ್ತಾನದ ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಆದರೆ ನವಾಜ್ ಷರೀಫ್‌ ಅವರನ್ನು ಕರೆಯುತ್ತಿದ್ದ ರೀತಿಯಲ್ಲೇ ಶಾಹಬಾಝ್‌ ಅವರನ್ನೂ, ‘ಮೋದಿ ಕಿ ಯಾರ್ (ಮೋದಿಯ ಗೆಳೆಯ)’ ಎಂದು ಹೀಯಾಳಿಸುವ ಸಾಧ್ಯತೆಯೂ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

‘ಭಾರತದ ವಿಚಾರದಲ್ಲಿ ಇಮ್ರಾನ್‌ ಖಾನ್ ಅವರು ಯಾವುದೇ ನೀತಿ ಹೊಂದಿರಲಿಲ್ಲ. ಆದರೆ ಶಾಹಬಾಝ್ ಅವರು ಇದಕ್ಕಾಗಿ ಒಂದು ಸ್ಪಷ್ಟ ನೀತಿಯನ್ನು ರೂಪಿಸಲಿದ್ದಾರೆ’ ಎಂದು ಪಿಎಂಎಲ್‌–ಎನ್‌ ನಾಯಕ ಸಮೀಉಲ್ಲಾ ಖಾನ್‌ ಹೇಳಿದ್ದಾರೆ.

2014ರಲ್ಲಿ ಮಾತುಕತೆ ಸ್ಥಗಿತವಾದ ನಂತರ, ಅದನ್ನು ಮತ್ತೆ ಆರಂಭಿಸಲು ಎರಡೂ ದೇಶಗಳು ಮುಂದಾಗಲಿಲ್ಲ. ಮಾತುಕತೆ ಸ್ಥಗಿತಗೊಳಿಸಿದ್ದ ಭಾರತವೇ, ಮಾತುಕತೆ ಆರಂಭಕ್ಕೆ ಮುಂದಾಗ
ಬೇಕಿತ್ತು. ಪಾಕಿಸ್ತಾನ ಯಾವತ್ತೂ ಮಾತುಕತೆಯನ್ನು ವಿರೋಧಿಸಿಲ್ಲ. ಈಗ ಇಮ್ರಾನ್‌ ಖಾನ್ ಅವರ ಸರ್ಕಾರ ಪತನದ ವಿಚಾರದಲ್ಲಿ ಭಾರತ, ‘ಅದು ಅವರ ಆಂತರಿಕ ವಿಚಾರ’ ಎಂದಷ್ಟೇ ಹೇಳಿದೆ. ಇದು ಎರಡೂ ದೇಶಗಳ ಮಧ್ಯೆ ಮತ್ತೆ ಮಾತುಕತೆ ಆರಂಭಕ್ಕೆ ಸೂಕ್ತ ವೇದಿಕೆ ನಿರ್ಮಿಸುವ ವಾತಾವರಣಕ್ಕೆ ಕಾರಣವಾಗಿದೆ ಎಂದು ರಾಜಕೀಯ ತಜ್ಷ ಡಾ. ಹಸ್ಸಾನ್ ಅಸ್ಕಾರಿ ಹೇಳಿದ್ದಾರೆ.

ಶಹಬಾಝ್‌ ವಿರುದ್ಧ ತನಿಖೆ: ಅಧಿಕಾರಿಗೆ ಅನಿರ್ದಿಷ್ಟಾವಧಿ ರಜೆ

ಲಾಹೋರ್‌: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆಗುತ್ತಿದ್ದಂತೆಯೇ,ಪ್ರಧಾನಿ ಅಭ್ಯರ್ಥಿ ಶಾಹಬಾಝ್‌ ಷರೀಫ್‌ ಅವರ ವಿರುದ್ಧ ಅಕ್ರಮಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದ್ದ ಉನ್ನತ ಅಧಿಕಾರಿ ಅನಿರ್ದಿಷ್ಟಾವಧಿಗೆ ರಜೆ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನದ ಉನ್ನತ ತನಿಖಾ ಸಂಸ್ಥೆಯಾದ ಫೆಡರಲ್‌ ಇನ್ವೆಸ್ಟಿಗೇಷನ್‌ ಏಜೆನ್ಸಿಯ (ಎಫ್‌ಐಎ) ಮುಖ್ಯಸ್ಥ ಮೊಹಮ್ಮದ್‌ ರಿಜ್ವಾನ್‌ ಅವರು ಶಾಹಬಾಝ್‌ ವಿರುದ್ಧದ 1,400 ಕೋಟಿ ಪಾಕಿಸ್ತಾನಿ ರೂಪಾಯಿ ವಂಚನೆ ಆರೋಪದ ಬಗ್ಗೆ ತನಿಖೆ ನಡೆಸುತ್ತಿದ್ದರು.

ರಿಜ್ವಾನ್‌ ಅವರ ರಜಾ ಅರ್ಜಿ ಸ್ವೀಕೃತವಾಗಿರುವ ಕುರಿತು ಭಾನುವಾರ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಏಪ್ರಿಲ್‌ 4ರಂದು ಎಫ್ಐಎಯ ವಿಶೇಷ ನ್ಯಾಯಾಲಯ ಶಾಹಬಾಝ್‌ ಮತ್ತು ಅವರ ಮಗ ಹಂಝಾ ಅವರಿಗೆ ಸಮನ್ಸ್‌ ನೀಡಿ ಏಪ್ರಿಲ್‌ 11ಕ್ಕೆ ನ್ಯಾಯಾಲಯದ ಎದುರು ಹಾಜರಾಗಲು ಹೇಳಿತ್ತು. ಈ ವೇಳೆ ಅವರ ವಿರುದ್ಧ ದೋಷಾರೋಪ ಹೊರಿಸುವುದಾಗಿ ಹೇಳಿತ್ತು. ಅವರಿಬ್ಬರು ಕೋರ್ಟ್‌ಗೆ ಹಾಜರಾಗುವ ಮೊದಲೇ ರಿಜ್ವಾನ್‌ ರಜೆ ತೆಗೆದುಕೊಂಡಿದ್ದಾರೆ.

ಇಮ್ರಾನ್‌ ಆಪ್ತರ ಮನೆ ಮೇಲೆ ದಾಳಿ

ಇಮ್ರಾನ್‌ ಖಾನ್‌ ಅವರು ವಿಶ್ವಾಸ ಮತ ಸೋಲುತ್ತಿದ್ದಂತೆಯೇ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಲಾಗಿದೆಎಂದು ಪಾಕಿಸ್ತಾನ ತೆಹ್ರೀಕ್‌ ಎ ಇನ್ಸಾಫ್‌ ಆರೋಪಿಸಿದೆ.

‘2019ರಿಂದ ಇಮ್ರಾನ್‌ ಖಾನ್‌ ಅವರ ಸಾಮಾಜಿಕ ಜಾಲತಾಣ ತಂಡದ ಮುಖ್ಯಸ್ಥರಾಗಿರುವ ಡಾ. ಆರ್ಸಲನ್‌ ಖಾಲಿದ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ ಮತ್ತು ಅವರ ಕುಟುಂಬದವರ ಮೊಬೈಲ್ ಫೋನ್‌ಗಳನ್ನು ಕಸಿದುಕೊಳ್ಳಲಾಗಿದೆ’ ಎಂದು ಪಿಟಿಐ ಟ್ವೀಟ್‌ ಮಾಡಿದೆ.

‘ಡಾ. ಆರ್ಸಲನ್‌ ಖಾಲಿದ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಯಾರನ್ನೂ ನಿಂದಿಸಿಲ್ಲ ಮತ್ತು ಯಾವುದೇ ಸಂಸ್ಥೆ ಮೇಲೆ ದಾಳಿ ನಡೆಸಿಲ್ಲ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಈ ಘಟನೆ ಕುರಿತು ಫೆಡರಲ್‌ ಇನ್ವೆಸ್ಟಿಗೇಷನ್ ಏಜೆನ್ಸಿ ತನಿಖೆ ನಡೆಸಬೇಕು ಎಂದು ಪಿಟಿಐ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT