ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ, ಚೀನಾದ ಮೇಲೆ ಬೀಳಲಿದೆಯೇ ಐಎಸ್‌ಎಸ್‌?

ಉಕ್ರೇನ್‌ ಮೇಲೆ ದಾಳಿಯಿಂದ ಬಾಹ್ಯಾಕಾಶ ಕ್ಷೇತ್ರದ ಬಾಂಧವ್ಯಕ್ಕೆ ಧಕ್ಕೆ * ರಷ್ಯಾದ ರಾಸ್‌ಕಾಸ್ಮೋಸ್‌ ಎಚ್ಚರಿಕೆ
Last Updated 26 ಫೆಬ್ರುವರಿ 2022, 21:46 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾ, ಅಮೆರಿಕ ಒಟ್ಟಾಗಿ ನಿರ್ವಹಿಸುತ್ತಿರುವ, ಸದ್ಯ ಕಕ್ಷೆಯಲ್ಲಿರುವ 500 ಟನ್ ತೂಕದ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ’ದ (ಐಎಸ್ಎಸ್‌) ಸಂಕೀರ್ಣವು ಭಾರತ ಅಥವಾ ಚೀನಾದ ಮೇಲೆ ಬೀಳುವ ಸಂಭವವಿದೆಯೇ?

‘ಬೀಳುವ ಸಾಧ್ಯತೆ ಇದೆ’ ಎಂದು ರಷ್ಯಾದ ಬಾಹ್ಯಾಕಾಶ ಕೇಂದ್ರ, ರಾಸ್‌ಕಾಸ್ಮೋಸ್‌ನ ಪ್ರಧಾನ ನಿರ್ದೇಶಕ ಡಿಮಿಟ್ರಿ ರೊಗೊಜಿನ್‌ ಎಚ್ಚರಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ್ದು, ‘ಬಿದ್ದರೆ ಅದರ ಹೊಣೆಯನ್ನು ಅಮೆರಿಕವೇ ಹೊರಬೇಕು’ ಎಂದು ಎಚ್ಚರಿಸಿದ್ದಾರೆ.

ಉಕ್ರೇನ್‌ ಮೇಲಿನ ದಾಳಿ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಅಮೆರಿಕ ಕೆಲ ನಿರ್ಬಂಧ ಹೇರಿದೆ. ಇದರ ಪರಿಣಾಮ ಐಎಸ್‌ಎಸ್‌ ಯೋಜನೆ ಕುರಿತು ಉಭಯ ದೇಶಗಳ ನಡುವಣ ಸಹಕಾರದ ಮೇಲೂ ಆಗಬಹುದು ಎಂಬುದನ್ನು ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ.

‘ನೀವು ಅಸಹಕಾರ ತೋರಿದರೆ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಯಾರು ರಕ್ಷಿಸಬೇಕು. ನಿಯಂತ್ರಣ ತಪ್ಪಿದ ಐಎಸ್‌ಎಸ್, ಅಮೆರಿಕ ಅಥವಾ ಯುರೋಪ್‌ ಮೇಲೆಯೇ ಬೀಳಬಹುದು’ ಎಂದು ರೊಗೊಜಿನ್‌ ಟ್ವೀಟ್‌ನಲ್ಲಿ ಹೇಳಿದ್ದಾರೆ. ‘ಐಎಸ್‌ಎಸ್‌ ಭಾರತ ಅಥವಾ ಚೀನಾದ ಮೇಲೂ ಬೀಳಬಹುದಾದ ಸಾಧ್ಯತೆಗಳಿವೆ. ಇಂತಹ ಭೀತಿಯನ್ನು ಆ ರಾಷ್ಟ್ರಗಳ ಮೇಲೆ ಹೇರುವಿರಾ? ಐಎಸ್‌ಎಸ್‌ ಈಗ ರಷ್ಯಾದ ವಾಯುಗಡಿಯಲ್ಲಿ ಪರಿಭ್ರಮಣ ಮಾಡುತ್ತಿಲ್ಲ. ಹೀಗಾಗಿ, ಸಂಭವಿಸುವ ಎಲ್ಲ ಅಪಾಯಗಳ ಹೊಣೆ ನಿಮ್ಮದೇ. ಇದನ್ನು ಹೊರಲು ನೀವು ಸಿದ್ಧರಿದ್ದೀರಾ? ಎಂದೂ ಅಮೆರಿಕಕ್ಕೆ ಪ್ರಶ್ನಿಸಿದ್ದಾರೆ.

ರಷ್ಯಾ ಮತ್ತು ಅಮೆರಿಕವು ಐಎಸ್‌ಎಸ್‌ ಕಾರ್ಯಕ್ರಮದ ಪ್ರಮುಖ ಭಾಗಿದಾರರು. ಅಲ್ಲದೆ ಕೆನಡಾ, ಜಪಾನ್‌ ಮತ್ತು ಫ್ರಾನ್ಸ್‌, ಇಟಲಿ ಮತ್ತು ಸ್ಪೈನ್ ಒಳಗೊಂಡಂತೆ ಹಲವು ಯೂರೋಪಿಯನ್‌ ರಾಷ್ಟ್ರಗಳು ಭಾಗಿಯಾಗಿವೆ.

‘ಐಎಸ್‌ಎಸ್‌ ಸದ್ಯ ಸುರಕ್ಷಿತ’

ವಾಷಿಂಗ್ಟನ್‌ (ಎಎಫ್‌ಪಿ): ಉಕ್ರೇನ್‌ ಮೇಲಿನ ದಾಳಿಯು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಭವಿಷ್ಯ ಕುರಿತು ಆತಂಕ ಮೂಡಿಸಿರುವಂತೆಯೇ, ಐಎಸ್‌ಎಸ್‌ ಸದ್ಯಕ್ಕೆ ಸುರಕ್ಷಿತ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ರಾಜಕೀಯ ಕಾರಣಗಳಿಗಾಗಿ ಯಾರೊಬ್ಬರು ಐಎನ್‌ಎಸ್‌ನಲ್ಲಿರುವ ಗಗನಯಾತ್ರಿಗಳ ಜೀವವನ್ನು ಅಪಾಯಕ್ಕೆ ದೂಡಲು ಬಯಸುವುದಿಲ್ಲ ಎಂದು ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿಯ ಬಾಹ್ಯಾಕಾಶ ವಿಶ್ಲೇಷಕ, ಪ್ರೊ. ಜಾನ್ ಲಾಗ್‌ಸ್ಡನ್‌ ಪ್ರತಿಕ್ರಿಯಿಸಿದ್ದಾರೆ. ಐಎಸ್‌ಎಸ್‌ನ ಸ್ವತಂತ್ರ ನಿರ್ವಹಣೆ ಕುರಿತು 1994ರಲ್ಲಿ ಒಡಂಬಡಿಕೆಯಾದ ರಷ್ಯಾವನ್ನು ಪ್ರಜ್ಞಾವಂತಿಕೆಯಿಂದಲೇ ಸೇರಿಸಿಕೊಳ್ಳಲಾಗಿತ್ತು ಎಂದಿದ್ದಾರೆ.

ಐಎಸ್‌ಎಸ್ ಕುರಿತಂತೆ ಪುಸ್ತಕ ಬರೆದಿರುವ ಫ್ರೆಂಚ್‌ ಶಿಕ್ಷಣ ತಜ್ಞೆ ಜೂಲಿ ಪ್ಯಾಟರಿನ್‌ ಜೊಸ್ಸೆ ಅವರು, ‘ರೊಗೊಜಿನ್‌ ಅವರು ರಾಜಕೀಯ ಹಿನ್ನೆಲೆಯವರು. ಅಧಿಕಾರದಲ್ಲಿ ಇದ್ದವರಿಗೆ ನಿಷ್ಠರಾದವರು. ಇಂತಹ ಕಿಡಿನುಡಿಗಳಿಗೆ ಅವರು ಹೆಸರಾಗಿದ್ದಾರೆ’ ಎಂದು ಹೇಳಿದ್ದಾರೆ.

ಸದ್ಯ, ಐಎನ್ಎಸ್‌ನಲ್ಲಿ ನಾಸಾದ ನಾಲ್ವರು, ರಷ್ಯಾದ ಇಬ್ಬರು ಮತ್ತು ಯೂರೋಪ್‌ನ ಒಬ್ಬರು ಗಗನಯಾತ್ರಿ ಇದ್ದಾರೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT