ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ ಆಡಳಿತ ಪಕ್ಷಕ್ಕೆ ಭರ್ಜರಿ ಗೆಲುವು

Last Updated 11 ಜುಲೈ 2022, 11:36 IST
ಅಕ್ಷರ ಗಾತ್ರ

ಟೋಕಿಯೊ: ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಹತ್ಯೆಯ ಶೋಕದ ನಡುವೆಯೇ ಜಪಾನ್‌ ಸಂಸತ್‌ ಮೇಲ್ಮನೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಆಡಳಿತರೂಢ ಲಿಬರಲ್‌ ಡೆಮಾಕ್ರಟಿಕ್‌ ಪಾರ್ಟಿ ಭಾರಿ ಜಯ ಗಳಿಸಿದೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ ಕೌನ್ಸಿಲರ್‌ಗಳ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಸಾಂವಿಧಾನಿಕ ತಿದ್ದುಪಡಿ ತರಲು ಬೇಕಿರುವ ಮೂರನೆಯ ಎರಡರಷ್ಟು ಬಹುಮತವನ್ನು ಗಳಿಸಿಕೊಟ್ಟಿದೆ ಈ ಗೆಲುವು.

ಉಕ್ರೇನ್ ಮೇಲಿನ ರಷ್ಯಾದ ಯುದ್ಧದಿಂದಾಗಿ ಉಂಟಾಗಿರುವ ಬೆಲೆ ಏರಿಕೆ ಮತ್ತು ಭದ್ರತಾ ಬೆದರಿಕೆ ನಿಭಾಯಿಸಲು ದೇಶವು ಹೆಣಗಾಡುತ್ತಿದ್ದರೂ ಒಂಬತ್ತು ತಿಂಗಳ ಆಡಳಿತದಲ್ಲಿ ಸಾರ್ವಜನಿಕ ವಿಶ್ವಾಸ ಉಳಿಸಿಕೊಂಡಿರುವಪ್ರಧಾನಿ ಫುಮಿಯೊ ಕಿಶಿಡಾ ಅವರಿಗೆ ಮತದಾರರು ಅಭೂತಪೂರ್ವ ಬೆಂಬಲ ನೀಡಿದ್ದಾರೆ.

ಅಬೆ ಅವರ ಹತ್ಯೆಯ ನಂತರ ಅವರ ಲಿಬರಲ್‌ ಡೆಮಾಕ್ರಟಿಕ್‌ ಪಾರ್ಟಿ ಯಾವ ರೀತಿ ಒಗ್ಗಟ್ಟು ಕಾಯ್ದುಕೊಳ್ಳಲಿದೆ ಎನ್ನುವ ಅನಿಶ್ಚಿತತೆ ಆವರಿಸಿದ್ದರ ಬೆನ್ನಲ್ಲೇ ಈ ಚುನಾವಣೆ ಎದುರಾಗಿತ್ತು. ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸುವಾಗಲೇ ಅಬೆ ಅವರು ಹಂತಕನ ಗುಂಡೇಟಿಗೆ ಬಲಿಯಾಗಿದ್ದರು. ಅಬೆ ಅವರ ಹತ್ಯೆಯ ಅನುಕಂಪವೂ ಗೆಲುವಿನಲ್ಲಿ ಪಾತ್ರ ವಹಿಸಿದೆ.

ಲಿಬರಲ್‌ ಡೆಮಾಕ್ರಟಿಕ್‌ ಪಾರ್ಟಿ ಮತ್ತು ಇದರ ಕಿರಿಯ ಮೈತ್ರಿ ಪಾಲುದಾರ ಕೊಮೆಟೊ ಒಟ್ಟಾಗಿ 248 ಸ್ಥಾನಗಳಚೇಂಬರ್‌ನಲ್ಲಿ (ಸಂಸತ್‌) ತಮ್ಮ ಸ್ಥಾನಗಳನ್ನು 146ಕ್ಕೆ ಹೆಚ್ಚಿಸಿಕೊಂಡಿವೆ. ಕಿಶಿಡಾ ಅವರಲಿಬರಲ್‌ ಡೆಮಾಕ್ರಟಿಕ್‌ ಪಾರ್ಟಿಗೆ ಈ ಚುನಾವಣೆಯಲ್ಲಿ 63 ಸ್ಥಾನಗಳಲ್ಲಿ ಗೆಲುವು ಸಿಕ್ಕಿದರೆ, ಮೈತ್ರಿ ಪಕ್ಷ ಕೊಮೆಟೊ 13 ಸ್ಥಾನಗಳನ್ನು ಗೆದ್ದುಕೊಂಡಿದೆ.

2025ಕ್ಕೆ ನಿಗದಿಯಾಗಿರುವ ಚುನಾವಣೆಯವರೆಗೂ ಫುಮಿಯೊ ಕಿಶಿಡಾ ಅವರ ಆಡಳಿತಕ್ಕೆ ಯಾವುದೇ ಅಡಚಣೆ ಇಲ್ಲದೆ ಮುಂದುವರಿಯಲು ಈ ಫಲಿತಾಂಶ ಅಗತ್ಯವಾದ ಶಕ್ತಿ ನೀಡಿದೆ.

ಕಿಶಿಡಾ ಅವರು ಗೆಲುವನ್ನು ಸ್ವಾಗತಿಸಿದರೂ ಅವರ ಮೊಗದಲ್ಲಿ ನಗು ಕಾಣಿಸಲಿಲ್ಲ. ಶಿಂಜೊ ಅಬೆ ಅವರನ್ನು ಕಳೆದುಕೊಂಡಿರುವ ನೋವು, ದುಃಖ ಇನ್ನೂ ಅವರ ಮೊಗದಲ್ಲಿ ಮಡುಗಟ್ಟಿತ್ತು. ಅಬೆ ಅವರು ಇಲ್ಲದೇ ಪಕ್ಷವನ್ನು ಒಗ್ಗಟ್ಟಿನಿಂದ ಮುನ್ನಡೆಸುವ ಸವಾಲು ಈಗ ಅವರ ಹೆಗಲಿಗೆ ಬಿದ್ದಿದೆ. ಹಾಗಾಗಿಯೇ ಅವರು ಭಾನುವಾರ ಮಾಧ್ಯಮ ಸಂದರ್ಶನಗಳಲ್ಲಿ ‘ಎಲ್ಲಕ್ಕಿಂತ ಹೆಚ್ಚಾಗಿ ಈಗ ಪಕ್ಷದ ಒಗ್ಗಟ್ಟುಮುಖ್ಯ’ ಎಂದು ಒತ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT