ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಅಮೆರಿಕನ್ನರಿಗೆ ಸಾಂತ್ವನ ಹೇಳಿದ ಜೋ ಬೈಡನ್, ಕಮಲಾ ಹ್ಯಾರಿಸ್‌

Last Updated 20 ಮಾರ್ಚ್ 2021, 6:37 IST
ಅಕ್ಷರ ಗಾತ್ರ

ಅಟ್ಲಾಂಟ: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಶುಕ್ರವಾರ ಅಟ್ಲಾಂಟಕ್ಕೆ ಭೇಟಿ ನೀಡಿ, ಇತ್ತೀಚೆಗೆ ಮಸಾಜ್‌ ಪಾರ್ಲರ್‌ಗಳ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಏಷ್ಯನ್ ಅಮೆರಿಕನ್ ಮಹಿಳೆಯರಿಗೆ ಸಾಂತ್ವನ ಹೇಳಿದರು. ವರ್ಣಭೇದ ನೀತಿಯನ್ನು ಖಂಡಿಸಿದರು.

ಇಲ್ಲಿನ ಮಸಾಜ್‌ ಪಾರ್ಲರ್‌ಗಳ ಮೇಲೆ ಬಂದೂಕುಧಾರಿ ವ್ಯಕ್ತಿ ದಾಳಿ ನಡೆಸಿ, ಎಂಟು ಮಹಿಳೆಯರನ್ನು ಹತ್ಯೆ ಮಾಡಿದ್ದ. ಹತ್ಯೆಯಾದವರೆಲ್ಲರೂ ಏಷ್ಯನ್ ಅಮೆರಿಕನ್ ಮಹಿಳೆಯರು. ಈ ಘಟನೆಯ ಹಿನ್ನೆಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ಅಟ್ಲಾಂಟಕ್ಕೆ ಭೇಟಿ ನೀಡಿದ್ದರು.

ಏಷ್ಯನ್ ಅಮೆರಿಕನ್ ಸಂಸದರು ಮತ್ತು ಇತರ ನಾಯಕರೊಂದಿಗೆ ಶುಕ್ರವಾರ ಒಂದು ಗಂಟೆಗೂ ಹೆಚ್ಚು ಕಾಲ ಬೈಡನ್‌ ಸಭೆ ನಡೆಸಿದರು. ನಂತರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಏಷ್ಯನ್‌ ಅಮೆರಿಕನ್‌ ಹಾಗೂ ಪೆಸಿಫಿಕ್‌ ದ್ವೀಪ ಮೂಲದ ಜನರಲ್ಲಿ ಭಯ ಮನೆ ಮಾಡಿರುವುದು ತಿಳಿದು ಬಹಳ ನೋವಾಗಿದೆ. ಈ ಜನರ ವಿರುದ್ಧ ಹಿಂಸೆ ಹಾಗೂ ಕಿರುಕುಳ ವಿಪರೀತ ಹೆಚ್ಚಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ದ್ವೇಷಕ್ಕೆ ಅಮೆರಿಕದಲ್ಲಿ ಜಾಗವಿಲ್ಲ.ಇಂಥ ಧರ್ಮಾಂಧತೆಯನ್ನು ಕಂಡು ಬಂದರೆ, ಎಲ್ಲ ಅಮೆರಿಕನ್ನರು ಅದನ್ನು ವಿರೋಧಿಸಬೇಕು. ಕ್ರೌರ್ಯ ನಡೆದಾಗ ನಾವು ಮೌನವಾಗಿದ್ದರೆ, ಅಂಥ ಕೃತ್ಯಗಳಿಗೆ ನಮ್ಮ ಸಹಮತ ಇದೆ ಎಂದರ್ಥವಾಗುತ್ತದೆ. ಆದರೆ, ನಾವು ಮೂಕಪ್ರೇಕ್ಷಕರಾಗಿ ಇರಲು ಸಾಧ್ಯ ಇಲ್ಲ’ ಎಂದು ಬೈಡನ್ ಹೇಳಿದರು.

ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಮಾತನಾಡಿ, ‘ಅಮೆರಿಕದಲ್ಲಿ ಮೊದಲಿನಿಂದಲೂ ವರ್ಣಭೇದ ನೀತಿ ಇದೆ. ಇದು ಈಗಲೂ ವಾಸ್ತವ. ಅಧ್ಯಕ್ಷ ಬೈಡನ್‌ ಹಾಗೂ ನಾನು ಇಂಥ ತಾರತಮ್ಯವನ್ನು ಸಹಿಸುವುದಿಲ್ಲ. ಯಾವುದೇ ಸ್ಥಳದಲ್ಲಿ, ಯಾರ ವಿರುದ್ಧವೇ ಆಗಲಿ ಹಿಂಸೆ, ದ್ವೇಷ, ತಾರತಮ್ಯ ಕಂಡು ಬಂದರೆ ನಾವು ಅದರ ವಿರುದ್ಧ ಧ್ವನಿ ಎತ್ತುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT