ಸೋಮವಾರ, ಜನವರಿ 25, 2021
17 °C

ಅಮೆರಿಕ: ಹವಾಮಾನ ರಾಯಭಾರಿ ಒಳಗೊಂಡ ರಾಷ್ಟ್ರೀಯ ಭದ್ರತಾ ತಂಡ ಪ್ರಕಟಿಸಿದ ಜೋ ಬೈಡನ್

ಪಿಟಿಐ Updated:

ಅಕ್ಷರ ಗಾತ್ರ : | |

ಜೋ ಬೈಡನ್‌ ಅವರ ರಾಷ್ಟ್ರೀಯ ಭದ್ರತಾ ತಂಡ

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ರಾಷ್ಟ್ರೀಯ ಭದ್ರತಾ ತಂಡವನ್ನು ಪ್ರಕಟಿಸಿದ್ದಾರೆ. ಮೂವರು ಮಹಿಳಾ ಸದಸ್ಯರು ಹಾಗೂ 'ಹವಾಮಾನ' ರಾಯಭಾರಿಯನ್ನೂ ರಾಷ್ಟ್ರೀಯ ಭದ್ರತಾ ಮಂಡಳಿಯು ಒಳಗೊಂಡಿದೆ.

ಬೈಡನ್‌ ಅವರು ವಿದೇಶಾಂಗ ಕಾರ್ಯದರ್ಶಿಯಾಗಿ ಆಂಥೊನಿ ಬ್ಲಿಂಕೆನ್‌; ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿಯಾಗಿ ಅಲೆಜಾಂಡ್ರೊ ಮೇಯರ್‌ಕಾಸ್‌; ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿ ಲಿಂಡಾ ಥಾಮಸ್‌–ಗ್ರೀನ್‌ಫೀಲ್ಡ್‌; ರಾಷ್ಟ್ರೀಯ ಗುಪ್ತಚರ ಇಲಾಖೆಯ ನಿರ್ದೇಶಕರಾಗಿ ಆ್ಯವ್ರಿಲ್‌ ಹೇನ್ಸ್ ನೇಮಕ ಮಾಡಲು ಉದ್ದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಗುಪ್ತಚರ ಇಲಾಖೆಯ ಪ್ರಮುಖ ಸ್ಥಾನ ಜವಾಬ್ದಾರಿ ವಹಿಸಲಿದ್ದಾರೆ.

ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ ಅವರನ್ನು ಹವಾಮಾನ ವಿಚಾರಗಳಿಗೆ ಸಂಬಂಧಿಸಿದಂತೆ ವಿಶೇಷ ಅಧ್ಯಕ್ಷೀಯ ರಾಯಭಾರಿಯಾಗಿ ನಿಯೋಜಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ  ರಾಷ್ಟ್ರೀಯ ಭದ್ರತಾ ಮಂಡಳಿಯು ಹವಾಮಾನ ರಾಯಭಾರಿಯೊಬ್ಬರನ್ನು ಒಳಗೊಂಡಿರಲಿದೆ.

43 ವರ್ಷದ ಜೇಕ್‌ ಸೌಲ್ವಿನ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಿಸಲಾಗಿದ್ದು, ಈ ಸ್ಥಾನವನ್ನು ನಿರ್ವಹಿಸಲಿರುವ ಅತಿ ಕಿರಿಯ ವ್ಯಕ್ತಿಯಾಗಿದ್ದಾರೆ.

'ತಂಡದ ಇವರೆಲ್ಲರೂ ಸಾಕಷ್ಟು ಅನುಭವ ಹೊಂದಿರುವವರು ಹಾಗೂ ಕಷ್ಟದ ಸಂದರ್ಭದಲ್ಲಿಯೂ ಹೊಸತನ್ನು ತರುವವರು' ಎಂದು ಬೈಡನ್‌ ಹೇಳಿದ್ದಾರೆ.

ಬ್ಲಿಂಕೆನ್‌ ಅವರು 30 ವರ್ಷಗಳಿಂದ ಎರಡು ಆಡಳಿತ ಅವಧಿಗಳಲ್ಲಿ ವಿದೇಶಾಂಗ ವ್ಯವಹಾರಗಳಲ್ಲಿ ಪ್ರಮುಖ ಹೊಣೆಗಳನ್ನು ನಿರ್ವಹಿಸಿದ್ದಾರೆ. ಬೈಡನ್‌ ಅವರಿಗೆ 2002ರಿಂದ ವಿದೇಶಾಂಗ ನೀತಿಯ ಸಲಹೆಗಾರರಾಗಿದ್ದಾರೆ. 2015–17ರಲ್ಲಿ ಒಬಾಮಾ–ಬೈಡನ್‌ ಆಡಳಿತಾವಧಿಯಲ್ಲಿ ಬ್ಲಿಂಕೆನ್‌ ವಿದೇಶಾಂಗ ವ್ಯವಹಾರಗಳ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು