ಶುಕ್ರವಾರ, ಡಿಸೆಂಬರ್ 2, 2022
19 °C

ಜಿ20: ಪ್ರಧಾನಿ ಮೋದಿಗೆ ಸೆಲ್ಯೂಟ್ ಹೊಡೆದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬಾಲಿ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ.

ಬಿಡುವಿನ ವೇಳೆಯಲ್ಲಿ ಅನೌಪಚಾರಿಕ ಚರ್ಚೆಗಳು ಉಭಯ ನಾಯಕರ ಮಧ್ಯೆ ನಡೆಯುತ್ತಿವೆ. ರಾಜಕೀಯ ಮರೆತು ಪರಸ್ಪರ ಮಾತುಕತೆಯಲ್ಲಿ ತಲ್ಲೀನರಾಗಿರುವುದು ಕಂಡು ಬಂದಿದೆ.

ಈ ವೇಳೆ ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಎದುರು ಬಂದು ಕುಳಿತುಕೊಳ್ಳುವಾಗ  ಮೋದಿ ಅವರಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಈ ಫೋಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ.

ಜೋ ಬೈಡನ್ ಅವರ ಸೆಲ್ಯೂಟ್‌ಗೆ ಮೋದಿ ಅವರು ಕೈ ಎತ್ತಿ ಹಾಯ್ ಹೇಳಿದ್ದಾರೆ.

ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರೊಂದಿಗೆ  ಮಾತುಕತೆ ನಡೆಸಿ, ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಚರ್ಚಿಸಿದರು ಎಂದು ಪಿಎಂಒ ತಿಳಿಸಿದೆ.

ಜಿನ್‌ಪಿಂಗ್ ಮೋದಿ ಮುಖಾಮುಖಿ

ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಬಹಳ ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮುಖಾಮುಖಿಯಾಗಿದ್ದಾರೆ.

ಅಲ್ಲದೇ ಉಭಯ ನಾಯಕರು ಪರಸ್ಪರ ಹಸ್ತಲಾಘವ ಮಾಡಿ ಗಮನ ಸೆಳೆದಿದ್ದಾರೆ.

2020 ರಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ–ಚೀನಾ ಸೇನೆಯ ಮಧ್ಯೆ ನಡೆದ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಅಲ್ಲದೇ ಚೀನಾದ ಹಲವಾರು ಸೈನಿಕರೂ ಮೃತರಾಗಿದ್ದರು. ಈ ಘಟನೆ ಚೀನಾ–ಭಾರತದ ಮಧ್ಯೆ ವೈಮನಸ್ಸು ಸೃಷ್ಟಿಸಿತ್ತು.

ಸಮಾವೇಶದಲ್ಲಿ ಮಂಗಳವಾರ ಇಂಡೋನೇಷ್ಯಾ ಅಧ್ಯಕ್ಷರು ಔತಣಕೂಟ ಆಯೋಜಿಸಿದ್ದರು. ಔತಣಕೂಟಕ್ಕೆ ತೆರಳುವ ವೇಳೆ ಮೋದಿ ಹಾಗೂ ಜಿನ್‌ಪಿಂಗ್ ಪರಸ್ಪರ ಹಸ್ತಲಾಘವ ಮಾಡಿ ಶುಭಾಶಯ ಕೋರಿದರು. ಆದರೆ, ಇಬ್ಬರೂ ನಾಯಕರ ದ್ವಿಪಕ್ಷೀಯ ಮಾತುಕತೆ ನಡೆಯಲಿದೆಯಾ ಎಂಬುದು ಇನ್ನೂ ತಿಳಿದು ಬಂದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು