ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಣು ಸಮರ ಬೇಡ: ಪುಟಿನ್‌ ಜೊತೆ ಸಂಭಾಷಣೆ ವೇಳೆ ಹಲವು ಸಲ ಎಚ್ಚರಿಸಿದ ಬೈಡನ್

Last Updated 31 ಡಿಸೆಂಬರ್ 2021, 3:20 IST
ಅಕ್ಷರ ಗಾತ್ರ

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ದೂರವಾಣಿ ಮೂಲಕ ಗುರುವಾರ ಮಾತುಕತೆ ನಡೆಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಪರಮಾಣು ಯುದ್ಧ ಆರಂಭವಾಗಬಾರದು ಎಂದು ಹಲವು ಬಾರಿ ಹೇಳಿದ್ದಾರೆ. ರಷ್ಯಾ ಅಧ್ಯಕ್ಷರ ನಿವಾಸ ಮತ್ತು ಆಡಳಿತ ಕಚೇರಿ ರೆಮ್ಲಿನ್‌ನ ರಾಜತಾಂತ್ರಿಕ ಅಧಿಕಾರಿ ಯುರಿ ಉಷಾಕೋವ್ ಈ ಮಾಹಿತಿ ನೀಡಿದ್ದಾರೆ.

'ದೂರವಾಣಿ ಸಂಭಾಷಣೆ ವೇಳೆ ಬೈಡನ್‌ ಅವರು, ಪರಮಾಣು ಯುದ್ಧ ಆರಂಭವಾಗಬಾರದು. ಅದರಿಂದ ಗೆಲುವು ಸಾಧ್ಯವಿಲ್ಲ ಎಂದು ಹಲವು ಬಾರಿ ಹೇಳಿರುವುದು ಅತ್ಯಂತ ಮುಖ್ಯವಾದ ವಿಚಾರ' ಎಂದು ಉಷಾಕೋವ್ ಹೇಳಿರುವುದಾಗಿ ಸ್ಪುಟ್ನಿಕ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹೊಸ ವರ್ಷದ ಬಳಿಕವೂ ಮಾತುಕತೆ ಮುಂದುವರಿಸುವುದು, ವ್ಯಾವಹಾರಿಕ ಸಂಬಂಧ, ಉಕ್ರೇನ್‌ ಸನ್ನಿವೇಶ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಉಭಯ ನಾಯಕರು ದೂರವಾಣಿ ಮೂಲಕ 50 ನಿಮಿಷ ಮಾತುಕತೆ ನಡೆಸಿದ್ದಾರೆ.

ಮಾತುಕತೆ ವೇಳೆ ಬೈಡನ್ ಅವರು, ಉಕ್ರೇನ್‌ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾದರೆ, ರಷ್ಯಾ ವಿರುದ್ಧ ಆರ್ಥಿಕ, ಮಿಲಿಟರಿ ನಿರ್ಬಂಧ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಅಂತಹ ಪ್ರಯತ್ನಗಳು ನಡೆದರೆ, ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಲಾಗುತ್ತದೆ ಎಂದು ಪುಟಿನ್‌ ಪ್ರತಿಎಚ್ಚರಿಕೆ ನೀಡಿದ್ದಾರೆ ಎಂದು ರಷ್ಯಾ ಅಧಿಕಾರಿ ತಿಳಿಸಿದ್ದಾರೆ.

'ರಷ್ಯಾ ವಿರುದ್ಧ ಕ್ರಮ ಕೈಗೊಂಡರೆ ಸಂಬಂಧ ಕಡಿದುಕೊಳ್ಳಲಾಗುವುದು ಎಂದು ನಮ್ಮ ಅಧ್ಯಕ್ಷರು (ಪುಟಿನ್) ಸ್ಪಷ್ಟವಾಗಿ ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಆ ರೀತಿ ಆಗುವುದಿಲ್ಲ ಎಂಬ ವಿಶ್ವಾದಲ್ಲಿರುವುದಾಗಿಯೂ ತಿಳಿಸಿದ್ದಾರೆ' ಎಂದು ಅವರು ಹೇಳಿದ್ದಾರೆ.

ಅಮೆರಿಕವು ಉಕ್ರೇನ್‌ನಲ್ಲಿ ಯಾವುದೇ ರೀತಿಯ ಆಕ್ರಮಣಕಾರಿ ಶಸ್ತ್ರಾಸ್ತ್ರಗಳ ನಿಯೋಜನೆ ಮಾಡುವುದಿಲ್ಲ ಎಂದು ಬೈಡನ್‌ ಭರವಸೆ ನೀಡಿದ್ದಾರೆ. ಸ್ಪಷ್ಟ, ಪ್ರಧಾನ ಮತ್ತು ನಿಖರ ವಿಚಾರದ ಬಗ್ಗೆ ನಡೆದ ಈ ಮಾತುಕತೆಯು ನಮಗೆ ತೃಪ್ತಿ ನೀಡಿದೆ. ಈ ಮಾತುಕತೆಯು ರಚನಾತ್ಮಕವಾಗಿದೆ ಎಂದೂ ಉಷಾಕೋವ್‌ ಮಾಹಿತಿ ನೀಡಿದ್ದಾರೆ.

ಮಧ್ಯಾಹ್ನ 3.35ಕ್ಕೆ ಆರಂಭವಾದ ಮಾತುಕತೆ, ಸಂಜೆ 4.25ಕ್ಕೆ ಮುಕ್ತಾಯವಾಯಿತು ಎಂದು ಶ್ವೇತಭವನ ಹೇಳಿದೆ.

ಉಕ್ರೇನ್‌ನ ಗಡಿ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ರಷ್ಯಾದ ಸೈನಿಕರನ್ನು ನಿಯೋಜಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಬಗೆಹರಿಸುವುದಕ್ಕಾಗಿ ಬೈಡನ್‌ ಮತ್ತು ಪುಟಿನ್ ನಡುವೆ ಇದೇ ತಿಂಗಳ ಆರಂಭದಲ್ಲಿಯೂ ಮಾತುಕತೆ ನಡೆದಿತ್ತು. ಆದರೆ, ಯಾವುದೇ ಫಲ ದೊರೆತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT