ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋರ್ಡಾನ್ ರಾಜಕುಮಾರ ಹಮ್ಜಾಗೆ ಗೃಹಬಂಧನ?

ಮಲಸಹೋದರನ ವಿರುದ್ಧ ರಾಜಕುಮಾರ ಹಮ್ಜಾ ಆರೋಪ
Last Updated 4 ಏಪ್ರಿಲ್ 2021, 5:48 IST
ಅಕ್ಷರ ಗಾತ್ರ

ಅಮ್ಮಾನ್‌: 'ಮಲಸಹೋದರ, ಜೋರ್ಡಾನ್‌ನ ರಾಜ ಅಬ್ದುಲ್ಲಾ–2 ನನ್ನನ್ನು ಗೃಹ ಬಂಧನದಲ್ಲಿರಿಸಿದ್ಧಾರೆ. ಅವರ ನೇತೃತ್ವದ ಆಡಳಿತ ಅಸಮರ್ಥವಾಗಿದ್ದು, ಭ್ರಷ್ಟಾಚಾರ ಮಿತಿಮೀರಿದೆ’ ಎಂದು ರಾಜಕುಮಾರ ಹಮ್ಜಾ ಬಿನ್‌ ಅಲ್‌–ಹುಸೇನ್‌ ಹೇಳಿದ್ದಾರೆ.

ವಿಡಿಯೊ ಸಂದೇಶದಲ್ಲಿ ಅವರು ಈ ವಿಷಯ ಹೇಳಿದ್ದಾರೆ. ಅವರ ಹೇಳಿಕೆ ಇರುವ ವಿಡಿಯೊ ಬಿಬಿಸಿಗೆ ಸೋರಿಕೆಯಾಗಿದೆ. ತಾನು ಬಿತ್ತರಿಸಿರುವ ಹೇಳಿಕೆಯನ್ನು ಹಮ್ಜಾ ಪರ ವಕೀಲರು ಒದಗಿಸಿದ್ದಾರೆ ಎಂದೂ ಬಿಬಿಸಿ ಹೇಳಿಕೊಂಡಿದೆ.

ಜೋರ್ಡಾನ್‌ನ ರಾಜಪ್ರಭುತ್ವದಲ್ಲಿ ಕಾಣಿಸಿಕೊಂಡಿರುವ ವೈಮನಸ್ಸನ್ನು ಈ ಬೆಳವಣಿಗೆ ತೋರುತ್ತದೆ ಎಂದು ಹೇಳಲಾಗುತ್ತಿದೆ.

‘ಶನಿವಾರ ಬೆಳಿಗ್ಗೆ ಸೇನೆಯ ಮುಖ್ಯಸ್ಥರು ನನ್ನನ್ನು ಭೇಟಿ ಮಾಡಿ, ಹೊರಗಡೆ ಹೋಗಲು ನಿಮಗೆ ಅನುಮತಿ ಇಲ್ಲ. ಜನರನ್ನು ಭೇಟಿ ಮಾಡಲು, ಅವರೊಂದಿಗೆ ಮಾತನಾಡಲು ಸಹ ಅವಕಾಶ ಇಲ್ಲ ಎಂಬುದಾಗಿ ತಿಳಿಸಿದರು’ ಎಂದು ಹಮ್ಜಾ ಈ ವಿಡಿಯೊದಲ್ಲಿ ಹೇಳಿದ್ದಾರೆ.

‘ನನಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ. ಮೊಬೈಲ್‌ ಬಳಕೆ, ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ನಾನು ಸ್ಯಾಟಲೈಟ್‌ ಫೋನ್‌ ಮೂಲಕ ಮಾತನಾಡುತ್ತಿದ್ದು, ಅದನ್ನೂ ಸಹ ಸ್ಥಗಿತಗೊಳಿಸುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

‘ಭದ್ರತೆ ಕಾರಣದಿಂದಾಗಿ ಇಬ್ಬರು ಮಾಜಿ ಹಿರಿಯ ಅಧಿಕಾರಿಗಳು ಹಾಗೂ ಇತರ ಸಂಶಯಾಸ್ಪದ ವ್ಯಕ್ತಿಗಳನ್ನು ಬಂಧಿಸಲಾಗಿದೆ’ ಎಂದು ಸರ್ಕಾರಿ ಒಡೆತನದ ಸುದ್ದಿಸಂಸ್ಥೆ ವರದಿ ಮಾಡಿದೆ. ಇದರ ಬೆನ್ನಲ್ಲೇ, ರಾಜಕುಮಾರ ಹಮ್ಜಾ ಅವರು ತಮ್ಮನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂಬ ಹೇಳಿಕೆಯನ್ನು ಹೊರಹಾಕಿದ್ದಾರೆ.

ಹಮ್ಜಾ ಅವರ ಹೇಳಿಕೆಯನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ. ‘ಅವರನ್ನು ಬಂಧಿಸಿಲ್ಲ ಅಥವಾ ಗೃಹಬಂಧನಕ್ಕೂ ಒಳಪಡಿಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT