ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಅತೀ ಭ್ರಷ್ಟ ವ್ಯವಸ್ಥೆಯಲ್ಲಿ ನ್ಯಾಯಾಂಗಕ್ಕೆ 3ನೇ ಸ್ಥಾನ: ಜನಾಭಿಪ್ರಾಯ

Last Updated 9 ಡಿಸೆಂಬರ್ 2022, 11:42 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನಿಯರ ದೃಷ್ಟಿಯಲ್ಲಿ ಪೊಲೀಸ್‌ ಇಲಾಖೆ ಅತ್ಯಂತ ಭ್ರಷ್ಟವ್ಯವಸ್ಥೆಯಾಗಿದ್ದರೆ, ಟೆಂಡರ್ ಮತ್ತು ಗುತ್ತಿಗೆದಾರರು ಎರಡನೇ ಅತ್ಯಂತ ಭ್ರಷ್ಟರು ಎನಿಸಿಕೊಂಡಿದ್ದಾರೆ. ನ್ಯಾಯಾಂಗವನ್ನು ಅಲ್ಲಿನ ಜನ ಮೂರನೇ ಅತ್ಯಂತ ಭ್ರಷ್ಟ ವ್ಯವಸ್ಥೆ ಎಂದು ಪರಿಗಣಿಸಿದ್ದಾರೆ. 2 ಕೋಟಿಗೂ ಅಧಿಕ ಮಕ್ಕಳು ಶಾಲೆಯಿಂದ ಹೊರಗಿರುವ ಪಾಕಿಸ್ತಾನದಲ್ಲಿ ಶಿಕ್ಷಣ ಕ್ಷೇತ್ರವು ನಾಲ್ಕನೇ ಅತ್ಯಂತ ದೊಡ್ಡ ಭ್ರಷ್ಟ ವ್ಯವಸ್ಥೆ ಎನಿಸಿಕೊಂಡಿದೆ.

‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ಪಾಕಿಸ್ತಾನ (ಟಿಐಪಿ)’ ನಡೆಸಿದ ರಾಷ್ಟ್ರೀಯ ಭ್ರಷ್ಟಾಚಾರ ಗ್ರಹಿಕೆ ಸಮೀಕ್ಷೆ (ಎನ್‌ಸಿಪಿಎಸ್)–2022ರಲ್ಲಿ ಜನರಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಸುದ್ದಿ ಮಾಧ್ಯಮ ‘ಸಾಮಾ ನ್ಯೂಸ್’ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ಅಕ್ರಮ, ಲಂಚ ಮತ್ತು ಇತರ ಅನಿಷ್ಠ ಪದ್ಧತಿ ಪ್ರಚಲಿತದಲ್ಲಿರುವ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಶ್ರೇಯಾಂಕ ನೀಡಲು ಸಮೀಕ್ಷೆಯಲ್ಲಿ ಜನರನ್ನು ಮಾತನಾಡಿಸಲಾಗಿದೆ.

ದೇಶದ ಪೊಲೀಸ್ ಇಲಾಖೆಯು ಭ್ರಷ್ಟಾಚಾರದಲ್ಲಿ ಕುಖ್ಯಾತಿ ಗಳಿಸಿರುವುದು ಗೊತ್ತಾಗಿದೆ. ವಿವಿಧ ಸ್ತರದ ಜನರಿಂದ ಲಭ್ಯವಾದ ಉತ್ತರಗಳಿಂದ ಇದು ಸಾಬೀತಾಗಿದೆ. ನಂತರದ ಸ್ಥಾನದಲ್ಲಿ ಟೆಂಡರ್‌, ಗುತ್ತಿಗೆದಾರರಿದ್ದಾರೆ. ಸಾರ್ವಜನಿಕ ಅಭಿವೃದ್ಧಿ ಯೋಜನೆಯ ಟೆಂಡರ್‌ಗಳು, ಗುತ್ತಿಗೆಗಳು ಜನಜೀವನದೊಂದಿಗೆ ನೇರವಾಗಿ ಸಂಬಂಧಪಡದಿದ್ದರೂ, ಅಲ್ಲಿನ ಜನ ಈ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇರುವುದಾಗಿ ಪ್ರತಿಪಾದಿಸಿದ್ದಾರೆ.

ದೇಶದ ನ್ಯಾಯಾಂಗವು ಜನರಿಗೆ ನ್ಯಾಯದಾನ ಮಾಡಲು ಸಾಧ್ಯವಾಗಿಲ್ಲ. ಏಕೆಂದರೆ ನ್ಯಾಯದ ಮಾಪಕಗಳು ಬಲಿಷ್ಠರ ಪರವಾಗಿದೆ ಎಂದು ಅಲ್ಲಿನವರು ನಂಬಿದ್ದಾರೆ. ಅದಕ್ಕಾಗಿಯೇ ಅವರು ಅದನ್ನು ಮೂರನೇ ಅತ್ಯಂತ ಭ್ರಷ್ಟ ಸಂಸ್ಥೆ ಎಂದು ಪರಿಗಣಿಸಿದ್ದಾರೆ ಎಂದು ‘ಸಾಮಾ ನ್ಯೂಸ್’ ವರದಿ ಮಾಡಿದೆ. ಶಿಕ್ಷಣ ಕ್ಷೇತ್ರಕ್ಕೆ ನಾಲ್ಕನೇ ಸ್ಥಾನ ನೀಡಿದ್ದಾರೆ.

ಸಿಂಧ್‌ ಪ್ರಾಂತ್ಯದಲ್ಲಿ ಶಿಕ್ಷಣವೇ ಕ್ಷೇತ್ರವೇ ಹೆಚ್ಚು ಭ್ರಷ್ಟ ವ್ಯವಸ್ಥೆ ಎಂಬ ಉತ್ತರ ಲಭ್ಯವಾಗಿದೆ. ಪಂಜಾಬ್‌ ಪ್ರಾಂತ್ಯದಲ್ಲಿ ಪೊಲೀಸ್‌ ಇಲಾಖೆ, ಖೈಬರ್‌ ಫಕ್ತುನ್‌ಕ್ವಾದಲ್ಲಿ ನ್ಯಾಯಾಂಗ ಅತ್ಯಂತ ಭ್ರಷ್ಟ ಸಂಸ್ಥೆ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT