ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್‌ ನಗರಪಾಲಿಕೆ: ಮಹಿಳೆಯರ ಉದ್ಯೋಗಕ್ಕೆ ಕುತ್ತು

ಹೊಸ ಮೇಯರ್ ಆದೇಶ
Last Updated 19 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಕಾಬೂಲ್‌: ಕಾಬೂಲ್‌ ನಗರಪಾಲಿಕೆಯ ಮಹಿಳಾ ಉದ್ಯೋಗಿಗಳಿಗೆ ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಮಹಿಳೆಯರಿಗೆ ಪರ್ಯಾಯವಾಗಿ ಪುರುಷರು ಮಾಡಲು ಸಾಧ್ಯವಾಗದ ಕೆಲಸಗಳಿಗಷ್ಟೇ ಮಹಿಳೆಯರನ್ನು ಬಳಸಿಕೊಳ್ಳಲಾಗುವುದು ಎಂದು ಕಾಬೂಲ್‌ನ ಮಧ್ಯಂತರ ಮೇಯರ್‌ ಭಾನುವಾರ ಹೇಳಿದ್ದಾರೆ. ಅಫ್ಗಾನಿಸ್ತಾನದ ತಾಲಿಬಾನ್‌ ಆಡಳಿತಗಾರರು ಮಹಿಳೆಯರ ಮೇಲೆ ಹೇರಿರುವ ಹೊಸ ನಿರ್ಬಂಧ ಇದಾಗಿದೆ.

ಮುಂದಿನ ನಿರ್ಧಾರ ತಿಳಿಸುವವರೆಗೂ ಮಹಿಳಾ ಉದ್ಯೋಗಿಗಳಿಗೆ ಮನೆಯಲ್ಲೇ ಇರುವಂತೆ ಆದೇಶಿಸಲಾಗಿದೆ ಎಂದು ಮೇಯರ್ ನಮೋನಿ ಹೇಳಿದ್ದಾರೆ. ವಿನ್ಯಾಸ, ಎಂಜಿನಿಯರಿಂಗ್ ವಿಭಾಗಗಳು, ಮಹಿಳಾ ಸಾರ್ವಜನಿಕ ಶೌಚಾಲಯದ ಪರಿಚಾರಿಕೆ ಸೇರಿದಂತೆ ಪುರುಷರಿಂದ ಮಾಡಲಾಗದ ಕೆಲಸಗಳಲ್ಲಿ ಮಾತ್ರ ಅವರು ಮುಂದುವರಿಯಬಹುದು. ಆದರೆ ಎಷ್ಟು ಮಹಿಳಾ ಉದ್ಯೋಗಿಗಳನ್ನು ಮನೆಯಲ್ಲಿಯೇ ಇರಲು ತಿಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿಲ್ಲ. ತಾಲಿಬಾನ್ ಆಡಳಿತಕ್ಕೂ ಮುನ್ನ ಕಾಬೂಲ್ ನಗರ ಪಾಲಿಕೆಯ ಸುಮಾರು 3,000 ಉದ್ಯೋಗಿಗಳ ಪೈಕಿ ಮೂರನೇ ಒಂದರಷ್ಟು ಮಹಿಳೆಯರು ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರು.

1990ರ ದಶಕದಲ್ಲಿ ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಳ್ವಿಕೆ ಇದ್ದಾಗ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಶಾಲೆಗೆ ಹೋಗುವುದು, ಉದ್ಯೋಗ ಮಾಡುವುದು ಮತ್ತು ಸಾರ್ವಜನಿಕ ಜೀವನದಲ್ಲಿ ಇರುವುದನ್ನು ನಿಷೇಧಿಸಲಾಗಿತ್ತು. ಈ ಬಾರಿ, ಕಠಿಣ ನಿಯಮಗಳನ್ನು ಹೇರುವುದಿಲ್ಲ ಎಂದು ತಾಲಿಬಾನ್‌ ಆರಂಭದಲ್ಲಿ ಹೇಳಿತ್ತು. ಆದರೆ, ನಗರಗಳಲ್ಲಿ ಮಹಿಳೆಯರು ಕೆಲಸ ಮಾಡುವುದು ಸಾಧ್ಯವಿಲ್ಲ ಎಂಬ ಸೂಚನೆಯನ್ನು ಈಗಿನ ನಿರ್ಧಾರವು ಸ್ಪಷ್ಟಪಡಿಸಿದೆ.

ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸುವ ಹಲವು ನಿರ್ಧಾರಗಳನ್ನು ತಾಲಿಬಾನ್‌ ಪ್ರಕಟಿಸಿದೆ. ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಿಗೆ ಹೋಗಲು ಹೆಣ್ಣುಮಕ್ಕಳಿಗೆ ಸದ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ. ಆದರೆ ಈ ವರ್ಗದ ಹುಡುಗರು ಈಗಾಗಲೇ ಶಾಲೆಗೆ ಹೋಗಲು ಆರಂಭಿಸಿದ್ದಾರೆ. ಲಿಂಗಾಧಾರಿತವಾಗಿ ಪ್ರತ್ಯೇಕ ತರಗತಿಗಳಲ್ಲಿ ಅಧ್ಯಯನ ಮುಂದುವರಿಸಲು ವಿಶ್ವವಿದ್ಯಾಲಯಗಳ ವಿದ್ಯಾರ್ಥಿನಿಯರಿಗೆ ಸೂಚಿಸಲಾಗಿದೆ. ಇಸ್ಲಾಮಿಕ್ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.

ಬೆಳೆಯುತ್ತಿರುವ ಹತಾಶೆಯ ಸಂಕೇತವಾಗಿ, ಕಾಬೂಲ್‌ನಲ್ಲಿ ಬೀದಿ ಮಾರುಕಟ್ಟೆಗಳು ಹುಟ್ಟಿಕೊಂಡಿವೆ. ಅಲ್ಲಿ ನಿವಾಸಿಗಳು ತಮ್ಮ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವು ಅಫ್ಗನ್ನರು ದೇಶ ತೊರೆಯಲು ಬೇಕಾಗುವ ಹಣ ಹೊಂದಿಸುವ ಸಲುವಾಗಿ ಮಾರಾಟದಲ್ಲಿ ತೊಡಗಿದ್ದರೆ, ಇತರರು ಹೊತ್ತಿನ ಊಟಕ್ಕೆ ದಾರಿ ಮಾಡಿಕೊಳ್ಳುತ್ತಿದ್ದಾರೆ.

ಹತ್ತು ನಿಮಿಷದ ಪ್ರತಿಭಟನೆ
ಮಹಿಳಾ ವ್ಯವಹಾರಗಳ ಸಚಿವಾಲಯವನ್ನು ತಾಲಿಬಾನ್ ಶುಕ್ರವಾರ ಸ್ಥಗಿತಗೊಳಿಸಿದೆ. ಅದರ ಬದಲಾಗಿ, ಇಸ್ಲಾಮಿಕ್ ಕಾನೂನುಗಳನ್ನು ಜಾರಿಗೊಳಿಸುವ ಕೆಲಸವನ್ನು ಹೊಸ ಸಚಿವಾಲಯಕ್ಕೆ ವಹಿಸಲಾಗಿದೆ. ಇದನ್ನು ಪ್ರಶ್ನಿಸಿ 10ಕ್ಕೂ ಹೆಚ್ಚು ಮಹಿಳೆಯರು ಸಚಿವಾಲಯದ ಕಚೇರಿ ಎದುರು ಭಾನುವಾರ ಪ್ರತಿಭಟನೆ ನಡೆಸಿದರು. ‘ಮಹಿಳೆಯರು ಸಕ್ರಿಯವಾಗಿರದ ಸಮಾಜವು ಸತ್ತ ಸಮಾಜದ ಒಂದು ಚಿಹ್ನೆ’ ಎಂದು ಅವರು ಪ್ರತಿಪಾದಿಸಿದರು.

‘ತಾಲಿಬಾನ್‌ನವರು ಏಕೆ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ? ನಮ್ಮ ಹೆಣ್ಣುಮಕ್ಕಳಿಗೆ ಸಿಗಬೇಕಾದ ಹಕ್ಕುಗಳಿಗಾಗಿ ನಾವಿಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ಬಸಿರಾ ತವಾನಾ ಎಂಬ ಮಹಿಳೆ ಹೇಳಿದ್ದಾರೆ.

ಕೇವಲ 10 ನಿಮಿಷದಲ್ಲಿ ಪ್ರತಿಭಟನೆ ಮುಕ್ತಾಯ ಕಂಡಿತು. ಸನಿಹದಲ್ಲಿ ಎರಡು ಕಾರುಗಳಲ್ಲಿ ಬಂದಿದ್ದ ತಾಲಿಬಾನ್‌ ಯೋಧರು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ತಾಲಿಬಾನ್ ಇತ್ತೀಚೆಗೆ ಮಹಿಳಾಪರವಾದಹಲವು ಪ್ರತಿಭಟನೆಗಳನ್ನು ತಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT