ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ಕೋವಿಡ್‌ ನಿಭಾಯಿಸಿದ ರೀತಿ ಅಮೆರಿಕದ ಇತಿಹಾಸದಲ್ಲೇ ದೊಡ್ಡ ವೈಫಲ್ಯ: ಕಮಲಾ

Last Updated 8 ಅಕ್ಟೋಬರ್ 2020, 3:56 IST
ಅಕ್ಷರ ಗಾತ್ರ

ವಾಷಿಂಗ್ಟನ್‌ ಡಿಸಿ: ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರ್ಕಾರ ಕೋವಿಡ್‌–19 ಅನ್ನು ನಿಭಾಯಿಸಿದ ರೀತಿ ಅಮೆರಿಕದ ಇತಿಹಾಸದಲ್ಲೇ ಈ ವರೆಗಿನ ಯಾವುದೇ ಸರ್ಕಾರದ ಅತಿ ದೊಡ್ಡ ವೈಫಲ್ಯ ಎಂದು ಉಪಾಧ್ಯಕ್ಷ ಸ್ಥಾನದ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಹೇಳಿದ್ದಾರೆ.

ಅಮೆರಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ನಡುವಿನ ಚರ್ಚೆಯು ‘ಉತಾಹ್‌’ ನಗರದ ‘ಸಾಲ್ಟ್‌ ಲೇಕ್‌ ಸಿಟಿ’ಯಲ್ಲಿ ಬುಧವಾರ ರಾತ್ರಿ ನಡೆಯಿತು. ಇದರಲ್ಲಿ, ಕ್ಯಾಲಿಫೋರ್ನಿಯಾದ ಸೆನೆಟರ್‌ ಕೂಡ ಆಗಿರುವ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಮತ್ತು ಸದ್ಯ ಅಮೆರಿಕದ ಉಪಾಧ್ಯಕ್ಷ, ಕೋವಿಡ್‌ ಟಾಸ್ಕ್‌ಫೋರ್ಸ್‌ನ ಮುಖ್ಯಸ್ಥ ಮೈಕ್‌ ಪೆನ್ಸ್‌ ಭಾಗಿಯಾಗಿದ್ದರು. ಈ ಚರ್ಚೆಯ ವೇಳೆ ಕೋವಿಡ್‌–19 ವಿಚಾರದಲ್ಲಿ ಕಮಲಾ ಹ್ಯಾರಿಸ್‌ ಅವರು ಡೊನಾಲ್ಡ್‌ ಟ್ರಂಪ್‌ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

‘ಟ್ರಂಪ್ ಆಡಳಿತದ ಅವಧಿಯಲ್ಲಿ ಕೊರೊನಾ ವೈರಸ್ ಲಸಿಕೆ ಲಭ್ಯವಾದರೆ, ಅದನ್ನು ವೈಜ್ಞಾನಿಕ ಸಲಹೆಗಾರರು ಸ್ವೀಕರಿಸುವುದಿಲ್ಲ. ನಾನೂ ಅದನ್ನು ಪಡೆಯುವುದಿಲ್ಲ. ಆದರೆ ದೇಶದ ಉನ್ನತ ವೈಜ್ಞಾನಿಕ ಸಲಹೆಗಾರರಾದ ಡಾ. ಆಂಥೋನಿ ಫೌಸಿ ಲಸಿಕೆಯನ್ನು ಅಂಗೀಕರಿಸಿದರೆ ಮಾತ್ರ ಅದನ್ನು ಪಡೆಯುತ್ತೇನೆ,’ ಎಂದು ಕಮಲಾ ಹ್ಯಾರಿಸ್‌ ಹೇಳಿದರು.

ಇದರಿಂದ ಕೆರಳಿದ ಉಪಾಧ್ಯಕ್ಷ ಮೈಕ್‌ ಪೆನ್ಸ್‌, ‘ಟ್ರಂಪ್ ಅವರ ವಿಶ್ವಾಸಾರ್ಹತೆಯ ಮೇಲಿನ ದಾಳಿಯ ಮೂಲಕ ಹ್ಯಾರಿಸ್ ಭವಿಷ್ಯದ ಕೊರೊನಾ ವೈರಸ್ ಲಸಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಅವಿಶ್ವಾಸ ಬಿತ್ತಿದ್ದಾರೆ,’ ಎಂದು ಪೆನ್ಸ್ ಆರೋಪಿಸಿದರು.

ಇನ್ನು, ಚರ್ಚೆಯಲ್ಲಿ ಕಮಲಾ ಹ್ಯಾರಿಸ್‌ ಮಾತನಾಡಿದ ರೀತಿಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 'ನಾವೆಲ್ಲರೂ ಹೆಮ್ಮೆಪಡುವಂತೆ ಮಾಡಿದ್ದೀರಿ,’ ಎಂದು ಟ್ವೀಟ್‌ ಮಾಡಿದ್ದಾರೆ.

ಕೋವಿಡ್‌ ಸಾಂಕ್ರಾಮಿಕ ರೋಗದಿಂದ ಅಮೆರಿಕದಲ್ಲಿ ಸಾವಿನ ಸಂಖ್ಯೆ 210,000 ಮೀರಿದೆ. 75 ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಅತಿ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸದ್ಯ ಅಮೆರಿಕ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT