ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಅಧ್ಯಕ್ಷೆಯಾಗಲು ಕಮಲಾ ಹ್ಯಾರಿಸ್ ಯೋಗ್ಯರಲ್ಲ, ನನ್ನ ಮಗಳು ಸೂಕ್ತ: ಟ್ರಂಪ್‌

Last Updated 29 ಆಗಸ್ಟ್ 2020, 7:43 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಅಮೆರಿಕದ ಅಧ್ಯಕ್ಷೆಯಾಗಲು ಕಮಲಾ ಹ್ಯಾರಿಸ್‌ ಯೋಗ್ಯರಲ್ಲ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟೀಕಿಸಿದ್ದಾರೆ.

ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ರಿಪಬ್ಲಿಕ್‌ ಪಕ್ಷದ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ ಟ್ರಂಪ್‌ ‘ಮಹಿಳೆಯೊಬ್ಬರು ಅಮೆರಿಕದ ಅಧ್ಯಕ್ಷ ಗಾದಿಗೆ ಏರಬೇಕೆಂಬ ಮಾತಿಗೆ ನಾನು ಬೆಂಬಲ ಸೂಚಿಸುತ್ತೇನೆ. ಆದರೆ, ಆ ಹುದ್ದೆಗೆ ಕಮಲಾ ಹ್ಯಾರಿಸ್‌ ಸಮರ್ಥರಲ್ಲ. ಆ ಸ್ಥಾನಕ್ಕೆ ನನ್ನ ಮಗಳು ಇವಾಂಕ್‌ ಟ್ರಂಪ್‌ ಸೂಕ್ತ ಆಯ್ಕೆ’ ಎಂದಿದ್ದಾರೆ.

‘ಅಧ್ಯಕ್ಷ ಸ್ಥಾನದಲ್ಲಿ ಮಹಿಳೆಯೊಬ್ಬರನ್ನು ನೋಡುವ ಆಸೆ ನನಗೂ ಇದೆ. ನೀವೆಲ್ಲಾ ಇವಾಂಕ್‌ ಹೆಸರನ್ನು ಹೇಳುತ್ತಿದ್ದೀರಿ. ಕಮಲಾ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ವರ್ಷದ ಹಿಂದೆ ಹೇಳಲಾಗಿತ್ತು. ಹಾಗೆ ಹೇಳಿದ ಐದೇ ತಿಂಗಳಲ್ಲಿ ಅವರ ಜನಪ್ರಿಯತೆಯು ತಳಮಟ್ಟಕ್ಕೆ ಕುಸಿದಿತ್ತು’ ಎಂದು ಟ್ರಂಪ್‌ ಲೇವಡಿ ಮಾಡಿದ್ದಾರೆ.

‘ತಾವು ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯಾದರೆ ಯಾರೂ ಮತ ಹಾಕುವುದಿಲ್ಲ ಎಂಬುದು ಕಮಲಾ ಅವರಿಗೆ ಅರಿವಾಯಿತು. ಹೀಗಾಗಿ ಅವರು ಅಧ್ಯಕ್ಷೀಯ ಸ್ಥಾನದ ರೇಸ್‌ನಿಂದ ಹಿಂದೆ ಸರಿದರು’ ಎಂದು ಮೂದಲಿಸಿದ್ದಾರೆ.

2024ರ ಚುನಾವಣೆಯಲ್ಲಿ ಕಮಲಾ ಅವರನ್ನು ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯನ್ನಾಗಿ ಘೋಷಿಸಲು ಡೆಮಾಕ್ರಟಿಕ್‌ ಪಕ್ಷವು ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿಬಂದಿವೆ. ಹೀಗಾಗಿ ಟ್ರಂಪ್‌, ಅವರು ತಮ್ಮ ಮೊದಲ ಪ್ರಚಾರ ರ್‍ಯಾಲಿಯಲ್ಲಿ ಕಮಲಾ ಅವರನ್ನು ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸಿದ್ದಾರೆ.

‘ಟ್ರಂಪ್‌ ಅವರು ಅಧ್ಯಕ್ಷರಾಗಿ ಮಾಡಬೇಕಿದ್ದ ಕೆಲಸಗಳನ್ನು ಸಮರ್ಥವಾಗಿ ನಿಭಾಯಿಸಿಲ್ಲ. ಅವರು ಅಮೆರಿಕದ ಪ್ರಜೆಗಳನ್ನು ರಕ್ಷಿಸುವಲ್ಲೂ ವಿಫಲರಾಗಿದ್ದಾರೆ’ ಎಂದು ಕಮಲಾ ಕಿಡಿಕಾರಿದ್ದರು.

ರಿಪಬ್ಲಿಕನ್‌ ಪಕ್ಷವು ಗುರುವಾರ ಟ್ರಂಪ್‌ ಅವರನ್ನು ಅಧಿಕೃತವಾಗಿ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯನ್ನಾಗಿ ಪ್ರಕಟಿಸಿತ್ತು.

ಭಾರತ ಸಂಜಾತೆ ಕಮಲಾ ಅವರು ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ವಿರುದ್ಧ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. 55 ವರ್ಷ ವಯಸ್ಸಿನ ಕಮಲಾಗೆ ಹೆಚ್ಚಿನ ಜನಮನ್ನಣೆ ಇಲ್ಲದಿರುವುದನ್ನು ಅರಿತ ಡೆಮಾಕ್ರಟಿಕ್‌ ಪಕ್ಷವು ಅವರ ಹೆಸರನ್ನು ಕೈಬಿಟ್ಟಿತ್ತು. ಈಗ ಅವರು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT