ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8.40 ಲಕ್ಷ ಡೋಸ್ ಕೋವಿಡ್‌ ಲಸಿಕೆ ಅವಧಿ ಮುಕ್ತಾಯ; ನಾಶಪಡಿಸಲು ಕೀನ್ಯಾ ನಿರ್ಧಾರ

Last Updated 24 ಮಾರ್ಚ್ 2022, 7:07 IST
ಅಕ್ಷರ ಗಾತ್ರ

ನೈರೋಬಿ: ಕೀನ್ಯಾದಲ್ಲಿ ವಿತರಣೆಯಾಗದೆ ಉಳಿದಿರುವ ಕೋವಿಡ್–19 ಲಸಿಕೆ ಡೋಸ್‌ಗಳ ಬಳಕೆ ಅವಧಿ ಮುಕ್ತಾಯವಾಗಿದ್ದು, 8,40,000 ಡೋಸ್‌ಗಳಷ್ಟು ಲಸಿಕೆಯನ್ನು ನಾಶಪಡಿಸಲು ನಿರ್ಧರಿಸಿರುವುದಾಗಿ ವರದಿಯಾಗಿದೆ.

'ಕೊವ್ಯಾಕ್ಸ್‌' ವ್ಯವಸ್ಥೆಯ ಮೂಲಕ ಜನವರಿಯಲ್ಲಿ ಕೀನ್ಯಾ 22 ಲಕ್ಷ ಡೋಸ್‌ ಕೋವಿಡ್‌ ಲಸಿಕೆಯನ್ನು ಕೊಡುಗೆ ರೂಪದಲ್ಲಿ ಪಡೆದುಕೊಂಡಿದೆ. ಲಸಿಕೆ ಅಭಿಯಾನವನ್ನು ದೇಶದಾದ್ಯಂತ ನಡೆಸಿಯೂ ಲಸಿಕೆ ಡೋಸ್‌ಗಳು ಉಳಿದಿವೆ. ಆಸ್ಟ್ರಾಜೆನಿಕಾದ 8,40,000 ಡೋಸ್‌ ಕೋವಿಡ್‌ ಲಸಿಕೆ ಬಳಕೆಯ ಅವಧಿ ಫೆಬ್ರುವರಿ 28ರಂದು ಮುಕ್ತಾಯಗೊಂಡಿದೆ.

ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಜನರಲ್ಲಿ ಹಿಂಜರಿಕೆ ಹೆಚ್ಚಿರುವುದೇ ಲಸಿಕೆ ಡೋಸ್‌ಗಳು ಬಳಕೆಯಾಗದೆ ಉಳಿಯಲು ಕಾರಣ. ಲಸಿಕೆ ಕುರಿತು ತಪ್ಪು ಮಾಹಿತಿ ಹಾಗೂ ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ಊಹಾಪೋಹಗಳು ಹರಿದಾಡುತ್ತಿವೆ ಎಂದು ಕೀನ್ಯಾ ಆರೋಗ್ಯ ಸಚಿವಾಲಯದ ಸಂಪುಟ ಕಾರ್ಯದರ್ಶಿ ಮುಟಾಹಿ ಕಾಗ್ವೆ ಹೇಳಿದ್ದಾರೆ.

ಕೋವಿಡ್‌–19 ಪಾಸಿಟಿವಿಟಿ ದರ ಕಡಿಮೆಯಾಗಿರುವುದು ಹಾಗೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಇಳಿಮುಖವಾಗಿರುವುದರಿಂದ ಕೀನ್ಯಾದ ಜನತೆ ಲಸಿಕೆ ಹಾಕಿಸಿಕೊಳ್ಳುವುದರಿಂದ ದೂರ ಉಳಿಯುತ್ತಿದ್ದಾರೆ. ಪ್ರಸ್ತುತ ನಿತ್ಯ ಕೋವಿಡ್‌ ಲಸಿಕೆ ಡೋಸ್‌ ವಿತರಣೆ ಪ್ರಮಾಣವು 30,000ರಿಂದ 40,000ದಷ್ಟಿದೆ. ಫೆಬ್ರುವರಿ ಆರಂಭದಲ್ಲಿ ನಿತ್ಯ 2.52 ಲಕ್ಷ ಡೋಸ್‌ ಲಸಿಕೆ ವಿತರಿಸಲಾಗಿತ್ತು. ಜನರು ನಿರ್ದಿಷ್ಟ ಲಸಿಕೆಯನ್ನೇ ಕೇಳುತ್ತಿರುವುದರಿಂದ ಆಸ್ಟ್ರಾಜೆನಿಕಾ ಲಸಿಕೆ ಡೋಸ್‌ಗಳು ಬಳಕೆಯಾಗದೆ ಉಳಿದಿರುವುದಾಗಿ ತಿಳಿಸಿದ್ದಾರೆ.

ಬಳಕೆಯ ಅವಧಿ ಕನಿಷ್ಠ ನಾಲ್ಕು ತಿಂಗಳ ವರೆಗೂ ಇರುವ ಕೋವಿಡ್‌ ಲಸಿಕೆಗಳನ್ನು ಮಾತ್ರ ಪಡೆಯುವುದಾಗಿ ಕೀನ್ಯಾ ಹೇಳಿದೆ. ಉಗಾಂಡಾ, ವಾಲಾವಿ, ಸೆನೆಗಲ್‌ ಹಾಗೂ ನೈಜೀರಿಯಾದಲ್ಲೂ ಕೋವಿಡ್‌ ಲಸಿಕೆ ಡೋಸ್‌ಗಳ ಅವಧಿ ಮುಕ್ತಾಯವಾಗಿರುವ ಬಗ್ಗೆ ವರದಿಯಾಗಿವೆ.

ಈವರೆಗೂ ಕೀನ್ಯಾದಲ್ಲಿ 80 ಲಕ್ಷ ಜನರು ಲಸಿಕೆಯ ಪೂರ್ಣ ಡೋಸ್‌ ಹಾಕಿಸಿಕೊಂಡಿದ್ದಾರೆ. ಆಸ್ಟ್ರಾಜೆನಿಕಾ, ಮಾಡರ್ನಾ, ಫೈಝರ್‌, ಸಿನೊಫಾರ್ಮ್‌ ಹಾಗೂ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಬ್ರ್ಯಾಂಡ್‌ಗಳ ಒಟ್ಟು 2.70 ಕೋಟಿ ಡೋಸ್‌ ಲಸಿಕೆಯನ್ನು ಕೀನ್ಯಾ ಪಡೆದುಕೊಂಡಿದೆ. ಅದರಲ್ಲಿ 1.74 ಕೋಟಿ ಡೋಸ್‌ಗಳಷ್ಟು ಲಸಿಕೆ ವಿತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT