ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ರೈತ ಬೆಂಬಲಿತ ಹೋರಾಟದ ವೇಳೆ ಖಲಿಸ್ತಾನಿಗಳಿಂದ ಗಾಂಧಿ ಪ್ರತಿಮೆ ವಿರೂಪ

Last Updated 13 ಡಿಸೆಂಬರ್ 2020, 2:36 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಭಾರತ ಮೂಲದ ಅಮೆರಿಕ ಸಿಖ್ಖರು ವಾಷಿಂಗ್ಟ್‌ನ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಕೆಲ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ.

ಭಾರತದಲ್ಲಿ ಚಳವಳಿ ನಿರತ ರೈತರ ಪರವಾಗಿ ಒಗ್ಗಟ್ಟು ಪ್ರದರ್ಶಿಸಲು ಗ್ರೇಟರ್ ವಾಷಿಂಗ್ಟನ್ ಡಿಸಿ, ಮೇರಿಲ್ಯಾಂಡ್ ಮತ್ತು ವರ್ಜೀನಿಯಾದ ಸುತ್ತಮುತ್ತಲಿನ ನೂರಾರು ಸಿಖ್ಖರು ಮತ್ತು ನ್ಯೂಯಾರ್ಕ್, ನ್ಯೂಜೆರ್ಸಿ, ಪೆನ್ಸಿಲ್ವೇನಿಯಾ, ಇಂಡಿಯಾನಾ, ಓಹಿಯೋ ಮತ್ತು ಉತ್ತರ ಕೆರೊಲಿನಾದಿಂದ ನೂರಾರು ಮಂದಿ ಶನಿವಾರ ಭಾರತೀಯ ರಾಯಭಾರ ಕಚೇರಿಗೆ ಕಾರ್ ರ‍್ಯಾಲಿ ನಡೆಸಿದರು.

ಹೋರಾಟ ಶಾಂತಿಯುತವಾಗಿ ನಡೆಯುತ್ತಿದ್ದ ನಡುವೆಯೇ ಕೆಲ ಪ್ರತ್ಯೇಕತಾವಾದಿ ಸಿಖ್ಖರು "ಖಲಿಸ್ತಾನ್ ರಿಪಬ್ಲಿಕ್‌" ಎಂಬ ಧ್ವಜ ಹಿಡಿದು ಘೋಷಣೆ ಕೂಗಲಾರಂಭಿಸಿದರು. ಭಾರತ ವಿರೋಧಿ ಪೋಸ್ಟರ್‌, ಬ್ಯಾನರ್‌ಗಳನ್ನು ಪ್ರದರ್ಶಿಸಿದರು.

ಕಿರ್ಪಾನ್‌ (ಚಾಕು) ಪ್ರದರ್ಶಿಸಿದ ಪ್ರತ್ಯೇಕತಾವಾದಿ ಸಿಖ್ಖರ ಗುಂಪು ಮಹಾತ್ಮಾ ಗಾಂಧಿ ಪ್ರತಿಮೆ ಇದ್ದ ಪ್ರಾಂಗಣಕ್ಕೆ ಜಿಗಿದು, ಪ್ರತಿಮೆಗೆ ಪೋಸ್ಟರ್‌ಗಳನ್ನು ಅಂಟಿಸಿತು. ಭಾರತ ವಿರೋಧಿ, ಖಲಿಸ್ತಾನ ಪರ ಘೋಷಣೆ ಕೂಗಿತು.

ಪ್ರತಿಭಟನಾಕಾರರ ಸೋಗಿನಲ್ಲಿ ನಡೆದ ಈ ಕೃತ್ಯವನ್ನು ಭಾರತೀಯ ರಾಯಭಾರ ಕಚೇರಿಯು ಟೀಕಿಸಿದೆ. ಇದೊಂದು ದುಷ್ಕೃತ್ಯ ಎಂದು ಖಂಡಿಸಿದೆ.

'ರಾಯಭಾರ ಕಚೇರಿಯ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕ ಪ್ಲಾಜಾದಲ್ಲಿರುವ ಗಾಂಧಿಯವರ ಪ್ರತಿಮೆಯನ್ನು ಡಿಸೆಂಬರ್ 12 ರಂದು ಖಲಿಸ್ತಾನಿ ಪರ ಶಕ್ತಿಗಳು ಅಪವಿತ್ರಗೊಳಿಸಿವೆ. ಶಾಂತಿ ಮತ್ತು ನ್ಯಾಯದ ಪ್ರತಿಪಾದನೆಗೆ ಗಾಂಧೀಜಿ ಸಾರ್ವತ್ರಿಕ ಹೆಗ್ಗುರುತು. ಎಲ್ಲರಿಂದಲೂ ಗೌರವಿಸಲ್ಪಡುವ ಗಾಂಧಿ ಪ್ರತಿಮೆಯನ್ನು ಪ್ರತಿಭಟನಾಕಾರರ ಸೋಗಿನಲ್ಲಿ ಬಂದ ಗೂಂಡಾಗಗಳು ವಿರೂಪಗೊಳಿಸಿರುವುದು ದುಷ್ಕೃತ್ಯ' ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.

ಘಟನೆ ಸಂಬಂಧ ರಾಯಭಾರ ಕಚೇರಿಯು ಕಾನೂನು ಕ್ರಮ ಆರಂಭಿಸಿದೆ. ವಾಷಿಂಗ್ಟನ್ ಡಿಸಿ ಪೊಲೀಸ್ ಮತ್ತು ಸೀಕ್ರೆಟ್ ಸರ್ವೀಸಸ್ ಸಂಸ್ಥೆಯ ಉಪಸ್ಥಿತಿಯಲ್ಲೇ ಈ ಘಟನೆ ನಡೆದಿರುವುದು ಗಮನಾರ್ಹ.

ಇದಾದ ಅರ್ಧ ಘಂಟೆಯ ಬಳಿಕ, ಖಲಿಸ್ತಾನ್ ಪರ ಬೆಂಬಲಿಗರ ಮತ್ತೊಂದು ಗುಂಪು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ಪ್ರತಿಮೆಯ ಕುತ್ತಿಗೆಗೆ ನೇತುಹಾಕಿತು.

10 ವರ್ಷ ಜೈಲು ಕಾನೂನು

ಅಮೆರಿಕದ ಸ್ಮಾರಕ, ಪ್ರತಿಮೆಯನ್ನು ನಾಶಪಡಿಸುವುದು, ಹಾನಿಗೊಳಿಸುವುದು, ಧ್ವಂಸ ಮಾಡುವುದು ಅಥವಾ ಅಪವಿತ್ರಗೊಳಿಸಿದರೆ ಅಪರಾಧಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಕಾನೂನಿಗೆ ಡೊನಾಲ್ಡ್‌ ಟ್ರಂಪ್‌ ಅವರು ಇದೇ ವರ್ಷದ ಜೂನ್‌ನಲ್ಲಿ ಸಹಿ ಮಾಡಿದ್ದಾರೆ.

ಪ್ರತಿಮೆ ಅನಾವರಣ ಮಾಡಿದ್ದು ವಾಜಪೇಯಿ

ವಾಷಿಂಗ್ಟನ್‌ ಡಿಸಿಯ ಭಾರತೀಯ ರಾಯಭಾರಿ ಕಚೇರಿ ಎದುರು ಗಾಂಧಿ ಪ್ರತಿಮೆ ಸ್ಥಾಪಿಸುವ ನಿರ್ಣಯವನ್ನು ಅಮೆರಿಕ 1998ರಲ್ಲಿ ಕೈಗೊಂಡಿತ್ತು. 2000ರಲ್ಲಿ ಅಂದಿನ ಭಾರತ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಅಂದಿನ ಅಮೆರಿಕ ಅಧ್ಯಕ್ಷ ಬಿನ್‌ ಕ್ಲಿಂಟನ್‌ ಈ ಪ್ರತಿಮೆ ಅನಾವರಣಗೊಳಿಸಿದ್ದರು.

ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, ಬೆಲೆ ಖಾತರಿಗೆ ರೈತರ ಒಪ್ಪಿಗೆ (ಸಶಕ್ತೀಕರಣ ಮತ್ತು ರಕ್ಷಣೆ) ಕಾಯ್ದೆ ಮತ್ತು ಕೃಷಿ ಸೇವೆಗಳು ಮತ್ತು ಅಗತ್ಯ ವಸ್ತು ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ಪಂಜಾಗ್‌, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನದ ರೈತರು ದೆಹಲಿ ಹೊರ ವಲಯದಲ್ಲಿ ಎರಡು ವಾರಗಳಿಂದ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT