ಕುವೈತ್: ತೈಲ ಸೋರಿಕೆ ಹಿನ್ನೆಲೆಯಲ್ಲಿ ಕುವೈತ್‌ನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯು ತುರ್ತು ಪರಿಸ್ಥಿತಿ ಘೋಷಿಸಿದೆ. ಆದರೆ, ಈವರೆಗೆ ಯಾವುದೇ ಹಾನಿ ಮತ್ತು ತೈಲ ಉತ್ಪಾದನೆಗೆ ತೊಡಕಾದ ಬಗ್ಗೆ ವರದಿ ಬಂದಿಲ್ಲ.
ದೇಶದ ಪಶ್ಚಿಮ ಭಾಗದಲ್ಲಿ ತೈಲ ಸೋರಿಕೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
'ತೈಲ ಸೋರಿಕೆಯಿಂದಾಗಿ ಯಾರಿಗೂ ಗಾಯಗಳಾಗಿಲ್ಲ, ಉತ್ಪಾದನೆ ಮೇಲೆ ಪರಿಣಾಮ ಬೀರಿಲ್ಲ. ನೆಲದ ಮೇಲೆ ತೈಲ ಸೋರಿಕೆಯಾಗಿದೆ. ಆದರೆ, ಜನವಸತಿ ಪ್ರದೇಶದಲ್ಲಿ ಅಲ್ಲ’ಎಂದು ಕಂಪನಿಯ ವಕ್ತಾರ ಕುಸೈ ಅಲ್ ಅಮೆರ್ ಹೇಳಿದ್ದಾರೆ. ಅದು ವಿಷಕಾರಿ ಅನಿಲ ಅಲ್ಲ ಎಂದೂ ಅವರು ತಿಳಿಸಿದ್ದಾರೆ.
ತೈಲ ಸೋರಿಕೆ ಸಮಸ್ಯೆ ಬಗೆಹರಿಸಲು ತಂಡವನ್ನು ನಿಯೋಜಿಸಲಾಗಿದೆ ಎಂದ ಅವರು, ನಿರ್ದಿಷ್ಟ ಸ್ಥಳದ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಕುವೈತ್‌ನ ಅಲ್ ರೈ ದಿನಪತ್ರಿಕೆಯು ಕೊಳವೆಯಿಂದ ತೈಲ ಸೋರಿಕೆಯಾಗುತ್ತಿರುವ ವಿಡಿಯೊವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದರಲ್ಲಿ ಅಪಾರ ಪ್ರಮಾಣದ ತೈಲ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ.
ಪ್ರಮುಖ ತೈಲ ಸರಬರಾಜು ದೇಶಗಳಲ್ಲಿ ಒಂದಾದ ಕುವೈತ್‌ನ ಶೇಕಡ 90ರಷ್ಟು ಆದಾಯ ತೈಲ ಮಾರಾಟದಿಂದಲೇ ಬರುತ್ತದೆ. ಪೆಟ್ರೋಲಿಯಂ ರಫ್ತು ದೇಶಗಳ ಒಕ್ಕೂಟದಲ್ಲಿ(ಒಪೆಕ್) ಪ್ರಮುಖವಾಗಿರುವ ಕುವೈತ್, ದಿನಕ್ಕೆ 27 ಲಕ್ಷ ಬ್ಯಾರಲ್ ತೈಲವನ್ನು ರಫ್ತು ಮಾಡುತ್ತದೆ.
2016 ಮತ್ತು 2020ರಲ್ಲೂ ಕುವೈತ್‌ನಲ್ಲಿ ತೈಲ ಸೋರಿಕೆ ಬಗ್ಗೆ ವರದಿಯಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.