ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ವಿರುದ್ಧದ ಅವಿಶ್ವಾಸಕ್ಕೆ ಸೋಲು

Last Updated 17 ಮೇ 2022, 10:47 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ವಿರುದ್ಧ ಸಂಸತ್ತಿನಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿದೆ. ರಾಜಪಕ್ಸ ವಿರುದ್ಧ ದೇಶವ್ಯಾಪಿ ವ್ಯಕ್ತವಾಗಿರುವ ಆಕ್ರೋಶದ ನಡುವೆಯೂ ಅವರಿಗೆ ದೊರೆತ ಜಯ ಇದಾಗಿದೆ.

ವಿರೋಧಪಕ್ಷ ತಮಿಳು ನ್ಯಾಷನಲ್ ಅಲೈಯನ್ಸ್‌ (ಟಿಎನ್‌ಎ) ಸದಸ್ಯ ಎಂ.ಎ.ಸುಮಂತಿರನ್‌ ಅವರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. 119 ಸದಸ್ಯರು ಇದರ ವಿರುದ್ಧ ಮತ ಚಲಾಯಿಸಿದರೆ 68 ಸದಸ್ಯರು ಪರವಾಗಿ ಮತ ಚಲಾಯಿಸಿದರು.

ವಿರೋಧಪಕ್ಷ ಸಮಗಿಜನ ಬಲವೆಗಯ (ಎಸ್‌ಜೆಪಿ) ಸದಸ್ಯ ಲಕ್ಷ್ಮಣ್ ಕಿರಿಲ್ಲಾ ನಿರ್ಣಯವನ್ನು ಬೆಂಬಲಿಸಿದರು ಎಂದು ಎಕಾನಮಿ ನೆಕ್ಸ್ಟ್‌ ಪತ್ರಿಕೆ ವರದಿ ಮಾಡಿದೆ.

ಆರ್ಥಿಕ ಬಿಕ್ಕಟ್ಟಿನ ಕಾರಣ ಅಧ್ಯಕ್ಷರ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ರಾಜೀನಾಮೆಗೆ ಒತ್ತಾಯಿಸಲಾಗುತ್ತಿದೆ. ಅವರ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸುವ ನಿರ್ಣಯ ಕುರಿತು ಚರ್ಚೆಯಾಗಬೇಕು ಎಂದು ಒತ್ತಾಯಿಸಲಾಗಿತ್ತು.

ಪ್ರಧಾನಿಯಾಗಿದ್ದ ಅಧ್ಯಕ್ಷರ ತಮ್ಮ ಮಹಿಂದಾ ರಾಜಪಕ್ಷ ಮೇ 9ರಂದು ರಾಜೀನಾಮೆ ನೀಡಿದ್ದರು. ಬಳಿಕ ಸರ್ವಪಕ್ಷಗಳ ಮಧ್ಯಂತರ ಸರ್ಕಾರ ರಚನೆಯಾಗಿತ್ತು. ರಾನಿಲ್‌ ವಿಕ್ರಮಸಿಂಘೆ ಪ್ರಧಾನಿಯಾಗಿ ನೇಮಕಗೊಂಡಿದ್ದರು.

ಅಜಿತ್ ರಾಜಪಕ್ಸ ಡೆಪ್ಯುಟಿ ಸ್ಪೀಕರ್

ಶ್ರೀಲಂಕಾ ಸಂಸತ್ತಿನ ಉಪಾಧ್ಯಕ್ಷರಾಗಿ ಆಡಳಿತ ಪಕ್ಷದ ಸದಸ್ಯ ಅಜಿತ್ ರಾಜಪಕ್ಸ ಆಯ್ಕೆಯಾಗಿದ್ದಾರೆ. ಸರ್ವಪಕ್ಷಗಳ ಸರ್ಕಾರ ರಚನೆಯ ನಂತರ ಇದೇ ಮೊದಲ ಬಾರಿಗೆ ಸಂಸತ್‌ ಅಧಿವೇಶನ ನಡೆಯಿತು.

ಗೋಪ್ಯವಾಗಿ ನಡೆದ ಮತದಾನದಲ್ಲಿ ಆಡಳಿತ ಪಕ್ಷ ಶ್ರೀಲಂಕಾ ಪೊಡುಜನ ಪೆರಮುನ ಪಾರ್ಟಿಯ, 48 ವರ್ಷದ ಅಜಿತ್ ಆಯ್ಕೆಯಾದರು. ಅಜಿತ್ ಪರವಾಗಿ 109 ಮತಗಳು, ಪ್ರತಿಪಕ್ಷದ ಸಮಗಿ ಜನ ಬಲವೆಗಯ ಪಕ್ಷದ ರೋಹಿಣಿ ಕವಿರತ್ನ ಅವರಿಗೆ 78 ಮತಗಳು ಬಂದವು.

ಅಜಿತ್ ಅವರು ಅಧ್ಯಕ್ಷ ಗೋಟಬಯ ರಾಜಪಕ್ಸ ಕುಟುಂಬದವರಲ್ಲ. ಆದರೆ, ಅಧ್ಯಕ್ಷರು ಪ್ರತಿನಿಧಿಸುವ ಹಂಬನಟೋಟಾ ಜಿಲ್ಲೆಯವರೇ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT