ಭಾನುವಾರ, ಜನವರಿ 24, 2021
27 °C

ಕೋವಿಡ್‌ ರೋಗಿಗಳಿಗೆ ಹಾಸಿಗೆಯೇ ಇಲ್ಲದಂತಾಗಲಿದೆ: ಲಂಡನ್‌ ಮೇಯರ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ‘ಕೋವಿಡ್‌ ಪ್ರಕರಣಗಳು ಏರುಗತಿಯಲ್ಲೇ ಸಾಗಿದರೆ ಮುಂದಿನ ಕೆಲ ವಾರಗಳಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆಯೇ ಇಲ್ಲದಂತಾಗಬಹುದು. ಇದು ಕಟು ಸತ್ಯ’ ಎಂದು ಲಂಡನ್‌ ಮೇಯರ್‌ ಸಾದಿಕ್‌ ಖಾನ್‌ ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದಾರೆ.

‘ಕೋವಿಡ್‌ನಿಂದಾಗಿ ಲಂಡನ್‌ ನಗರ ತತ್ತರಿಸಿದೆ. ಈ ವೈರಾಣು ಹೊಸ ಬಿಕ್ಕಟ್ಟನ್ನೇ ಸೃಷ್ಟಿಸಿದೆ. ಹೀಗಾಗಿ ಇದನ್ನು ದುರಂತವೆಂದು ಘೋಷಿಸಿದ್ದೇವೆ. ಈ ವೈರಾಣುವಿಗೆ ಕಡಿವಾಣ ಹಾಕಲು ನಾವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದೇ ಹೋದರೆ ನಮ್ಮ ನ್ಯಾಷನಲ್‌ ಹೆಲ್ತ್‌ ಸರ್ವಿಸ್‌ (ಎನ್‌ಎಚ್‌ಎಸ್‌) ಮೇಲೆ ಮತ್ತಷ್ಟು ಒತ್ತಡ ಬೀಳಲಿದ್ದು ಇನ್ನಷ್ಟು ಮಂದಿ ಪ್ರಾಣ ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಲಿದೆ’ ಎಂದು ಖಾನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಲಂಡನ್‌ ನಿವಾಸಿಗಳ ಪೈಕಿ ಪ್ರತಿ 30 ಜನರಲ್ಲಿ ಒಬ್ಬರಿಗೆ ಕೋವಿಡ್‌ ತಗುಲಿರಬಹುದೆಂದು ಅಂದಾಜಿಸಲಾಗಿದೆ. ಹಿಂದಿನ ಒಂದು ವಾರದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್‌ ರೋಗಿಗಳ ಸಂಖ್ಯೆಯಲ್ಲಿ ಶೇ 27ರಷ್ಟು ಏರಿಕೆ ಕಂಡುಬಂದಿದೆ. ವೆಂಟಿಲೇಟರ್‌ ನೆರವಿನಿಂದ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಶೇ 42ರಷ್ಟು ಹೆಚ್ಚಿದೆ. ಹೀಗಾಗಿ ಬ್ರಿಟನ್‌ ಸರ್ಕಾರವು ಶೀಘ್ರವೇ ನಮ್ಮ ನೆರವಿಗೆ ಬರಬೇಕು. ಇದನ್ನು ದುರಂತವೆಂದು ಘೋಷಿಸಿರುವುದರಿಂದ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಮೇಲೆ ಒತ್ತಡ ಹೆಚ್ಚಬಹುದು. ಆಗಲಾದರೂ ಅವರು ಕೋವಿಡ್‌ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬಹುದು’ ಎಂದೂ ಪ್ರಕಟಣೆ ವಿವರಿಸಿದೆ.

‘ಲಂಡನ್‌ ನಗರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಹೋದ ಏಪ್ರಿಲ್‌ಗೆ ಹೋಲಿಸಿದರೆ ಈಗ ಪರಿಸ್ಥಿತಿ ಮತ್ತಷ್ಟು ವಿಷಮವಾಗಿದೆ. ಲಂಡನ್‌ನ ಜನರು ಕೋವಿಡ್‌ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಗತ್ಯವಿದ್ದರಷ್ಟೇ ಮನೆಯಿಂದ ಹೊರಬರಬೇಕು’ ಎಂದೂ ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು